ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಮಂಡಿಸಿರುವ ಬಜೆಟ್‌ನ ಶೇ.91 ರಷ್ಟುಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ. ಹೀಗಿರುವಾಗ ಚುನಾವಣಾ ಹೊಸ್ತಿಲಿನಲ್ಲಿ ಮತ್ತೆ ಸುಳ್ಳು ಭಾಷಣಗಳ ಬಜೆಟ್‌ ಮಂಡಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ಚೆಂಡು ಹೂವು ಇಟ್ಟು​ಕೊಂಡು ಪ್ರತಿಭಟಿಸಿದರು.

ವಿಧಾನಸಭೆ (ಫೆ.18): ಚುನಾವಣೆ ಪೂರ್ವದ ಹಾಗೂ ಬಿಜೆಪಿ ಸರ್ಕಾರ ಮಂಡಿಸಿದ ಕಟ್ಟಕಡೆಯ ಆಯವ್ಯಯವು ರಾಜ್ಯದ ಜನತೆಯನ್ನು ಮೂರ್ಖರನ್ನಾಗಿಸುವ ಭರವಸೆಗಳ ಸರಮಾಲೆ ಹೊಂದಿರುತ್ತದೆ ಎಂದು ಬಿಂಬಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ ಶಾಸಕರು ಸ್ವತಃ ಕಿವಿ ಮೇಲೆ ಚೆಂಡು ಹೂವು ಇಟ್ಟು​ಕೊಂಡು ಸದನದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.

ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಮಂಡಿಸಿರುವ ಬಜೆಟ್‌ನ ಶೇ.91 ರಷ್ಟುಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ. ಹೀಗಿರುವಾಗ ಚುನಾವಣಾ ಹೊಸ್ತಿಲಿನಲ್ಲಿ ಮತ್ತೆ ಸುಳ್ಳು ಭಾಷಣಗಳ ಬಜೆಟ್‌ ಮಂಡಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ಚೆಂಡು ಹೂವು ಇಟ್ಟು​ಕೊಂಡು ಪ್ರತಿಭಟಿಸಿದರು. ಇದೇ ವೇಳೆ ನೀವು ರಾಜ್ಯದ ಜನತೆಯ ಕಿವಿ ಮೇಲೆ ಹೂವು ಬಿಡಲು ನಾವು ಬಿಡುವುದಿಲ್ಲ ಎಂದು ಠೇಂಕರಿಸಿದರು. ಹೂವು ಮುಡಿದು ಬಂದ ಕಾಂಗ್ರೆಸ್ಸಿಗರನ್ನು ಮುಖ್ಯಮಂತ್ರಿ ಬೊಮ್ಮಾಯಿ ಆದಿಯಾಗಿ ಬಿಜೆಪಿ ಸದಸ್ಯರು ಛೇಡಿಸಲು ಮುಂದಾದಾಗ ಕೆಲ ಕಾಲ ವಾಗ್ವಾದವೂ ನಡೆಯಿತು.

ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ: ಬಜೆಟ್ ಘೋಷಣೆಗೆ ಸಚಿವ ಅಶ್ವತ್ಥ್‌ ಸಂತಸ

ಭಾಷಣ ನಿಲ್ಲಿ​ಸಿದ ಸಿಎಂ: ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್‌ ಭಾಷಣ ಓದಲು ಶುರು ಮಾಡಿದ ತಕ್ಷಣ ಕಾಂಗ್ರೆಸ್‌ ಸದಸ್ಯರು ಶಾಸಕಾಂಗ ಪಕ್ಷದ ನಾಯಕರ ಕಚೇರಿಯಿಂದ ಕಿವಿ ಮೇಲೆ ಹೂವು ಇಟ್ಟು​ಕೊಂಡ ಕಾಂಗ್ರೆಸ್‌ ಶಾಸಕರು ಒಬ್ಬೊಬ್ಬರಾಗಿ ಸದನ ಪ್ರವೇಶಿಸಿದರು. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಸದಸ್ಯರ ಕಿವಿ ಮೇಲೆ ಹೂವು ಕಂಡು ಬಜೆಟ್‌ ಭಾಷಣ ನಿಲ್ಲಿಸಿದ ಬೊಮ್ಮಾಯಿ, ‘ನೀವು ಕಳೆದ ಐದು ವರ್ಷ ಜನರಿಗೆ ಮುಡಿಸಿದ್ದ ಹೂವು ಈಗ ಜನರೇ ನಿಮಗೆ ಮುಡಿಸಿದ್ದಾರೆ’ ಎಂದು ಗೇಲಿ ಮಾಡಿದರು.

ಪರಸ್ಪರ ವಾಗ್ವಾದ: ಇದರಿಂದ ಕೆರಳಿದ ಸಿದ್ದರಾಮಯ್ಯ, ನಾವು ಕಿವಿ ಮೇಲೆ ಹೂ ಇಟ್ಟುಕೊಂಡಿರುವುದು ಈ ಬಜೆಟ್‌ ಮೂಲಕ ನೀವು ರಾಜ್ಯದ 7 ಕೋಟಿ ಜನರ ಕಿವಿ ಮೇಲೆ ಹೂವು ಇಡುತ್ತಿದ್ದೀರಿ ಎಂಬುದನ್ನು ತೋರಿಸಲು. ಹಿಂದಿನ ಚುನಾವಣೆ ವೇಳೆ ನೀವು ನೀಡಿದ್ದ 600 ಭರವಸೆಗಳಲ್ಲಿ 57 ಭರವಸೆಯನ್ನೂ ಈಡಿರಿಸಿಲ್ಲ. ನಿಮ್ಮ ಸರ್ಕಾರ ಸುಳ್ಳಿನ ಫ್ಯಾಕ್ಟರಿ ಎಂದು ಹರಿಹಾಯ್ದರು. ಮಧ್ಯಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಿದ್ದರಾಮಯ್ಯ ಅವರೇ ನೀವು ಬಜೆಟ್‌ ಭಾಷಣ ಮುಗಿದ ಮೇಲೆ ಮಾತನಾಡಿ. ಈಗ ಬಜೆಟ್‌ ಮಂಡಿಸಲು ಬಿಡದೆ ಮಾತನಾಡುವುದು ಸರಿಯಲ್ಲ ಎಂದರು. ಇದಕ್ಕೆ ಸಿದ್ದರಾಮಯ್ಯ, ಈ ಮಾತನ್ನು ನೀವು ಬೊಮ್ಮಾಯಿ ಅವರಿಗೆ ಹೇಳಿ. 

ನಮ್ಮ ಬಗ್ಗೆ ಅವರು ಹೇಳಿದ ರಾಜಕೀಯ ಹೇಳಿಕೆಗಳು ಬಜೆಟ್‌ ಭಾಷಣವೇ? ಅವರಿಗೆ ಯಾಕೆ ನೀವು ಹೇಳಿಲ್ಲ? ಎಂದು ಪ್ರಶ್ನಿಸಿದರು. ಸಚಿವರಾದ ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಸೇರಿ ಹಲವರು ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪಿಸಲು ಮುಂದಾದಾಗ ಸಿದ್ದರಾಮಯ್ಯ ಅವರು ಅಶ್ವತ್ಥನಾರಾಯಣ್‌ ಮೇಲೆ ಹರಿಹಾಯ್ದರು. ನಿನಗೆ ಮಾತನಾಡುವ ಯೋಗ್ಯತೆಯಿಲ್ಲ ಕುಳಿತುಕೋ? ನಿನ್ನ ಹೆದರಿಕೆಗೆ ನಾನು ಜಗ್ಗುವುದಿಲ್ಲ ಎಂದು ಕಿಡಿ ಕಾರಿದರು. ಈ ವೇಳೆ ಸಮಾಧಾನಗೊಂಡ ಬೊಮ್ಮಾಯಿ, ಸದಸ್ಯರು ಸದನದಲ್ಲಿ ಕಿವಿಗೆ ಹೂವು ಇಟ್ಟುಕೊಳ್ಳುವುದು ಸರಿಯಾ​ದ ಕ್ರಮವಲ್ಲ. ಆದರೂ, ಅವರು ಹೂ ಇಟ್ಟುಕೊಂಡೇ ಕೂರುತ್ತೇವೆ ಎಂದು ತೀರ್ಮಾನಿಸಿದ್ದರೆ ಅವರಿಚ್ಛೆ. ಮುಂದಿನ ಸಲವೂ ಕಿವಿ ಮೇಲೆ ಹೂ ಇಟ್ಟುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.

ಈ ರೀತಿಯಾದರೂ ಕೇಸರಿ ಮುಡಿದಿದ್ದೀರಿ: ಸ್ಪೀಕರ್‌ ಕಾಗೇರಿ ಅವರು, ನಮ್ಮದು ಕೇಸರಿ ಬಣ್ಣ ಎನ್ನುತ್ತೀರಿ. ಈಗ ನೀವೇ ಕೇಸರಿ ಬಣ್ಣದ ಹೂವು ಮುಡಿದಿದ್ದೀರಿ. ಈ ರೀತಿಯಾದರೂ ನಮಗೆ ಸಮಾಧಾನ ಆಯಿತು ಎಂದು ಸಿದ್ದರಾಮಯ್ಯ ಕಾಲೆಳೆದರು. ಇದಕ್ಕೆ ಸಿದ್ದರಾಮಯ್ಯ, ಅಧ್ಯಕ್ಷರೇ ನಿಮ್ಮ ಬಣ್ಣ ಬಯಲಾಗಿದೆ, ನಾವು ನಿಮ್ಮಂತೆ ಅಲ್ಲ. ನೀವು ಯಾವ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳುತ್ತೀರಿ ಎಂಬುದೆಲ್ಲಾ ಬಯಲಾಗಿದೆ ಎಂದು ತಿರುಗೇಟು ನೀಡಿದರು. ಚರ್ಚೆ ನಿಂತು ಕಲಾಪ ತಿಳಿಯಾಗಿದ್ದರಿಂದ ಬೊಮ್ಮಾಯಿ ಬಜೆಟ್‌ ಓದುವುದನ್ನು ಮುಂದುವರೆಸಿದರು.

ಕಾಂಗ್ರೆಸ್‌ನವರಿಗೆ ಚೆಂಡುಹೂವು ಇನ್ನೂ ಪರ್ಮನೆಂಟ್: ಸಿ.ಟಿ.ರವಿ ವ್ಯಂಗ್ಯ

ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಆಂದೋ​ಲ​ನ: ಆಯವ್ಯಯದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡುವಾಗಲೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಎಲ್ಲ ಕಾಂಗ್ರೆಸ್‌ ನಾಯಕರು ಕಿವಿ​ಯಲ್ಲಿ ಚೆಂಡು ಹೂವು ಇಟ್ಟು​ಕೊಂಡೇ ಪ್ರತಿಕ್ರಿಯೆ ನೀಡಿದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಕಿವಿ ಮೇಲೆ ಹೂವು ಇಟ್ಟು​ಕೊಂಡ ಜನರ ಫೋಟೋಗಳೊಂದಿಗೆ ಬಿಜೆಪಿ ಸರ್ಕಾರ ಯಾವ ಯಾವ ವಿಚಾರಗಳಲ್ಲಿ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದೆ ಎಂಬುದನ್ನು ಬಿಂಬಿಸುವ ಆಂದೋಲನ ನಡೆ​ಸ​ಲಾ​ಯಿ​ತು.