* ಒಂದು ಸಲಕ್ಕೆ ಬೈಕ್‌ಗೆ 1000 ರು.ವರೆಗೆ ಪೆಟ್ರೋಲ್* ಆರ್ಥಿಕ ಬಿಕ್ಕಟ್ಟು: ಪಡಿತರದಂತೆ ಪೆಟ್ರೋಲ್ ವಿತರಿಸಲು ಲಂಕಾ ನಿರ್ಧಾರ* ಕಾರು, ಜೀಪಿಗೆ 5000 ರು.ವರೆಗೆ ತೈಲ
ಕೊಲಂಬೋ:(ಏ.16) ಶ್ರೀಲಂಕಾದಲ್ಲಿ ಭಾರೀ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪಡಿತರದ ರೀತಿ ಸೀಮಿತ ಪ್ರಮಾಣದಲ್ಲಿ ವಿತರಿಸುವಂತೆ ವಿತರಣೆ ಮಾಡುವುದಾಗಿ ಸರ್ಕಾರ ಶುಕ್ರವಾರ ಘೋಷಿಸಿದೆ. ಈ ಕ್ರಮವು ತತ್‌ಕ್ಷಣದಿಂದಲೇ ಜಾರಿಗೆ ಬರುವುದಾಗಿ ತಿಳಿಸಿದೆ.
ಈ ಪ್ರಕಾರ, ಒಂದು ಸಲಕ್ಕೆ ಮೋಟಾರ್ ಸೈಕಲ್ ಅಥವಾ ದ್ವಿಚಕ್ರ ವಾಹನಗಳು ಪೆಟ್ರೋಲ್ ಬಂಕ್‌ಗಳಲ್ಲಿ ಗರಿಷ್ಠ 1000 ರು. ವರೆಗೆ ಮಾತ್ರ ತೈಲ ಖರೀದಿಸಬಹುದು. ತ್ರಿಚಕ್ರ ವಾಹನಗಳು ಗರಿಷ್ಠ 1,500 ರು. ವರೆಗೆ ಹಾಗೂ ಕಾರು, ಜೀಪು, ವ್ಯಾನುಗಳು ಗರಿಷ್ಠ 5000 ರು. ವರೆಗೆ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಬಹುದು. ಇನ್ನು ಬಸ್ಸು, ಲಾರಿ ಮತ್ತಿತರ ವಾಣಿಜ್ಯ ವಾಹನಗಳು ಈ ನಿರ್ಬಂಧದಿಂದ ವಿನಾಯ್ತಿ ಪಡೆಯಲಿವೆ ಎಂದು ತಿಳಿಸಿದೆ.
ಆರ್ಥಿಕ ಪತನದಿಂದಾಗಿ ಭಾರೀ ಪ್ರಮಾಣದ ತೈಲ ಕೊರತೆ ಸೃಷ್ಟಿಯಾಗಿರುವುದು ಶ್ರೀಲಂಕಾ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ವಿದ್ಯುತ್, ಅಗತ್ಯ ವಸ್ತುಗಳ ಕೊರತೆಯೂ ಉಂಟಾಗಿ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲಂಕಾದಲ್ಲಿ ಮಾಸಾಂತ್ಯಕ್ಕೆ ಡೀಸೆಲ್ ಖಾಲಿ
ಈಗಾಗಲೇ ತೀವ್ರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಶ್ರೀಲಂಕಾ ಮತ್ತೊಂದು ಭಾರೀ ಬಿಕ್ಕಟ್ಟಿನ ಕೂಪಕ್ಕೆ ನೂಕಲ್ಪಡುವ ಅಪಾಯ ಎದುರಿಸುತ್ತಿದೆ. ಭಾರತ ನೀಡಿದ್ದ 500 ದಶಲಕ್ಷ ಡಾಲರ್ ಸಾಲದ ಹಣ ಖಾಲಿ ಆಗುತ್ತಿದ್ದು, ಏಪ್ರಿಲ್ ಅಂತ್ಯಕ್ಕೆ ದೇಶದಲ್ಲಿನ ಡೀಸೆಲ್ ದಾಸ್ತಾನು ಖಾಲಿ ಆಗುವ ಭೀತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೂ ಹಣವಿಲ್ಲದಂತಾಗಿದ್ದು, ಶೀಘ್ರದಲ್ಲೇ ತುರ್ತು ಚಿಕಿತ್ಸೆ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಇದರ ನಡುವೆ, ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳು ಸಿಡಿದೆದ್ದಿವೆ. ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಸದೇ ಇದ್ದರೆ ಗೋಟಬಾಯ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದು ಪ್ರಮುಖ ವಿಪಕ್ಷ ಎಚ್ಚರಿಸಿದೆ. ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಮುಖ ವಸ್ತುಗಳ ರಫ್ತು ಶೇ.30ರಷ್ಟುಕುಸಿಯಲಿದ್ದು, ಮತ್ತಷ್ಟುಆರ್ಥಿಕ ಸಂಕಟ ಎದುರಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ 41 ಸಂಸದರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ. ಆದರೂ ತಮಗೆ ಬಹುಮತ ಇದೆ ಎಂದು ರಾಜಪಕ್ಸೆ ಹೇಳಿಕೊಳ್ಳುತ್ತಿದ್ದಾರೆ.
ಡೀಸೆಲ್ ಖಾಲಿ ಭೀತಿ:
ಶ್ರೀಲಂಕಾದಲ್ಲಿ ಡೀಸೆಲ್ ಪ್ರಮುಖ ಇಂಧನವಾಗಿದ್ದು, ತುರ್ತಾಗಿ ತೈಲ ಬೇಕಾದ ಕಾರಣ ಏಪ್ರಿಲ್‌ನಲ್ಲಿ ಪೂರೈಕೆ ಆಗಬೇಕಿದ್ದ ಡೀಸೆಲ್ ಅನ್ನು ಮಾಚ್‌ರ್‍ಗೇ ತರಿಸಿಕೊಂಡಿದೆ. ಇನ್ನು ಭಾರತ ಕೊಟ್ಟಸಾಲದಿಂದ ಏ.15, 18 ಹಾಗೂ 23ರಂದೂ ಡೀಸೆಲ್ ಸ್ಟಾಕ್ ಬರಲಿದೆ. ಆದರೆ ಇದಾದ ನಂತರ, ಭಾರತ ಕೊಟ್ಟಹಣ ಖಾಲಿ ಆಗಲಿದ್ದು, ಡೀಸೆಲ್ ತರಿಸಿಕೊಳ್ಳಲೂ ಹಣವಿಲ್ಲ. ಒಂದು ವೇಳೆ ಭಾರತ ಮತ್ತಷ್ಟುಸಾಲ ಕೊಡದೇ ಹೋದರೆ ಮಾಸಾಂತ್ಯಕ್ಕೆ ಡೀಸೆಲ್ ಸ್ಟಾಕ್ ಖಾಲಿ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
