ಸಾವರಿನ್ ಗೋಲ್ಡ್ ಬಾಂಡ್‌ಗಳ (SGBs) ಮೆಚುರಿಟಿ ಮೇಲಿನ ತೆರಿಗೆ ವಿನಾಯಿತಿ ನಿಯಮದಲ್ಲಿ ಬದಲಾವಣೆ ಪ್ರಸ್ತಾಪಿಸಲಾಗಿದೆ. ಈ ಪ್ರಯೋಜನವು ಇನ್ನು ಮುಂದೆ, ಆರ್‌ಬಿಐನಿಂದ ನೇರವಾಗಿ ಬಾಂಡ್ ಖರೀದಿಸಿ, ಮೆಚುರಿಟಿ ತನಕ ಹೊಂದಿರುವ ಮೂಲ ಹೂಡಿಕೆದಾರರಿಗೆ ಮಾತ್ರ ಅನ್ವಯವಾಗಲಿದೆ.
ನವದೆಹಲಿ (ಫೆ.1): ಸಾವರಿನ್ ಗೋಲ್ಡ್ ಬಾಂಡ್‌ಗಳ (SGBs) ಮೇಲೆ ಮೆಚುರಿಟಿ ಟೈಮ್‌ನಲ್ಲಿ ಸಿಗುವ ಟ್ಯಾಕ್ಸ್ ಫ್ರೀ ಪ್ರಯೋಜನವು, ನೀವು ಅವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ನೇರವಾಗಿ ಮೂಲ ವಿತರಣೆಯ ಸಮಯದಲ್ಲಿ ಖರೀದಿಸಿದ್ದರೆ ಮತ್ತು ಅವುಗಳನ್ನು ಮುಕ್ತಾಯವಾಗುವವರೆಗೆ ಹಿಡಿದಿಟ್ಟುಕೊಂಡಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ತಿದ್ದುಪಡಿಯು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ ಮತ್ತು 2026-27 ತೆರಿಗೆ ವರ್ಷ ಮತ್ತು ನಂತರದ ವರ್ಷಗಳಿಗೆ ಅನ್ವಯಿಸುತ್ತದೆ.
ಹಣಕಾಸು ಮಸೂದೆ 2025 ರ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಸಾವರಿನ್ ಗೋಲ್ಡ್ ಬಾಂಡ್‌ನ ರಿಡಂಪ್ಶನ್‌ನಿಂದ ಉಂಟಾಗುವ ಯಾವುದೇ ಬಂಡವಾಳ ಲಾಭಗಳು... ಒಬ್ಬ ವ್ಯಕ್ತಿಯು ಅವಧಿ ಪೂರ್ಣಗೊಳ್ಳುವವರೆಗೆ ಹೊಂದಿದ್ದರೆ ತೆರಿಗೆಯಿಂದ ವಿನಾಯಿತಿ ಪಡೆಯಲಾಗುತ್ತದೆ' ಎಂದಿದೆ.
SGB ಗಳು ಸರ್ಕಾರಿ ಬೆಂಬಲಿತ ಬಾಂಡ್‌ಗಳಾಗಿದ್ದು, ಹೂಡಿಕೆದಾರರು ಭೌತಿಕ ಚಿನ್ನವನ್ನು ಖರೀದಿಸದೆ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತವೆ. ಭಾರತ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇವುಗಳನ್ನು ನೀಡುತ್ತದೆ ಮತ್ತು ಅವುಗಳ ಮೌಲ್ಯವು ಚಿನ್ನದ ಬೆಲೆಗಳ ಜೊತೆ ಲಿಂಕ್ ಆಗಿರು್ತದೆ. ಚಿನ್ನದ ಬೆಲೆಯಲ್ಲಿನ ಯಾವುದೇ ಹೆಚ್ಚಳದಿಂದ ಲಾಭ ಪಡೆಯುವುದರ ಜೊತೆಗೆ, ಹೂಡಿಕೆದಾರರು ಅರ್ಧ ವಾರ್ಷಿಕವಾಗಿ ಪಾವತಿಸುವ 2.5% ಸ್ಥಿರ ವಾರ್ಷಿಕ ಬಡ್ಡಿದರವನ್ನು ಪಡೆಯುತ್ತಾರೆ.
ಎಂಟು ವರ್ಷಕ್ಕೆ ಈ ಬಾಂಡ್ ಮೆಚುರಿಟಿ ಆಗುತ್ತದೆ. ಆದರೆ, ಐದು ವರ್ಷಗಳ ಕಾಲ ಹಿಡಿದುಟ್ಟುಕೊಂಡ ಬಳಿಕ ನೀವು ಅದನ್ನು ಮಾರಾಟ ಮಾಡಬಹುದು. ಅವು ಭೌತಿಕ ಚಿನ್ನವನ್ನು ಒಳಗೊಂಡಿಲ್ಲದ ಕಾರಣ, ಹೂಡಿಕೆದಾರರು ಸಂಗ್ರಹಣೆ ಅಥವಾ ಭದ್ರತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಈ ಬಾಂಡ್‌ಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಮಾಡಬಹುದು.
ಸರಳವಾಗಿ ಹೇಳುವುದಾದರೆ
ಪ್ರಸ್ತುತ, ನೀವು SGB ಗಳಲ್ಲಿ ಹೂಡಿಕೆ ಮಾಡಿ ಅವುಗಳನ್ನು ಮೆಚುರಿಟಿವರೆಗೆ ಅಂದರೆ 8 ವರ್ಷಗಳ ಕಾಲ ಇಟ್ಟುಕೊಂಡರೆ, ಬಾಂಡ್‌ಗಳನ್ನು ರಿಡೀಮ್ ಮಾಡಿದಾಗ ನೀವು ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಈ ಬಾಂಡ್‌ಗಳನ್ನು RBI ವಿವಿಧ ವರ್ಷಗಳಲ್ಲಿ ಬಹು ಬ್ಯಾಚ್‌ಗಳಲ್ಲಿ ನೀಡುತ್ತದೆ. ಗೊಂದಲವನ್ನು ತಡೆಗಟ್ಟಲು ಈ ತೆರಿಗೆ ವಿನಾಯಿತಿಗೆ ಯಾರು ಅರ್ಹರು ಎಂಬುದನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸುವ ಗುರಿಯನ್ನು ಸರ್ಕಾರ ಈಗ ಹೊಂದಿದೆ.
ಪ್ರಸ್ತಾವಿತ ಬದಲಾವಣೆಯಡಿಯಲ್ಲಿ, ನೀವು RBI ನಿಂದ ಆರಂಭಿಕ ವಿತರಣೆಯ ಸಮಯದಲ್ಲಿ (ಮೂಲ ಸಂಚಿಕೆ) ಸಾವರಿನ್ ಗೋಲ್ಡ್ ಬಾಂಡ್‌ಅನ್ನು ಖರೀದಿಸಿದರೆ ಮತ್ತು ಅದು ಮೆಚುರಿಟಿ ಆಗುವವರೆಗೆ ಬಾಂಡ್ ಅನ್ನು ಹೊಂದಿದ್ದರೆ ಮಾತ್ರ ತೆರಿಗೆ ವಿನಾಯಿತಿ ಅನ್ವಯಿಸುತ್ತದೆ.
ಇದರರ್ಥ ನೀವು ನಂತರ ಬೇರೆಯವರಿಂದ (ಉದಾಹರಣೆಗೆ, ಷೇರು ಮಾರುಕಟ್ಟೆಯಿಂದ) SGB ಖರೀದಿಸಿ ನಂತರ ಅದನ್ನು ಮೆಚುರಿಟಿ ಟೈಮ್‌ನಲ್ಲಿ ರಿಡೀಮ್ ಮಾಡಿದರೆ, ನೀವು ಕ್ಯಾಪಿಟಲ್ ಗೇನ್ಸ್ ತೆರಿಗೆ ವಿನಾಯಿತಿಗೆ ಅರ್ಹರಾಗಿರುವುದಿಲ್ಲ. ಮುಕ್ತಾಯದವರೆಗೆ ಬಾಂಡ್ ಅನ್ನು ಹೊಂದಿರುವ ಮೂಲ ಹೂಡಿಕೆದಾರರು ಮಾತ್ರ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ.


