Personal Finance: ಹಬ್ಬ ಬಂತು, ಬೇಕಾಬಿಟ್ಟಿ ಖರ್ಚು ಮಾಡೋದ್ ಕಮ್ಮಿ ಮಾಡಿ
ಹಬ್ಬ ಬಂತೆಂದ್ರೆ ಒಂದು ಕಡೆ ಸಂಭ್ರಮವಾದ್ರೆ ಮತ್ತೊಂದು ಕಡೆ ಖರ್ಚಿನ ಭಯ ಶುರುವಾಗುತ್ತದೆ. ಹಬ್ಬದಲ್ಲಿ ಖರ್ಚು ಹೆಚ್ಚಾಗುತ್ತದೆ. ಸಿಂಪಲ್ ಆಗಿ ಹಬ್ಬ ಮಾಡ್ತೇನೆ ಎಂದ್ರೂ ಜೇಬು ಖಾಲಿಯಾಗುತ್ತದೆ. ಸಾಲ ಮಾಡಿ ಹಬ್ಬ ಆಚರಿಸುವ ಬದಲು ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಕಡಿಮೆ ಖರ್ಚಿನಲ್ಲಿ ಹಬ್ಬ ಎಂಜಾಯ್ ಮಾಡ್ಬಹುದು.
ಭಾರತದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ಒಂದಾದ್ಮೇಲೆ ಒಂದು ಹಬ್ಬ ಬರ್ತಿರುತ್ತದೆ. ಗಣೇಶ ಚತುರ್ಥಿ, ದೀಪಾವಳಿ, ನವರಾತ್ರಿ, ರಂಜಾನ್, ಕ್ರಿಸ್ಮಸ್ ಹೀಗೆ ವರ್ಷದಲ್ಲಿ ಸಾಕಷ್ಟು ಹಬ್ಬಗಳು ಬರುತ್ತವೆ. ವ್ಯಕ್ತಿ ಎಷ್ಟೇ ಬಡವನಾಗಿದ್ದರೂ ಹಬ್ಬ ಆಚರಿಸೋದನ್ನು ಮಾತ್ರ ಬಿಡೋದಿಲ್ಲ. ಭಾರತೀಯರು ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹಬ್ಬ ಹತ್ತಿರ ಬಂತು ಅಂದ್ರೆ ಖರ್ಚು ಹೆಚ್ಚಾಗುತ್ತದೆ. ಸಿಹಿತಿಂಡಿಗಳು, ಪೂಜಾ ಸಾಮಗ್ರಿಗಳು, ಬಟ್ಟೆಗಳು, ಆಭರಣಗಳು, ಉಡುಗೊರೆಗಳು, ಅಲಂಕಾರಿಕ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡ್ಬೇಕಾಗುತ್ತದೆ. ಅನೇಕರು ಹಬ್ಬದ ಋತುವಿನಲ್ಲಿ ಕಾರು ಅಥವಾ ಮನೆ ಖರೀದಿಸುತ್ತಾರೆ. ಹಬ್ಬದ ದಿನಗಳಲ್ಲಿ ಜೇಬು ಖಾಲಿಯಾಗೋದು ಸಾಮಾನ್ಯ. ಖರ್ಚು ಹೆಚ್ಚಾಗೋದನ್ನು ನೋಡಿ ಹಬ್ಬ ಯಾಕೆ ಬಂತೋ ಎನ್ನುವವರಿದ್ದಾರೆ. ಹಬ್ಬಕ್ಕಾಗಿ ಸಾಕಷ್ಟು ಸಾಲ ಮಾಡೋರನ್ನು ನೀವು ನೋಡಬಹುದು. ಈ ಸಾಲವನ್ನು ತೀರಿಸೋದು ಮುಂದೆ ಕಷ್ಟವಾಗುತ್ತದೆ. ಹಬ್ಬದಲ್ಲಿ ಖರ್ಚು ಕಡಿಮೆ ಮಾಡಲು ಬುದ್ಧಿವಂತಿಕೆ ಬೇಕು. ಕೆಲ ಉಪಾಯಗಳ ಮೂಲಕ ಹಬ್ಬದ ಖರ್ಚನ್ನು ಕಡಿಮೆ ಮಾಡಬಹುದು. ನಾವಿಂದು ಹಬ್ಬದ ಮೊದಲು ನೀವೇನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಹಬ್ಬ (Festival) ಕ್ಕೆ ಮುನ್ನ ಸಿದ್ಧಪಡಿಸಿ ಬಜೆಟ್ (Budget) : ಹಬ್ಬದಲ್ಲಿ ಮಿತಿ ಮೀರಿ ಹಣ ಖರ್ಚಾ(Expense) ಗಬಾರದು ಎಂದಾದ್ರೆ ನೀವು ಮೊದಲು ಬಜೆಟ್ ಸಿದ್ಧಪಡಿಸಬೇಕು. ಒಂದಿಷ್ಟು ಹಣ ಹೊಂದಿಸಿ, ಅಷ್ಟರಲ್ಲೇ ಹಬ್ಬ ಆಚರಿಸುವ ನಿರ್ಧಾರ ಕೈಗೊಳ್ಳಿ. ಬಜೆಟ್ ಇಲ್ಲದೆ ಹಬ್ಬ ಆಚರಿಸಿದಾಗ ಖರ್ಚು ಹೆಚ್ಚಾಗುತ್ತದೆ. ಅಲಂಕಾರಿಕ ವಸ್ತುಗಳಿಗೆ ಅತಿಯಾಗಿ ಹಣ ವ್ಯರ್ಥವಾಗುತ್ತದೆ. ಹಾಗಾಗಿ ಬಜೆಟ್ ಸಿದ್ಧಪಡಿಸಿದ ನಂತ್ರವೇ ಹಬ್ಬದ ಖರೀದಿ ಶುರು ಮಾಡಿ.
ನೀವು ಒಂದಕ್ಕಿಂತ ಹೆಚ್ಚು Bank Account ಹೊಂದಿದ್ದೀರಾ..? ಹಾಗಾದ್ರೆ ಈ ಅಂಶಗಳ ಬಗ್ಗೆ ಗಮನವಿರಲಿ..!
ಒಂದ್ವೇಳೆ ನಿಮ್ಮ ಬಜೆಟ್ ಗಿಂತ ಖರ್ಚು ಹೆಚ್ಚಾಗಲು ಶುರುವಾಗಿದೆ ಎನ್ನಿಸಿದ್ರೆ ನೀವು ಖರ್ಚನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು. ಇದ್ರಿಂದ ಹಣ ಉಳಿಸಬಹುದು. ಹೊಸ ಹೂಡಿಕೆ ಮುನ್ನ ಹಳೆ ಹೂಡಿಕೆಯನ್ನು ಗಮನಿಸಿ : ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರು ಹೂಡಿಕೆಗೆ ಪ್ಲಾನ್ ಮಾಡ್ತಾರೆ. ಹೊಸ ಯೋಜನೆಗಳಲ್ಲಿ ಹಣ ಹೂಡಲು ಮುಂದಾಗ್ತಾರೆ. ನೀವು ಕೂಡ ಹಬ್ಬದ ಸಂದರ್ಭದಲ್ಲಿ ಹೊಸ ಹೂಡಿಕೆ ಬಗ್ಗೆ ಆಲೋಚನೆ ಮಾಡ್ತಿದ್ದರೆ ಮೊದಲು ಹಳೆ ಹೂಡಿಕೆಗೆ ಗಮನ ನೀಡಿ. ಹಳೆಯ ಮತ್ತು ಹೊಸ ಎರಡೂ ಹೂಡಿಕೆಗೆ ಹಣ ಹಾಕಲು ನಿಮ್ಮ ಬಳಿ ಅಷ್ಟು ಆದಾಯವಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹಳೆ ಹೂಡಿಕೆಗಿಂತ ಹೊಸ ಹೂಡಿಕೆಯಲ್ಲಿ ಹೆಚ್ಚು ಲಾಭವಿದೆ ಎನ್ನಿಸಿದ್ರೆ ಹಾಗೂ ಇದಕ್ಕೆ ನಿಮ್ಮ ಬಳಿ ಹಣವಿದೆ ಎಂದಾದ್ರೆ ನೀವು ಹೂಡಿಕೆ ಮಾಡಿ.
ಹಬ್ಬದ ಮೊದಲು ಆರ್ ಡಿ ಇರಲಿ : ನಿಮ್ಮ ಮನೆಯಲ್ಲಿ ದೀಪಾವಳಿ ದೊಡ್ಡದಾಗಿ ಮಾಡ್ತೀರಿ ಎಂದಾದರೆ ಇಲ್ಲವೆ ಕ್ರಿಸ್ಮಸ್ ದೊಡ್ಡದಾಗಿ ಮಾಡ್ತೀರಿ ಎಂದಾದ್ರೆ ಇಲ್ಲವೆ ಹೊಸ ವರ್ಷದ ಮೊದಲ ದಿನ ಖರ್ಚು ಹೆಚ್ಚಾಗುತ್ತದೆ ಎಂದಾದ್ರೆ ಮೊದಲೇ ಆರ್ ಡಿ ಮಾಡಿ. ಯಾವ ಹಬ್ಬಕ್ಕೆ ಹೆಚ್ಚು ಖರ್ಚಾಗುತ್ತದೆ ಎಂಬ ಮಾಹಿತಿ ನಿಮಗಿರುತ್ತದೆ. ಅದಕ್ಕಿಂತ ಮೊದಲೇ ನೀವು ಆರ್ ಡಿ ಮಾಡಿದ್ದರೆ ನಿಶ್ಚಿತ ಹಣ ನಿಮ್ಮ ಕೈನಲ್ಲಿರುತ್ತದೆ. ಹಬ್ಬದ ವೇಳೆ ಹಣಕ್ಕೆ ಪರದಾಡುವ ಸ್ಥಿತಿ ಬರುವುದಿಲ್ಲ. ಮೂರು ತಿಂಗಳ ಅಥವಾ 6 ತಿಂಗಳ ಆರ್ ಡಿಯನ್ನು ನೀವು ಮಾಡಬಹುದು.
ಹಬ್ಬಕ್ಕಾಗಿ ಸಾಲ ಮಾಡಿ ಕೈ ಸುಟ್ಟುಕೊಳ್ಳಬೇಡಿ : ಅನೇಕರು ಹಬ್ಬದ ಸಂದರ್ಭದಲ್ಲಿ ಸಾಲ ಪಡೆಯುತ್ತಾರೆ. ಸಾಲ ಪಡೆಯುವುದು ನಿಮ್ಮ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರುವ ಜೊತೆಗೆ ಒಂದು ರೀತಿಯ ನೆಗೆಟಿವ್ ಪ್ರಭಾವ ನಿಮ್ಮ ಮೇಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಖರ್ಚನ್ನು ನಿಯಂತ್ರಿಸಬೇಕೇ ಹೊರತು ಖರ್ಚಿಗಾಗಿ ಸಾಲ ಮಾಡಬಾರದು.
Personal Finance: ಭವಿಷ್ಯ ಚೆನ್ನಾಗಿರ್ಬೇಕಾ? ಉಳಿತಾಯದಲ್ಲಿ ಈ ತಪ್ಪು ಮಾಡ್ಬೇಡಿ
ಕ್ರೆಡಿಟ್ ಕಾರ್ಡ್ ಬಳಕೆ ಮೇಲಿರಲಿ ನಿಯಂತ್ರಣ : ಹಬ್ಬದ ಸಂದರ್ಭದಲ್ಲಿ ವಸ್ತುಗಳ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಅದ್ರ ಮೇಲೆ ನಿಯಂತ್ರಣವಿರಲಿ. ಕ್ರೆಡಿಟ್ ಕಾರ್ಡ್ ಬದಲು ಡೆಬಿಟ್ ಕಾರ್ಡ್ ಬಳಕೆ ಒಳ್ಳೆಯದು.