ಚಿನ್ನ ಬಳಿಕ ಬೆಳ್ಳಿ ಬೆಲೆಯು ಭಾರಿ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಕೇಜಿಗೆ 9500 ರು. ಬರೋಬ್ಬರಿ ಹೆಚ್ಚಾಗಿ ದಾಖಲೆಯ 2.43 ಲಕ್ಷ ರು.ಗೆ ತಲುಪಿದೆ. 22 ಕ್ಯಾರಟ್ ಚಿನ್ನ 10 ಗ್ರಾಂಗೆ 720 ರು. ಏರಿ 1,32,200 ರು.ಗೆ ಹಾಗೂ 24 ಕ್ಯಾರಟ್ ಚಿನ್ನ 10 ಗ್ರಾಂಗೆ 800 ರು.ಏರಿದೆ
ನವದೆಹಲಿ: ಚಿನ್ನದ ಬಳಿಕ ಬೆಳ್ಳಿ ಬೆಲೆಯು ಭಾರಿ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಕೇಜಿಗೆ 9500 ರು. ಬರೋಬ್ಬರಿ ಹೆಚ್ಚಾಗಿ ದಾಖಲೆಯ 2.43 ಲಕ್ಷ ರು.ಗೆ ತಲುಪಿದೆ.
ಇದೇ ವೇಳೆ, 22 ಕ್ಯಾರಟ್ ಚಿನ್ನ 10 ಗ್ರಾಂಗೆ 720 ರು. ಏರಿ 1,32,200 ರು.ಗೆ ಹಾಗೂ 24 ಕ್ಯಾರಟ್ ಚಿನ್ನ 10 ಗ್ರಾಂಗೆ 800 ರು. ಏರಿ 1,44,200 ರು.ಗೆ ತಲುಪಿದೆ.
ಬೆಳ್ಳಿ ಭಾರಿ ಏರಿಕೆ:
ಬೆಳ್ಳಿ ಸೋಮವಾರದಿಂದ ಶುಕ್ರವಾರದ ವರೆಗೆ ಬೆಂಗಳೂರಿನಲ್ಲಿ 21,200 ರು. ಜಿಗಿದಿದೆ. ದೆಹಲಿಯಲ್ಲಿ 4 ದಿನದಲ್ಲಿ 32,250 ರು. ಏರಿಕೆಯಾಗಿದೆ. ಇನ್ನು ದೆಹಲಿಯಲ್ಲಿ ಬೆಳ್ಳಿ ಒಂದೇ ದಿನ 9350 ರು. ಜಿಗಿದು, ಕೇಜಿಗೆ 2.36 ಲಕ್ಷ ರು.ಗೆ ತಲುಪಿದೆ.
ವರ್ಷಾರಂಭದಲ್ಲಿ 89,700 ರು. ಇದ್ದ ಕೇಜಿ ಬೆಳ್ಳಿ ಬೆಲೆಯು ಭರ್ಜರಿ ಶೇ.163.5ರಷ್ಟು (1.46 ಲಕ್ಷ ರು.) ಜಿಗಿದಿದೆ. 4 ದಿನದಲ್ಲಿ 32,250 ರು. ಏರಿದೆ. ಅದೇ ರೀತಿ 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 1500 ರು. ಜಿಗಿದು 1,42,300 ರು.ಗೆ ಏರಿಕೆಯಾಗಿದೆ.
ಜಾಗತಿಕವಾಗಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು, ಗಣಿಗಾರಿಕೆಯಲ್ಲಿನ ಲಭ್ಯತೆ ಕಡಿಮೆಯಾಗಿದೆ. ಜೊತೆಗೆ ಹೂಡಿಕೆದಾರರು ಚಿನ್ನದೊಂದಿಗೆ ಬೆಳ್ಳಿಯನ್ನೂ ಸಹ ಸಂಗ್ರಹಿಸುತ್ತಿರುವುದು, ಅಮೂಲ್ಯ ಲೋಹದ ಬೆಲೆ ಏರಿಕೆಗೆ ಕಾರಣವಾಗಿದೆ.
ಪಾಕ್‌ಗೆ ಈಗ ಆಪರೇಷನ್ ಸಿಂದೂರ-2 ಭೀತಿ
ಶ್ರೀನಗರ: ಭಾರತದ ಆಪರೇಷನ್ ಸಿಂದೂರ-2 ಭೀತಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರೀ ಪ್ರಮಾಣದಲ್ಲಿ ಆ್ಯಂಟಿ ಡ್ರೋನ್ ವ್ಯವಸ್ಥೆಗಳು, ಏರ್‌ಡಿಫೆನ್ಸ್ ಸಿಸ್ಟಂಗಳನ್ನು ನಿಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ರಾವಲ್‌ಕೋಟ್, ಕೋಟ್ಲಿ ಮತ್ತು ಭಿಂಬರ್ ಸೆಕ್ಟರ್‌ಗಳಲ್ಲಿ 30ಕ್ಕೂ ಹೆಚ್ಚು ಮಾನವರಹಿತ ವಿಮಾನಗಳ ನಿಗ್ರಹ ವ್ಯವಸ್ಥೆಗಳನ್ನು (ಸಿ-ಯುಎಎಸ್) ನಿಯೋಜಿಸಲಾಗಿದೆ. ಈ ಮೂಲಕ ಗಡಿದಾಟಿ ಬರುವ ಮಾನವ ರಹಿತ ವಿಮಾನಗಳನ್ನು ಹೊಡೆದುರುಳಿಸಲು ಅಗತ್ಯ ಸಿದ್ಧತೆ ಕೈಗೊಂಡಿದೆ.
ಕ್ಷೇತ್ರವಾರು ಎಲ್ಲೆಲ್ಲೆ ನಿಯೋಜನೆ?:
ರಾವಲ್‌ಕೋಟ್, ಕೋಟ್ಲಿ, ಭಿಂಬರ್ ಸೆಕ್ಟರ್‌ಗಳಲ್ಲಿ ಈ ಸಿ-ಯುಎಎಸ್, ಏರ್‌ಡಿಫೆನ್ಸ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ರಾವಲ್‌ಕೋಟ್‌ನಲ್ಲಿ ನಿಯೋಜಿಸಲ್ಪಟ್ಟಿರುವ ಸಿ-ಯುಎಎಸ್‌ಗಳನ್ನು ಭಾರತದ ಪೂಂಛ್ ಸೆಕ್ಟರ್‌ಗೆ ಎದುರಾಗಿ ಗಡಿಕಾಡುವ 2ನೇ ಆಜಾದ್ ಕಾಶ್ಮೀರ್ ಬ್ರಿಗೇಡ್ ನಿಯಂತ್ರಿಸುತ್ತದೆ.
ಇನ್ನು ಕೋಟ್ಲಿಯಲ್ಲಿ ಸ್ಥಾಪಿಸಲಾಗಿರುವ ಸಿ-ಯುಎಎಸ್ ಗಳನ್ನು ಮೂರನೇ ಆಜಾದ್ ಕಾಶ್ಮೀರ್ ಬ್ರಿಗೇಡ್ ನಿಯಂತ್ರಿಸುತ್ತದೆ. ಈ ಬ್ರಿಗೇಡ್ ಭಾರತದ ರಜೌರಿ, ಪೂಂಚ್, ನೌಶೇರಾ ಮತ್ತು ಸುಂದರ್‌ಬನಿಯ ಎದುರಾಗಿ ಗಡಿಕಾಯುತ್ತದೆ.
ಇನ್ನು ಭಿಂಬರ್ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿರುವ ಆ್ಯಂಟಿ ಡ್ರೋನ್ ಸಿಸ್ಟಂಗಳನ್ನು 7ನೇ ಆಜಾದ್ ಕಾಶ್ಮೀರ್ ಬ್ರಿಗೇಡ್ ನಿಯಂತ್ರಿಸುತ್ತದೆ.
ಏನೇನು ನಿಯೋಜನೆ?:
ಪಾಕಿಸ್ತಾನವು ಎಲೆಕ್ಟ್ರಾನಿಕ್ ಹಾಗೂ ಕೈನೆಟಿಕ್ ಕೌಂಟರ್-ಯುಎಎಸ್ ವ್ಯವಸ್ಥೆಗಳನ್ನು ನಿಯೋಜಿಸಿದೆ. 10 ಕಿ.ಮೀ. ವ್ಯಾಪ್ತಿಯಲ್ಲಿ ಸಣ್ಣ ಮತ್ತು ದೊಡ್ಡ ಡ್ರೋನ್‌ಗಳನ್ನು ಪತ್ತೆಹಚ್ಚುವ ಸೈಡರ್ ಕೌಂಟರ್-ಯುಎಎಸ್ ಸಿಸ್ಟಂ, ಹೆಗಲ ಮೇಲಿಟ್ಟುಕೊಂಡು ಹಾರಿಸಬಲ್ಲ, 1.5 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್‌ಗಳನ್ನು ಜಾಮ್ ಮಾಡಬಲ್ಲ ಸಫ್ರಾ ಆ್ಯಂಟಿ-ಯುಎವಿ ಜಾಮಿಂಗ್ ಗನ್‌ಗಳನ್ನು ಹೆಚ್ಚಾಗಿ ನಿಯೋಜಿಸಲಾಗಿದೆ.
ಏರ್‌ಡಿಫೆನ್ಸ್ ಸಿಸ್ಟಂ ಕೂಡ ಅಳವಡಿಕೆ:
ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಡ್ರೋನ್‌ಗಳನ್ನು ಹೊಡೆದುರುಳಿಸಲು ರೇಡಾರ್ ಸಿಸ್ಟಂನ ಬೆಂಬಲದೊಂದಿಗೆ ಒರೆಲಿಕಾನ್ ಜಿಡಿಎಫ್-35 ಎಂಎಂ ಟ್ವಿನ್ ಬ್ಯಾರೆಲ್ ಆ್ಯಂಟಿ ಏರ್‌ಕ್ರಾಫ್ಟ್ ಗನ್‌ಗಳು ಮತ್ತು ಅನ್ಜಾ ಎಂಕೆ-2 ಮತ್ತು ಎಂಕೆ-3 ಮ್ಯಾನ್ ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಂ(ಎಂಎಎನ್‌ಪಿಎಡಿಎಸ್)ಗಳನ್ನೂ ಪಾಕ್ ಸೇನೆ ತನ್ನ ಗಡಿಯುದ್ದಕ್ಕೂ ನಿಯೋಜಿಸಿದೆ.
ಈ ನಡುವೆ ಟರ್ಕಿ ಮತ್ತು ಚೀನಾದ ಜತೆಗೆ ಹೊಸ ಡ್ರೋನ್‌ಗಳು ಹಾಗೂ ಏರ್‌ಡಿಫೆನ್ಸ್ ಸಿಸ್ಟಂಗಳ ಖರೀದಿಗಾಗಿ ಮಾತುಕತೆಯನ್ನೂ ನಡೆಸುತ್ತಿದೆ.
30 ಲಕ್ಷ ದಾಟಿದ ಅಯ್ಯಪ್ಪ ಯಾತ್ರಿಕರ ಸಂಖ್ಯೆ: ಕಳೆದ ಬಾರಿಗಿಂತ 2 ಲಕ್ಷ ಕಡಿಮೆ
ಶಬರಿಮಲೆ: ಇಲ್ಲಿನ ಪ್ರಸಿದ್ಧ ಅಯ್ಯಪ್ಪ ಸ್ವಾಮಿಯ ಶಬರಿಮಲೆ ದೇಗುಲಕ್ಕೆ ಪ್ರಸಕ್ತ ಋತುವಿನಲ್ಲಿ ಭೇಟಿ ನೀಡಿದ ಭಕ್ತರ ಸಂಖ್ಯೆ ಡಿ.25ಕ್ಕೆ 30 ಲಕ್ಷ ದಾಟಿದೆ ಎಂದು ದೇಗುಲದ ಅಧಿಕೃತ ದತ್ತಾಂಶಗಳು ಹೇಳಿವೆ.
‘ದೇವರ ದರ್ಶನದ ಮೊದಲಾರ್ಧ ಋತುಮಾನ ಅಂತ್ಯಗೊಂಡಿದ್ದು ಡಿ.25ಕ್ಕೆ ಭಕ್ತರ ಭೇಟಿ ಸಂಖ್ಯೆ 30,01,532 ಇದೆ. ಇದು ಕಳೆದ ಬಾರಿಗಿಂತ 2 ಲಕ್ಷ ಕಮ್ಮಿ. 2024ರ ಮೊದಲ ಋತುವಿನಲ್ಲಿ ಡಿ.23ಕ್ಕೇ ಭಕ್ತರ ಸಂಖ್ಯೆ 30.78 ಲಕ್ಷ ತಲುಪಿತ್ತು. ಡಿ.25ಕ್ಕೆ 32.49 ಲಕ್ಷಕ್ಕೇರಿತ್ತು’ ಎಂದು ಅದು ಹೇಳಿದೆ.
ಆದರೆ, ದೇಗುಲ ಆರಂಭವಾದ 4 ದಿನಗಳ ನಂತರ ನ.19ಕ್ಕೆ ಒಂದೇ ದಿನ 1.02 ಲಕ್ಷ ಭಕ್ತರು ಭೇಟಿ ನೀಡಿದ್ದು ದಾಖಲೆಯಾಗಿದೆ.
ಅಯ್ಯಪ್ಪ ದೇಗುಲ ಶನಿವಾರ ಡಿ.27ರ ರಾತ್ರಿ 11ಕ್ಕೆ ಬಂದ್ ಆಗಲಿದೆ. ಪುನಃ ಸಂಕ್ರಾಂತಿ ನಿಮಿತ್ತ ಡಿ.30ಕ್ಕೆ ತೆರೆಯಲಿದೆ.


