ಬೆಂಗಳೂರು (ಅ. 28): ಕಳೆದ 3 ತಿಂಗಳಿನಿಂದ ಪ್ರತಿದಿನ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ, ಸೂಚ್ಯಂಕ ಭಾರಿ ಪತನ ಎಂಬ ಸುದ್ದಿಗಳನ್ನು ಓದುತ್ತಿದ್ದೀರಿ. ವಾಸ್ತವವಾಗಿ 3 ತಿಂಗಳಿನಿಂದ ಅಲ್ಲ, ಕಳೆದ 10 ತಿಂಗಳಿನಿಂದ ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’ ನಡೆದಿದೆ. ಈ ಅವಧಿಯಲ್ಲಿ ಭಾರತದ ಕಂಪನಿಗಳ ಮಾರುಕಟ್ಟೆ ಬಂಡವಾಳ 40 ಲಕ್ಷ ಕೋಟಿ ರು. ಕಡಿಮೆಯಾಗಿದೆ. ಈ ಕುರಿತ ಸಂಕ್ಷಿಪ್ತ ಚಿತ್ರಣ ಇಲ್ಲಿದೆ. 

ಮಾರುಕಟ್ಟೆ ಬಂಡವಾಳ ಶೇ.26 ರಷ್ಟು ಕುಸಿತ

ಈ ವರ್ಷದ ಜನವರಿಯಿಂದ ಅಕ್ಟೋಬರ್ 26 ರವರೆಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ರುವ ಕಂಪನಿಗಳ ಬಂಡವಾಳ ಹೆಚ್ಚುಕಮ್ಮಿ ಕಾಲು ಭಾಗ, ಅಂದರೆ ಶೇ. 26 ರಷ್ಟು ಕಡಿಮೆಯಾಗಿದೆ. ಹೀಗೆ ಕಡಿಮೆಯಾದ ಮೌಲ್ಯ ಸುಮಾರು
₹ 40 ಲಕ್ಷ ಕೋಟಿ. ಇದರಿಂದ ಕಂಪನಿಗಳ ಬ್ಯಾಲೆನ್ಸ್ ಶೀಟ್‌ನಲ್ಲಿ ನಷ್ಟವಾಗಿದೆಯೋ ಇಲ್ಲವೋ ಎಂಬುದು ನಿರ್ಧಾರವಾಗುವುದಿಲ್ಲ. ಬದಲಿಗೆ, ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ, ಅಂದರೆ ಆ ಕಂಪನಿಯನ್ನು ಮಾರಿದರೆ ಸಿಗುವ ಹಣ, ಕಡಿಮೆಯಾಗುತ್ತದೆ.

ಏನಿದು ಮಾರುಕಟ್ಟೆ ಬಂಡವಾಳ?

ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ಕಂಪನಿಗಳ ಒಟ್ಟು ಷೇರುಗಳ ಮೌಲ್ಯದ ಮೊತ್ತವೇ ಷೇರು ಮಾರುಕಟ್ಟೆ ಬಂಡವಾಳ. ಇದು ಆಯಾ ದಿನದ ಷೇರು ಸೂಚ್ಯಂಕಕ್ಕೆ ತಕ್ಕಂತೆ ಏರಿಳಿತವಾಗುತ್ತದೆ. ಒಂದು ಕಂಪನಿಯ ಮೌಲ್ಯವನ್ನು ಅದರ ಮಾರುಕಟ್ಟೆ ಬಂಡವಾಳದಿಂದ ಅಳೆಯುತ್ತಾರೆ. ಆ ಕಂಪನಿಯ ಷೇರುಗಳ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ಕಂಪನಿಯ ಒಟ್ಟು ಷೇರುಗಳ ಸಂಖ್ಯೆಯಿಂದ ಗುಣಿಸಿದರೆ ಅದರ ಮಾರುಕಟ್ಟೆ ಬಂಡವಾಳ ಸಿಗುತ್ತದೆ.

ನಷ್ಟದಲ್ಲಿ ಚೀನಾ ನಂ.1, ಭಾರತ ನಂ.2

ಷೇರು ಮಾರುಕಟ್ಟೆ ಭಾರತದಲ್ಲೊಂದೇ ಅಲ್ಲ, ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಕುಸಿಯುತ್ತಿದೆ. ಕಳೆದ 10 ತಿಂಗಳಿನಲ್ಲಿ ಚೀನಾ ಷೇರು ಮಾರುಕಟ್ಟೆ ಬಂಡವಾಳ ಶೇ.30 ರಷ್ಟು, ಅಂದರೆ ಸುಮಾರು 167 ಲಕ್ಷ ಕೋಟಿ ರು. ಕುಸಿದಿದೆ. ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಜರ್ಮನಿ, ಸ್ವಿಜರ್‌ಲೆಂಡ್, ಬ್ರಿಟನ್, ಹಾಂಗ್‌ಕಾಂಗ್ ಮುಂತಾದ ದೇಶಗಳಲ್ಲೂ ಷೇರು ಮಾರುಕಟ್ಟೆ ಸಂಕಷ್ಟದಲ್ಲಿದೆ.

ಭಾರತದಲ್ಲಿ ರುಪಾಯಿ ಮೌಲ್ಯ ಕುಸಿತ ದಿಂದಾಗಿ ಇದರ ಪರಿಣಾಮ ತೀವ್ರವಾಗಿದೆ.

10 ತಿಂಗಳಲ್ಲಿ ತೊಳೆದುಹೋಯ್ತು 40 ಲಕ್ಷ ಕೋಟಿ ರುಪಾಯಿ ! 

ಕಳೆದ 3 ತಿಂಗಳಿನಿಂದ ಪ್ರತಿದಿನ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ, ಸೂಚ್ಯಂಕ ಭಾರಿ ಪತನ ಎಂಬ ಸುದ್ದಿಗಳನ್ನು ಓದುತ್ತಿದ್ದೀರಿ. ವಾಸ್ತವವಾಗಿ 3 ತಿಂಗಳಿನಿಂದ ಅಲ್ಲ, ಕಳೆದ 10 ತಿಂಗಳಿನಿಂದ ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’ ನಡೆದಿದೆ. ಈ ಅವಧಿಯಲ್ಲಿ ಭಾರತದ ಕಂಪನಿಗಳ ಮಾರುಕಟ್ಟೆ ಬಂಡವಾಳ 40 ಲಕ್ಷ ಕೋಟಿ ರು. ಕಡಿಮೆಯಾಗಿದೆ. ಈ ಕುರಿತ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಷೇರು ಮಾರ್ಕೆಟ್‌ನಲ್ಲಿ ಏನಾಗ್ತಿದೆ? ಈ ನಷ್ಟಕ್ಕೆ ಏನು ಕಾರಣ?

ಜಾಗತಿಕ ಮಾರುಕಟ್ಟೆಯ ಅಸ್ಥಿರತೆ, ರುಪಾಯಿ ಮೌಲ್ಯ ಕುಸಿತ, ಕಂಪನಿಗಳ ಆದಾಯದಲ್ಲಿ ಕುಸಿತ, ಹೂಡಿಕೆದಾರರ ನಕಾರಾತ್ಮಕ ಧೋರಣೆ ಹಾಗೂ ತೈಲಬೆಲೆ ಹೆಚ್ಚಳ. ಹೂಡಿಕೆದಾರರ ಕತೆ ಏನಾಗಿದೆ? ಷೇರು ಮಾರುಕಟ್ಟೆ ಬಂಡವಾಳ ಕುಸಿದಿದೆ ಎಂದಾಕ್ಷಣ ಜನಸಾಮಾನ್ಯ ಹೂಡಿಕೆದಾರರಿಗೆ ನಷ್ಟವಾಗಿದೆ ಎಂದೇ ಅರ್ಥವಲ್ಲ. ಷೇರು ವ್ಯಾಪಾರದಲ್ಲಿ ನಾನಾ ವಿಧಗಳು ಇರುವುದರಿಂದ ಕೆಲವರಿಗೆ ಲಾಭವಾಗಿರಬಹುದು, ಇನ್ನು ಕೆಲವರಿಗೆ ನಷ್ಟವಾಗಿರಬಹುದು. ಆದರೆ, ಸಾಂಪ್ರದಾಯಿಕ ಹೂಡಿಕೆದಾರರಿಗೆ ನಷ್ಟವೇ ಆಗಿದೆ. ಇನ್ನು, ಷೇರು ಮಾರುಕಟ್ಟೆಯನ್ನು ಅವಲಂಬಿಸಿರುವ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹಾಕಿದವರಿಗೆ ನಷ್ಟವಾಗಿದೆ.

ಸೂಚ್ಯಂಕ ಅಷ್ಟೇ ಇದ್ದರೂ ನಷ್ಟ ಏಕಾಗಿದೆ?

ಈ ವರ್ಷದ ಜನವರಿಯಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ 33,900 ರಷ್ಟಿತ್ತು. ಮೊನ್ನೆ ಅಕ್ಟೋಬರ್ 26 ಕ್ಕೆ 33,690 ಇದೆ. ಅಂದರೆ ಸೂಚ್ಯಂಕದಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಆದರೂ ಮಾರುಕಟ್ಟೆ ಬಂಡವಾಳ ಕುಸಿದಿದೆ. ಇದಕ್ಕೆ ಕಾರಣ- ಬಿಎಸ್‌ಇ ಸೂಚ್ಯಂಕ ನಿಗದಿಯಾಗುವುದು ಆಯ್ದ 30 ಕಂಪನಿಗಳ ಷೇರು ಬೆಲೆಯ ಏರಿಳಿತದಿಂದ. ಎನ್‌ಎಸ್‌ಇ ಸೂಚ್ಯಂಕ 50 ಕಂಪನಿಗಳಿಂದ. ಬಿಎಸ್‌ಇಯಲ್ಲಿ ಒಟ್ಟಾರೆ 5000 ಕ್ಕೂ ಹೆಚ್ಚು ಕಂಪನಿಗಳು, ಎನ್‌ಎಸ್‌ಇಯಲ್ಲಿ 1500 ಕ್ಕೂ ಹೆಚ್ಚು ಕಂಪನಿಗಳಿವೆ.

ಈ ಆಯ್ದ 30 ಅಥವಾ 50 ಕಂಪನಿಗಳನ್ನು ಹೊರತುಪಡಿಸಿದ ಇತರ ಕಂಪನಿಗಳ ಷೇರುಗಳ ಬೆಲೆ ಹೆಚ್ಚು ಕುಸಿದಿರಬಹುದು. ಅದರಿಂದ ಮಾರುಕಟ್ಟೆ ಬಂಡವಾಳ ಬಹಳ ಕಡಿಮೆಯಾಗಿ ರಬಹುದು. ಅದು ಸಂವೇದಿ ಸೂಚ್ಯಂಕದ ಮೇಲೆ ಪ್ರಭಾವ ಬೀರಿರುವುದಿಲ್ಲ. ಇದರರ್ಥ- ದೇಶದ ಪ್ರತಿಷ್ಠಿತ ಕಂಪನಿಗಳಿಗೆ ಹೆಚ್ಚು ಸಮಸ್ಯೆಯಾಗಿಲ್ಲ, ಸಣ್ಣಪುಟ್ಟ ಕಂಪನಿಗಳಿಗೆ ನಷ್ಟವಾಗಿದೆ.