ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದೆಯಾ? ಒಂದು ಕಾಲದಲ್ಲಿ ಭಾರಿ ಲಾಭದಲ್ಲಿದ್ದ ಪಿಜಿ (ಪೇಯಿಂಗ್ ಗೆಸ್ಟ್) ಉದ್ಯಮ ಇದೀಗ ನಷ್ಟದಲ್ಲಿದೆ. ಪ್ರತಿ ದಿನ ಒಂದೊಂದು ಪಿಜಿಗಳು ಬಂದ್ ಆಗುತ್ತಿದೆ. ಇದೀಗ ನಗರದಲ್ಲಿ 200 ರಿಂದ 300 ಪಿಜಿ ಸ್ಥಗಿತಗೊಂಡಿದೆ.
ಬೆಂಗಳೂರು(ಜೂ.10) ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೆಲಸ ಅರಸಿಕೊಂಡು, ವಿದ್ಯಾಭ್ಯಾಸಕ್ಕಾಗಿ ಸೇರಿದಂತೆ ಹಲವು ಕಾರಣಗಳಿಗೆ ಬರುವ ಮಂದಿಗೆ ಮೊದಲು ಆಸರೆಯಾಗುವುದೇ ಪಿಜಿ (ಪೇಯಿಂಗ್ ಗೆಸ್ಟ್). ತಮ್ಮ ತಮ್ಮ ಆಫೀಸ್, ಶಿಕ್ಷಣ ಸಂಸ್ಥೆ ಅಥವಾ ಇನ್ಯಾವುದೇ ಕೆಲಸದ ಕ್ಷೇತ್ರಗಳ ಪಕ್ಕದಲ್ಲಿ ಬಾಡಿಗೆಗೆ ಉಳಿದುಕೊಳ್ಳಲು ಕೋಣೆ ಅಥವಾ ಬಂಕರ್ ರೀತಿಯ ವ್ಯವಸ್ಥೆ ಕಲ್ಪಿಸುವ ಪಿಜಿ ಬೆಂಗಳೂರಿನಲ್ಲಿ ಅತೀ ದೊಡ್ಡ ಲಾಭದಾಯಕ ಉದ್ಯಮವಾಗಿತ್ತು. ರಿಯಲ್ ಎಸ್ಟೇಟ್ ರೀತಿಯಲ್ಲಿ ಲಾಭ ಹಾಗೂ ಬೂಮಿಂಗ್ ಉದ್ಯಮವಾಗಿ ಬೆಳೆ ಪಿಜಿ ಇದೀಗ ನಷ್ಟದಲ್ಲಿ ಒಡುತ್ತಿದೆ. ಭಾರಿ ಹೂಡಿಕೆ ಮಾಡಿ ಪಿಜಿ ಉದ್ಯಮ ನಡೆಸುತ್ತಿರುವ ಹಲವರು ನಷ್ಟದಲ್ಲಿದ್ದಾರೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಈಗಾಗಲೇ 200 ರಿಂದ 300 ಪಿಜಿಗಳು ಸ್ಥಗಿತಗೊಂಡಿದೆ. ಇದಕ್ಕೆ ಕಾರಣವೇನು? ಬೆಂಗಳೂರಿಗೆ ಎದುರಾಯ್ತಾ ಆರ್ಥಿಕ ಹಿಂಜರಿತಾ?
ಟೆಕ್ ಉದ್ಯೋಗ ಕಡಿತ, ಬಿಬಿಎಂಪಿ ನಿಯಮದಿಂದ ಪಿಜಿ ಮಾಲೀಕರು ಹೈರಾಣು
ಎರಡು ಪ್ರಮುಖ ಕಾರಣಗಳು ಬೆಂಗಳೂರಿನ ಪಿಜಿ ಮಾಲೀಕರನ್ನು ಕಂಗೆಡಿಸಿದೆ. ಒಂದು ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತ. ಮತ್ತೊಂದು ಬಿಬಿಎಂಪಿ ತಂದಿರುವ ಹೊಸ ನಿಯಮ. ಇವರೆಡು ಕಾರಣಗಳಿಂದ ಬೆಂಗಳೂರಿನಲ್ಲಿ ಈ ವರ್ಷ 200 ರಿಂದ 300 ಪಿಜಿಗಳು ಬಾಗಿಲು ಮುಚ್ಚಿವೆ. ಪಿಜಿ ಮಾಲೀಕರಿಗೆ ಶೇಕಡಾ 20 ರಿಂದ 30 ರಷ್ಟು ನಷ್ಟವಾಗುತ್ತಿದೆ. ಹಲವು ಮಾಲೀಕರು ಅತೀವ ನಷ್ಟದಿಂದ ಕಟ್ಟಡಗಳನ್ನೇ ಮಾರಾಟ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗ ಕಡಿತ ಆತಂಕ
ಬೆಂಗಳೂರಿನಲ್ಲಿ ಐಟಿ ಬಿಟಿ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತಗಳು ಹೆಚ್ಚಾಗುತ್ತಿದೆ. ಅಮೆರಿಕ ಸೇರಿದಂತೆ ಕೆಲ ದೇಶಗಳಲ್ಲಿನ ಆರ್ಥಿಕ ಹಿಂಜರಿತ ಹಾಗೂ ನೀತಿಗಳಿಂದಾಗಿ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಇದು ಬೆಂಗಳೂರಿಗೂ ಹೊಡೆತ ನೀಡಿದೆ. ಉದ್ಯೋದ ಕಡಿತದಿಂದ ಪಿಜಿಗಳನ್ನು ಜನ ಖಾಲಿ ಮಾಡುತ್ತಿದ್ದಾರೆ. ಇದು ಪಿಜಿ ಮಾಲೀಕರ ನಿದ್ದೆಗೆಡಿಸಿದೆ. ಪ್ರಮುಖವಾಗಿ ಎಲೆಕ್ಟ್ರಾನಿಕ್ ಸಿಟಿ, ಮಹಾದೇವಪುರ, ಮಾರ್ಥಹಳ್ಳಿ ಸೇರಿದಂತೆ ಹಲವು ಏರಿಯಾಗಳ ಪಿಜಿಗಳು ಖಾಲಿಯಾಗಿದೆ.
ಹೊಸ ನಿಯಮದಿಂದ ಸಂಕಷ್ಟ
ಬಿಬಿಎಂಪಿ ಇದೀಗ ಪಿಜಿ ಉದ್ಯಮಕ್ಕೆ ಹೊಸ ನಿಯಮ ತಂದಿದೆ. ಬಿಬಿಎಂಪಿ ಕಾಯ್ದೆ, 2020ರ ಸೆಕ್ಷನ್ 305ರ ಅಡಿಯಲ್ಲಿ ನಿಯಮಗಳನ್ನು ಕಠಿಣ ಮಾಡಲಾಗಿದೆ. ಪಿಜಿ ಸಂಪೂರ್ಣ ಸಿಸಿಟಿವಿ ಅಳವಡಿಸಿರಬೇಕು.ಪ್ರತಿಯೊಬ್ಬನಿಗೆ 70 ಚದರ ಅಡಿ ಸ್ಥಳ ನೀಡಬೇಕು. ಪ್ರತಿ ದಿನ ಪಿಜಿಯಲ್ಲಿರುವ ವ್ಯಕ್ತಿಗೆ 135 ಲೀಟರ್ ಶುದ್ಧ ನೀರು ಕೊಡಬೇಕು. ಪಿಜಿ ಅಡುಗೆ ಕೊಣೆ, ಆಹಾರ ತಯಾರಿಕೆ, ವಿತರಣೆಗೆ ಆಹಾರ ಸುರಕ್ಷತಾ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಈ ರೀತಿ ಹಲವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದು ಪಿಜಿ ಮಾಲೀಕರಿಗೆ ಹೊರೆಯಾಗುತ್ತಿದೆ. ಹಲವು ಪಿಜಿಗಳು ಸಂಪೂರ್ಣ ತುಂಬುತ್ತಿಲ್ಲ. ಇವೆಲ್ಲವೂ ಪಿಜಿ ಮಾಲೀಕರ ಜೇಬಿಗೆ ಕತ್ತರಿ ಹಾಕಿದೆ.
ಬೆಂಗಳೂರು ಪಿಜಿ ಮಾಲೀಕರ ಅಸೋಸಯೇಶನ್ ಅಧ್ಯಕ್ಷ ಸುಖಿ ಈ ಕುರಿತ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ 12,000 ಪಿಜಿಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ 2,500 ಪಿಜಿಗಳು ಮಾತ್ರ ಅಧಿಕೃತ, ಇನ್ನುಳಿದ ಎಲ್ಲಾ ಪಿಜಿಗಳು ಅನಧೀಕೃತವಾಗಿದೆ.ಇನ್ನು ಪಿಜಿ ಪರವಾನಗೆ ನವೀಕರಣ ಮಾಡಲು ಸಾಧ್ಯವಾಗದೇ ಹಲವು ಪಿಜಿಗಳು ಮುಚ್ಚುತ್ತಿದೆ ಎಂದಿದ್ದಾರೆ.