ಕಚ್ಚಾ ತೈಲ ದರ ಇಳಿಕೆ: ಇನ್ಮೇಲೆ ಸೆನ್ಸೆಕ್ಸ್ ಲಾಭ ಫಿಕ್ಸ್!

First Published 2, Nov 2018, 1:18 PM IST
Sensex Rallies Over 400 Points Over After Crude Prices
Highlights

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ! ಮುಂಬೈ ಷೇರು ಸೂಚ್ಯಂಕದಲ್ಲಿ ಗಮನಾರ್ಹ ಏರಿಕೆ! ಸಕರಾತ್ಮಕ ಬೆಳವಣಿಗೆ ಕಾಣುತ್ತಿರುವ ಏಷ್ಯಾದ ಷೇರು ಪೇಟೆ! ಡಾಲರ್ ವಿರುದ್ಧ ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ! ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಷೇರು ಮೌಲ್ಯ ಏರಿಕೆ

ಮುಂಬೈ(ನ.2): ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ, ಇಂದು ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 ಅಂಶ ಏರಿಕೆ ಕಂಡು 34,845 ಅಂಕಗಳನ್ನು ತಲುಪಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ಸಹ 122.85 ಅಂಶ ಏರಿಕೆ ಕಂಡು, 10,503 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕ- ಚೀನಾ ವಾಣಿಜ್ಯ ಸಮರದ ನಡುವೆಯೂ ಏಷ್ಯಾದ ಪೇಟೆಗಳು ಸಕರಾತ್ಮಕ ಬೆಳವಣಿಗೆ ಕಾಣುತ್ತಿವೆ. ಬಿಎಸ್​ಇ ಶೇ 1.20 ಮತ್ತು ನಿಫ್ಟಿ ಶೇ 1.18 ರಷ್ಟು ಏರಿಕೆಯಾಗಿವೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಏಳು ತಿಂಗಳ ಬಳಿಕ ಕನಿಷ್ಠ ದರಕ್ಕೆ ಇಳಿಕೆಯಾಗಿದೆ. ಶೇ 3.48 ರಷ್ಟು ದರ ಕುಸಿದು 73 ಡಾಲರ್​ನಲ್ಲಿದೆ. ಏಳು ತಿಂಗಳ ಹಿಂದೆ 72.65 ಡಾಲರ್​ ಕನಿಷ್ಠ ದರ ಹೊಂದಿತ್ತು.
 
ಡಾಲರ್ ವಿರುದ್ಧ ಬಲಗೊಳ್ಳುತ್ತಿರುವ ರೂಪಾಯಿ, ಏಷ್ಯಾ ಮಾರುಕಟ್ಟೆಗಳ ವೃದ್ಧಿ, ಷೇರು ಪೇಟೆಯ ಹೂಡಿಕೆದಾರರಲ್ಲಿ ಭರವಸೆ ಮೂಡಿಸಿವೆ. ದೇಶೀಯ ಸಾಂಸ್ಥಿಕ (ಡಿಐಐ) ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದಿನದ ವಹಿವಾಟಿನಲ್ಲಿ ಆಸಕ್ತಿ ತೋರಿಸಿದ್ದಾರೆ. 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕ್ಷೀಣಿಸಿದ್ದರಿಂದ ಎಚ್​ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಷೇರು ಮೌಲ್ಯ ಶೇ. 3.76 ರಷ್ಟು ಏರಿಕೆ ಆಗಿವೆ. ಗ್ರಾಹಕ ಬಳಕೆಯ ಉತ್ಪನ್ನ ಹಾಗೂ ತೈಲ ಮತ್ತು ಅನಿಲ ವಲಯದ ಸೂಚ್ಯಂಕ ಸಹ ಧನಾತ್ಮಕ ವಹಿವಾಟು ನಡೆಸಿ ಶೇ 2.65 ರಷ್ಟು ಲಾಭ ಗಳಿಸಿವೆ.

loader