ಷೇರುಪೇಟೆಗೆ ಕೊರೋನಾ ದಾಳಿ: 7 ತಿಂಗಳ ಬಳಿಕ ಮಹಾ ಕುಸಿತ!
ಷೇರುಪೇಟೆಗೆ ಕೊರೋನಾ ದಾಳಿ| 1400 ಅಂಕ ಕುಸಿದ ಸೆನ್ಸೆಕ್ಸ್| 6.6 ಲಕ್ಷ ಕೋಟಿ ರು. ನಷ್ಟ| 7 ತಿಂಗಳ ಬಳಿಕ ಷೇರುಪೇಟೆ ಮಹಾ ಕುಸಿತ
ನವದೆಹಲಿ(ಡಿ.22): ವಿಶ್ವ ಆರ್ಥಿಕತೆಯನ್ನು ಕಂಗೆಡಿಸಿರುವ ಕೊರೋನಾ ವೈರಸ್ ಅಬ್ಬರ ಲಸಿಕೆಗಳ ಬಳಕೆಯಿಂದಾಗಿ ಶೀಘ್ರದಲ್ಲೇ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದ್ದಾಗಲೇ ಬ್ರಿಟನ್‌ನಲ್ಲಿ ಕೊರೋನಾದ ಹೊಸ ಅವತಾರ ಕಂಡುಬಂದಿರುವುದು ಆರ್ಥಿಕ ಕ್ಷೇತ್ರದಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದೆ. ಮುಂಬೈನ ಷೇರು ಸಂವೇದಿ ಸೂಚ್ಯಂಕ ‘ಸೆನ್ಸೆಕ್ಸ್’ ಸೋಮವಾರ 1407 ಅಂಕಗಳಷ್ಟುಕುಸಿತ ದಾಖಲಿಸಿದ್ದು, ಹೂಡಿಕೆದಾರರ 6.6 ಲಕ್ಷ ಕೋಟಿ ರು. ನೋಡನೋಡುತ್ತಿದ್ದಂತೆ ಮಾಯವಾಗಿದೆ. ಮೇ 4ರ ಬಳಿಕ ಷೇರುಪೇಟೆ ಕಂಡ ಅತಿದೊಡ್ಡ ಕುಸಿತ ಇದಾಗಿದೆ.
ಲಾಕ್‌ಡೌನ್ ತೆರವಾಗಿ ಆರ್ಥಿಕತೆಯಲ್ಲಿ ಚೇತರಿಕೆಯ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಷೇರು ಸೂಚ್ಯಂಕಗಳು ದಾಖಲೆಯ ಏರಿಕೆ ಕಂಡಿದ್ದವು. 6 ದಿನಗಳಿಂದ ಸೆನ್ಸೆಕ್ಸ್ ಏರಿಕೆ ದಾಖಲಿಸಿತ್ತು. ಆದರೆ ಬ್ರಿಟನ್‌ನಲ್ಲಿ ಕಂಡುಬಂದಿರುವ ವೈರಸ್ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿವಿಧ ದೇಶಗಳು ಬ್ರಿಟನ್ ವಿಮಾನಗಳಿಗೆ ನಿರ್ಬಂಧ ಹೇರಿದ ಸುದ್ದಿ ಷೇರುಪೇಟೆಗೆ ಕಹಿ ಗುಳಿಗೆಯಾಯಿತು.
ಸೆನ್ಸೆಕ್ಸ್ 1406.73 ಅಂಕ ಇಳಿಕೆ ದಾಖಲಿಸಿ 45,553.96ರಲ್ಲಿ ವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ 432.15 ಅಂಕಗಳ ಇಳಿಕೆಯೊಂದಿಗೆ 13,328ರಲ್ಲಿ ಅಂತ್ಯವಾಯಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 1600 ಅಂಕ ಕುಸಿದಿತ್ತು. ಬಳಿಕ ಚೇತರಿಸಿಕೊಂಡಿತು.
ಸೆನ್ಸೆಕ್ಸ್‌ನಲ್ಲಿನ 30 ಹಾಗೂ ನಿಫ್ಟಿಯಲ್ಲಿನ ಎಲ್ಲ 50 ಷೇರುಗಳು ಕುಸಿತ ದಾಖಲಿಸಿದವು. ವಾಯುಯಾನ ಕ್ಷೇತ್ರದ ಷೇರುಗಳಿಗೆ ಹೆಚ್ಚಿನ ಹೊಡೆತ ಬಿತ್ತು. ಕಚ್ಚಾತೈಲ ಬೆಲೆಯೂ ಕುಸಿದ ಹಿನ್ನೆಲೆಯಲ್ಲಿ ತೈಲೋದ್ಯಮದ ಷೇರುಗಳು ಇಳಿಕೆ ಕಂಡವು. ಕಳೆದ 6 ದಿನಗಳಿಂದ ಏರಿದ್ದ ಷೇರುಪೇಟೆಯಲ್ಲಿ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿದ್ದು ಕೂಡ ಸೂಚ್ಯಂಕದ ಇಳಿಕೆಗೆ ಕಾರಣವಾಯಿತು ಎಂದು ಹೇಳಲಾಗಿದೆ.
ಹಲವು ದೇಶಗಳಲ್ಲಿ ಕೊರೋನಾದ ಹೊಸ ಮಾದರಿ ಪತ್ತೆ ಆತಂಕ, ವಿಮಾನ ಸಂಚಾರ ರದ್ದು, ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ನಡೆಸುತ್ತಿರುವ ಮಾತುಕತೆ ಮುರಿದು ಬೀಳುವ ಭೀತಿ,ಹೂಡಿಕೆದಾರರು ಲಾಭಕ್ಕೆ ಮುಗಿಬಿದ್ದದ್ದು, ಜಾಗತಿಕ ಷೇರುಪೇಟೆಗಳ ಇಳಿಕೆ,ಹೊಸ ಕೊರೋನಾ ವೈರಸ್‌ನಿಂದ ತೈಲಕ್ಕೆ ಬೇಡಿಕೆ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ತೈಲ ಬೆಲೆ ಕುಸಿತದ ವಿಷಯಗಳು ಷೇರುಪೇಟೆ ಮೇಲೆ ಗಂಭೀರ ಪರಿಣಾಮ ಬೀರಿದವು.
ಕುಸಿತಕ್ಕೆ ಕಾರಣಗಳು
1. ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಹೊಸ ಮಾದರಿ ವ್ಯಾಪಕವಾಗಿ ಹಬ್ಬುವ ಆತಂಕ
2. ಬ್ರಿಟನ್ ವಿಮಾನಗಳಿಗೆ ಹಲವು ದೇಶಗಳು ನಿರ್ಬಂಧ ಏರಿದ್ದರಿಂದ ವೈಮಾನಿಕ ಕಂಪನಿಗಳ ಷೇರು ಕುಸಿತ
3. ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ನಡೆಸುತ್ತಿರುವ ಮಾತುಕತೆ ಮುರಿದು ಬೀಳುವ ಭೀತಿ
4. ಸೂಚ್ಯಂಕ ಹಲವು ದಿನಗಳಿಂದ ಏರುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭಕ್ಕೆ ಮುಗಿಬಿದ್ದದ್ದು
5. ವಿವಿಧ ಜಾಗತಿಕ ಮಾರುಕಟ್ಟೆಗಳಲ್ಲಿ ಮಂದಗತಿಯ ವಹಿವಾಟು ನಡೆದಿದ್ದು ಭಾರತದ ಮೇಲೂ ಪರಿಣಾಮ
6. ಹೊಸ ಕೊರೋನಾ ವೈರಸ್‌ನಿಂದ ತೈಲಕ್ಕೆ ಬೇಡಿಕೆ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ತೈಲ ಬೆಲೆ ಕುಸಿತ