* ಜಾಗತಿಕ ಬೆಳವಣಿಗೆಗಳ ಜೊತೆಗೆ ಎಸ್‌ಬಿಐ, ಎಚ್‌ಡಿಎಫ್‌ಸಿ ಸೇರಿದಂತೆ ಬ್ಯಾಂಕಿಂಗ್‌ ವಲಯದ ಉತ್ತಮ ಸಾಧನೆ* 54,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್* 128 ಅಂಕ ಏರಿಕೆ ಕಂಡ ನಿಫ್ಟಿ

ಮುಂಬೈ(ಆ.05): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಬುಧವಾರ 546 ಅಂಕಗಳ ಏರಿಕೆ ಕಂಡು 53,369 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 54000 ಅಂಕಗಳ ಗಡಿ ದಾಟಿದ್ದು ಇದೆ ಮೊದಲು. ಮತ್ತೊಂದೆಡೆ ನಿಫ್ಟಿಕೂಡಾ 128 ಅಂಕ ಏರಿಕೆ ಕಂಡು 16246ರಲ್ಲಿ ಮುಕ್ತಾಯವಾಯಿತು. ಇದು ಕೂಡಾ ನಿಫ್ಟಿಯ ಸಾರ್ವಕಾಲಿಕ ಮುಕ್ತಾಯದ ದಾಖಲೆಯಾಗಿದೆ.

ಜಾಗತಿಕ ಬೆಳವಣಿಗೆಗಳ ಜೊತೆಗೆ ಎಸ್‌ಬಿಐ, ಎಚ್‌ಡಿಎಫ್‌ಸಿ ಸೇರಿದಂತೆ ಬ್ಯಾಂಕಿಂಗ್‌ ವಲಯದ ಉತ್ತಮ ಸಾಧನೆ ಸೆನ್ಸೆಕ್ಸ್‌ ಅನ್ನು ಸತತ 3 ದಿನಗಳಿಂದ ಏರು ಮುಖದಲ್ಲಿ ಕೊಂಡೊಯ್ದಿದೆ. ಸೆನ್ಸೆಕ್ಸ್‌ ಪಟ್ಟಿಯಲ್ಲಿರುವ 30 ಕಂಪನಿಗಳ ಪೈಕಿ 14 ಕಂಪನಿಗಳ ಷೇರು ಬುಧವಾರ ಏರಿಕೆ ಕಂಡರೆ, 16 ಇಳಿಮುಖವಾದವು. ಆದರೂ ಒಟ್ಟಾರೆ ಸೆನ್ಸೆಕ್ಸ್‌ ಉತ್ತಮ ಏರಿಕೆಯೊಂದಿಗೇ ಮುಕ್ತಾಯವಾಯಿತು.

2021ರ ಜ.21ರಂದು ಮೊದಲ ಬಾರಿ ಸೆನ್ಸೆಕ್ಸ್‌ 50000 ಅಂಕಗಳ ಗಡಿ ದಾಟಿತ್ತು. ಫೆ.3ರಂದು ಮೊದಲ ಬಾರಿಗೆ 50000 ಅಂಕಗಳ ಮೇಲೇ ಮುಕ್ತಾಯವಾಗಿತ್ತು. ಬಳಿಕ ಫೆ.8ರಂದು 51000, ಫೆ.15ರಂದು 52000, ಜು.7ರಂದು 53000 ಅಂಕಗಳ ಮೇಲೇ ಮುಕ್ತಾಯವಾಗಿತ್ತು. ಈ ವರ್ಷ ಇದುವರೆಗೆ ಸೆನ್ಸೆಕ್ಸ್‌ ಒಟ್ಟಾರೆ ಶೇ.13.86ರಷ್ಟುಏರಿಕೆ ಕಂಡಿದೆ.