ಮುಂಬೈ(ಜ.05): ಎರಡು ಕೊರೋನಾ ವೈರಸ್‌ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಭಾನುವಾರ ಅನುಮೋದನೆ ನೀಡಿದ ಸುದ್ದಿ ಷೇರುಪೇಟೆಯಲ್ಲೂ ಭಾರೀ ಸಂಭ್ರಮಕ್ಕೆ ಕಾರಣವಾಗಿದೆ. ಇದರ ಪ್ರತಿಫಲ ಎಂಬಂತೆ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 307 ಅಂಕಗಳ ಭರ್ಜರಿ ಏರಿಕೆ ಕಂಡು 48,176 ಅಂಕಗಳಲ್ಲಿ ಮುಕ್ತಾಯವಾಗಿದೆ.

ಸೆನ್ಸೆಕ್ಸ್‌ 48000 ಅಂಕಗಳ ಗಡಿ ದಾಟಿದ್ದು ಇದೇ ಮೊದಲು. ಇನ್ನು ನಿಫ್ಟಿಕೂಡ 114 ಅಂಕ ಏರಿಕೆ ದಾಖಲಿಸಿ 14,147 ಅಂಕದಲ್ಲಿ ಕೊನೆಗೊಂಡಿದೆ. ಇದು ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟ.

ಕೊರೋನಾ ಲಸಿಕೆಗೆ ಅನುಮತಿ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಗೆ ಇನ್ನಷ್ಟುಬಲ ತುಂಬಬಹುದು ಎಂಬ ನಿರೀಕ್ಷೆಗಳ ಜೊತೆಗೆ, ಡಾಲರ್‌ ವಿರುದ್ಧ ರುಪಾಯಿ ಮೌಲ್ಯ ಏರಿಕೆ, ಜಾಗತಿಕ ಮಾರುಕಟ್ಟೆಯ ಚೇತರಿಕೆ ಮತ್ತು ದೇಶೀಯ ಆಟೋಮೊಬೈಲ್‌ ವಲಯ ಸೇರಿದಂತೆ ಉದ್ಯಮ ವಲಯದಲ್ಲಿ ಧನಾತ್ಮಕ ಬೆಳವಣಿಗೆ ಸುದ್ದಿಗಳೂ ಕೂಡ ಷೇರುಪೇಟೆಯ ಚೇತರಿಕೆಗೆ ನೆರವಾದವು.

ಐಟಿ ವಲಯದ ಕಂಪನಿಗಳಾದ ಟಿಸಿಎಸ್‌, ಎಚ್‌ಸಿಎಲ್‌, ಟೆಕ್‌ ಮಹೀಂದ್ರಾ, ಇಸ್ಫೋಸಿಸ್‌ ಮತ್ತು ಒಎನ್‌ಜಿಸಿ, ಎಚ್‌ಯುಎಲ್‌, ಸನ್‌ಫಾರ್ಮಾ, ಎಲ್‌ ಆ್ಯಂಡ್‌ ಟಿ ಕಂಪನಿಯ ಷೇರುಗಳು ಗಣನೀಯ ಏರಿಕೆ ಕಂಡವು.