ಮುಂಬೈ(ಡಿ.04): ಮಹತ್ವದ ಬೆಳವಣಿಗೆಯೊಂದರಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ಸಂಸ್ಥೆ ತನ್ನ ಸ್ಪೆಕ್ಟ್ರಮ್ ಅನ್ನು ಸಹೋದರ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಗೆ ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ರಿಲಯನ್ಸ್ ಕಮ್ಯುನಿಕೇಶನ್ಸ್ ಸ್ಪೆಕ್ಟ್ರಮ್ ಅನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡಲು ಕೇಂದ್ರ ಟೆಲಿಕಾಂ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಈ ಕುರಿತು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಕೂಡ ಸಲ್ಲಿಸಿತ್ತು.

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ನಷ್ಟದಲ್ಲಿದ್ದು, ಸಾವಿರಾರು ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. ಅದರಂತೆ ಸಂಸ್ಥೆಯ ಸ್ಪೆಕ್ಟ್ರಮ್ ನ್ನು ಸಹೋದರ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋಗೆ ಮಾರಾಟ ಮಾಡಲು ಅನಿಲ್ ಮುಂದಾಗಿದ್ದರು.

ಆದರೆ ಇದಕ್ಕೆ ಆಕ್ಷೇಪ ಸಲ್ಲಿಸಿದ್ದ ಟಲಿಕಾಂ ಇಲಾಖೆ, ರಿಲಯನ್ಸ್ ಕಮ್ಯುನಿಕೇಶನ್ಸ್ ಸ್ಪೆಕ್ಟ್ರಮ್ ಮಾರಾಟಕ್ಕೆ ತಡೆಯೊಡ್ಡಿತ್ತು. ಆದರೆ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ರಿಲಯನ್ಸ್ ಕಮ್ಯುನಿಕೇಶನ್ಸ್ ತನ್ನ ಸ್ಪೆಕ್ಟ್ರಮ್ ನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡಲು ಅಡ್ಡಿಯಿಲ್ಲ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದ್ದು, ಈ ಒಪ್ಪಂದದಿಂದ ಮತ್ತೆ ಅಂಬಾನಿ ಸಹೋದರರು ಹತ್ತಿರವಾಗಲಿದ್ದಾರೆ ಎಂಬ ಮಾತುಗಳು ಉದ್ಯಮ ವಲಯದಲ್ಲಿ ಕೇಳಿ ಬರುತ್ತಿವೆ.