ನವದೆಹಲಿ [ಜು.13] : ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ಹಣ ವರ್ಗಾವಣೆ ಶುಲ್ಕವನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದ ಬೆನ್ನಲ್ಲೇ, ಎಸ್‌ಬಿಐ ಜು.1ರಿಂದ ಅನ್ವಯವಾಗುವಂತೆ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ. 

ಅಲ್ಲದೇ ಮೊಬೈಲ್‌ ಫೋನ್‌ಗಳ ಮೂಲಕ ಐಎಂಪಿಎಸ್‌ (ತಕ್ಷಣ ಹಣ ವರ್ಗಾವಣೆ ಸೇವೆ) ಮೂಲಕ ಹಣ ವರ್ಗಾವಣೆಗೂ ಆ.1ರಿಂದ ಶುಲ್ಕ ವಿಧಿಸದೇ ಇರಲು ನಿರ್ಧರಿಸಿದೆ. 

ಆರ್‌ಟಿಜಿಎಸ್‌ ವ್ಯವಸ್ಥೆ 2 ಲಕ್ಷಕ್ಕಿಂತ ಹೆಚ್ಚಿನ ಹಣ ವರ್ಗಾವಣೆಗೆ ಬಳಕೆಯಾದರೆ ಎನ್‌ಇಎಫ್‌ಟಿ ವ್ಯವಸ್ಥೆ 2 ಲಕ್ಷ ರು.ವರೆಗೆ ಹಣ ವರ್ಗಾವಣೆಗೆ ಬಳಕೆ ಆಗುತ್ತಿದೆ. ಡಿಜಿಟಲ್‌ ಹಣ ಪಾವತಿಯನ್ನು ಉತ್ತೇಜಿಸುವ ನಿಟ್ಟಿನಿಂದ ಯೋನೋ ಮೊಬೈಲ್‌ ಆ್ಯಪ್‌ ಅಥವಾ ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಹಣ ವರ್ಗಾವಣೆಗೆ ಶುಲ್ಕ ರದ್ದುಪಡಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.