SBI Hikes Interest:ಸಾಲದ ಬಡ್ಡಿದರ ಏರಿಸಿದ ಎಸ್ ಬಿಐ; ಸಾಲಗಾರರಿಗೆ ಮತ್ತೆ ಇಎಂಐ ಹೆಚ್ಚಳದ ಬಿಸಿ
*ಸಾಲದ ಮೇಲಿನ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಿದ ಎಸ್ ಬಿಐ
*ಸಾಲಗಾರರ ಮೇಲೆ ಹೆಚ್ಚಿದ ಹೊರೆ
*ಗೃಹ, ವಾಹನ ಹಾಗೂ ವೈಯಕ್ತಿಕ ಸಾಲಗಳು ಇನ್ನು ದುಬಾರಿ
ನವದೆಹಲಿ (ಮೇ 15): ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ (Repo Rate) ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡ ಇಂದಿನಿಂದ (ಜೂ.15) ಜಾರಿಗೆ ಬರುವಂತೆ ಸಾಲಗಳ (Loans) ಮೇಲಿನ ಬಡ್ಡಿದರವನ್ನು (Interest rate) 20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ.
ಒಂದು ದಿನ, ಒಂದು ತಿಂಗಳು ಹಾಗೂ 3 ತಿಂಗಳ ಅವಧಿಯ ಸಾಲಗಳ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಅನ್ನು ಪ್ರಸ್ತುತವಿರುವ ಶೇ.6.85ರಿಂದ ಶೇ.7.05ಕ್ಕೆ ಹೆಚ್ಚಿಸಲಾಗಿದೆ. ಇನ್ನು ಆರು ತಿಂಗಳ ಅವಧಿಯ ಸಾಲಗಳ ಮೇಲಿನ ಬಡ್ಡಿದರವನ್ನು ಪ್ರಸ್ತುತವಿರುವ ಶೇ.7.15ರಿಂದ ಶೇ.7.35ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಒಂದು ವರ್ಷದ ಸಾಲದ ಮೇಲಿನ ಬಡ್ಡಿದರ ಪ್ರಸ್ತುತವಿರುವ ಶೇ.7.20ರಿಂದ ಶೇ.7.40ಕ್ಕೆ ಹೆಚ್ಚಳವಾಗಲಿದೆ. ಇನ್ನು ಮೂರು ವರ್ಷಗಳ ಅವಧಿಯ ಸಾಲಗಳ ಮೇಲಿನ ಬಡ್ಡಿದರ ಪ್ರಸ್ತುತವಿರುವ ಶೇ.7.50ರಿಂದ ಶೇ.7.70ಕ್ಕೆ ಹೆಚ್ಚಳವಾಗಲಿದೆ.
WPI Inflation: ಚಿಲ್ಲರೆ ಹಣದುಬ್ಬರ ತಗ್ಗಿದರೂ ಕೆಳಗಿಳಿಯದ WPI;ಮೇನಲ್ಲಿ ಶೇ.15.88ಕ್ಕೆ ಏರಿಕೆಯಾದ ಸಗಟು ಹಣದುಬ್ಬರ
ಗೃಹ ಸಾಲ
ಎಸ್ ಬಿಐ ಗೃಹ ಸಾಲದ ಮೇಲಿನ ಬಡ್ಡಿದರ ಸಿಬಿಲ್ ಸ್ಕೋರ್ (CIBIL score) ಆಧರಿಸಿ ಶೇ.7.05ರಿಂದ ಶೇ. 7.55ರ ನಡುವೆ ಇದೆ. ಈ ತಿಂಗಳ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಎಸ್ ಬಿಐ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಈಗಾಗಲೇ ಹೆಚ್ಚಿಸಿದೆ. ಪ್ರಸ್ತುತ 800 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರೋರಿಗೆ ಎಸ್ ಬಿಐ ಗೃಹ ಸಾಲಕ್ಕೆ ಶೇ. 7.05 ಬಡ್ಡಿ ವಿಧಿಸುತ್ತಿದೆ. ಇನ್ನು 750-799 ಸಿಬಿಲ್ ಸ್ಕೋರ್ ಹೊಂದಿರೋರಿಗೆ ಶೇ.7.15 ಬಡ್ಡಿದರ ವಿಧಿಸಲಾಗುತ್ತಿದೆ. 700-749 ಸಿಬಿಲ್ ಸ್ಕೋರ್ ಹೊಂದಿದ್ರೆ ಶೇ.7.25 ಹಾಗೂ 650-699 ಇದ್ರೆ ಶೇ.7.35 ಬಡ್ಡಿ ವಿಧಿಸಲಾಗುತ್ತಿದೆ. 550-649 ಸಿಬಿಲ್ ಸ್ಕೋರ್ ಹೊಂದಿರೋರಿಗೆ ಅತ್ಯಧಿಕ ಅಂದ್ರೆ ಶೇ.7.55 ಬಡ್ಡಿದರವಿದೆ.
ವಾಹನ ಸಾಲ
ಎಸ್ ಬಿಐ ಕಾರ್ ಲೋನ್, ಎನ್ ಆರ್ ಐ ಕಾರ್ ಲೋನ್ ಹಾಗೂ ಅಸ್ಯುರ್ಡ್ ಕಾರ್ ಲೋನ್ ಯೋಜನೆಗಳ ಮೇಲೆ ಶೇ.7.45 ರಿಂದ ಶೇ.8.15 ಬಡ್ಡಿದರ ವಿಧಿಸಲಾಗುತ್ತಿದೆ. 757 ಹಾಗೂ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಗಳಿಗೆ 3-5 ವರ್ಷಗಳ ಅವಧಿಯ ಹೊಸ ಕಾರು ಸಾಲಕ್ಕೆ ಎಸ್ ಬಿಐ ಶೇ.7.45 ಬಡ್ಡಿ ವಿಧಿಸುತ್ತದೆ. ಇದೇ ಕ್ರೆಡಿಟ್ ಸ್ಕೋರ್ ಗೆ 5 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಸಾಲಕ್ಕೆ ಶೇ.7.55 ಬಡ್ಡಿದರವಿದೆ. 721-756 ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ 3-5 ವರ್ಷಗಳ ಹೊಸ ಕಾರ್ ಸಾಲಕ್ಕೆ ಶೇ.7.70 ಬಡ್ಡಿದರವಿದೆ. 5 ವರ್ಷ ಮೇಲ್ಪಟ್ಟ ಸಾಲಕ್ಕೆ ಇದೇ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಶೇ.7.80 ಬಡ್ಡಿ ವಿಧಿಸಲಾಗುತ್ತಿದೆ. 689-720 ಸಿಬಿಲ್ ಸ್ಕೋರ್ ಹೊಂದಿರೋರಿಗೆ ಬ್ಯಾಂಕ್ 3-5 ವರ್ಷಗಳ ಅವಧಿಯ ಸಾಲಕ್ಕೆ ಶೇ.7.95 ಹಾಗೂ 5 ವರ್ಷ ಮೇಲ್ಪಟ್ಟ ಸಾಲಕ್ಕೆ ಶೇ.8.05 ಬಡ್ಡಿ ವಿಧಿಸಲಾಗುತ್ತಿದೆ. 606-688 ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ 3-5 ವರ್ಷಗಳ ಅವಧಿಗೆ ಶೇ.8.05 ಬಡ್ಡಿದರ ಹಾಗೂ 5 ವರ್ಷಗಳು ಮೇಲ್ಪಟ್ಟವರಿಗೆ ಶೇ.8.15 ಬಡ್ಡಿದರ ನೀಡಲಾಗುತ್ತದೆ.
Interest Rate Hike:ಎಫ್ ಡಿ ಹೊಂದಿರೋರಿಗೆ ಗುಡ್ ನ್ಯೂಸ್; ಬಡ್ಡಿದರ ಹೆಚ್ಚಿಸಿದ ಎಸ್ ಬಿಐ, ಪಿಎನ್ ಬಿ
ವೈಯಕ್ತಿಕ ಸಾಲ
ವೈಯಕ್ತಿಕ ಸಾಲದ ಡಿಯಲ್ಲಿ ಅನೇಕ ಯೋಜನೆಗಳಿದ್ದು, ಬಡ್ಡಿದರ ಕೂಡ ಒಂದರಿಂದ ಒಂದಕ್ಕೆ ವ್ಯತ್ಯಾಸವಾಗುತ್ತದೆ. ಸೇನೆ, ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಹಾಗೂ ಭಾರತೀಯ ಕರಾವಳಿ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರೋರಿಗೆ ಶೇ.9.80-ಶೇ.11.30 ಬಡ್ಡಿದರದಲ್ಲಿ ಟರ್ಮ್ ಲೋನ್ ಸೌಲಭ್ಯ ಲಭ್ಯವಿದೆ. ಇನ್ನು ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ, ಪೊಲೀಸ್, ರೈಲ್ವೆ ಹಾಗೂ ರತ್ನ ಸ್ಥಾನಮಾನದಡಿಯಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಉದ್ಯೋಗಿಗಳಿಗೆ ಶೇ.9.80-ಶೇ.12.30 ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ಎಸ್ ಬಿಐ ನೀಡುತ್ತದೆ.ಇನ್ನು ಕಾರ್ಪೋರೇಟ್ ಉದ್ಯೋಗದ ಹೊರತಾದ ಅರ್ಜಿದಾರರಿಗೆ ವೈಯಕ್ತಿಕ ಸಾಲದ ಮೇಲೆ ಶೇ.10.80-ಶೇ.12.30 ಬಡ್ಡಿ ವಿಧಿಸಲಾಗುತ್ತದೆ.
ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ , ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಈಗಾಗಲೇ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಿಸಿವೆ.