*ಬಿಪಿಎಲ್ ಆರ್ 70 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ*ಹೊಸ ದರ ಸೆಪ್ಟೆಂಬರ್ 15ರಿಂದಲೇ ಅನ್ವಯ*ಎಸ್ ಬಿಐ ಮೂಲ ದರ ಶೇ. 8.7ಕ್ಕೆ ಹೆಚ್ಚಳ
ನವದೆಹಲಿ (ಸೆ.16): ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು (ಬಿಪಿಎಲ್ ಆರ್) 70 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ. ಈ ಹೆಚ್ಚಳದಿಂದ ಬಿಪಿಎಲ್ ಆರ್ ದರ ಸೆಪ್ಟೆಂಬರ್ 15ರಿಂದಲೇ ಅನ್ವಯವಾಗುವಂತೆ ವಾರ್ಷಿಕ ಶೇ.13.45ಕ್ಕೆ ತಲುಪಿದೆ ಎಂದು ಎಸ್ ಬಿಐ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ಇದ್ರಿಂದ ಬಿಪಿಎಲ್ ಆರ್ ಆಧಾರಿತ ಸಾಲಗಳು ದುಬಾರಿಯಾಗಲಿವೆ. ಈ ಹಿಂದೆ ಬಿಪಿಎಲ್ ಆರ್ ದರ ಶೇ.12.75 ರಷ್ಟಿತ್ತು. ಜೂನ್ ನಲ್ಲಿ ಕೂಡ ಬಿಪಿಎಲ್ ಆರ್ ದರ ಹೆಚ್ಚಿಸಲಾಗಿತ್ತು. ಹಾಗೆಯೇ ಎಸ್ ಬಿಐ ಮೂಲ ದರವನ್ನು (ಬೇಸ್ ದರ) ಕೂಡ ಶೇ. 8.7ಕ್ಕೆ ಹೆಚ್ಚಳ ಮಾಡಿದೆ. ಇದ್ರಿಂದ ಮೂಲ ದರದ ಆಧಾರದಲ್ಲಿ ಸಾಲ ಪಡೆದವರ ಇಎಂಐ ಕೂಡ ಹೆಚ್ಚಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಹಣಕಾಸು ನೀತಿ ಸಮಿತಿ ಸಭೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಎಸ್ ಬಿಐ ಬಡ್ಡಿದರ ಏರಿಕೆ ಮಾಡಿದೆ.
ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯನ್ನು ಸೆಪ್ಟೆಂಬರ್ 28ರಿಂದ 30ರ ತನಕ ನಿಗದಿಪಡಿಸಲಾಗಿದೆ. ಆಗಸ್ಟ್ ನಲ್ಲಿ ಹಣದುಬ್ಬರ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಭೆಯಲ್ಲಿ ಕೂಡ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶ: ಸಿಎಂ ಬೊಮ್ಮಾಯಿ
ಎಸ್ ಬಿಐ ಗೃಹ ಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು ಸೆಪ್ಟೆಂಬರ್ ನಲ್ಲಿ ಪರಿಷ್ಕರಿಸಿಲ್ಲ. ಆಗಸ್ಟ್ 15ಕ್ಕೆ ಅನ್ವಯವಾಗುವಂತೆ ಎಸ್ ಬಿಐ ಇಬಿಎಲ್ ಆರ್ (EBLR) ಶೇ.8.05%+CRP+BSP ಇದೆ. ಹಾಗೆಯೇ ಆರ್ ಎಲ್ ಎಲ್ ಆರ್ (RLLR) 7.65%+CRP ರಷ್ಟಿದೆ. ಆದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ರಿಸ್ಕ್ ಪ್ರೀಮಿಯಂ ಅನ್ನು ಎಸ್ ಬಿಐ ಚಾರ್ಜ್ ಮಾಡುತ್ತದೆ. ಅಂದ್ರೆ 800ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿ ನಿರಂತರ ಗೃಹ ಸಾಲದ ಅಡಿಯಲ್ಲಿ ಶೇ.7.55 ಕನಿಷ್ಠ ಬಡ್ಡಿದರ ಪಾವತಿಸುತ್ತಾನೆ. ಇವರಿಗೆ ಯಾವುದೇ ರಿಸ್ಕ್ ಪ್ರೀಮಿಯಂ ವಿಧಿಸೋದಿಲ್ಲ. ರಿಸ್ಕ್ ಪ್ರೀಮಿಯಂ ಅನ್ನು ಸಿಬಿಲ್ ಸ್ಕೋರ್ (CIBIL score) ಆಧಾರದಲ್ಲಿ ವಿಧಿಸಲಾಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ರೆ ರಿಸ್ಕ್ ಪ್ರೀಮಿಯಂ ಕೂಡ ಹೆಚ್ಚಿರುತ್ತದೆ.
750ರಿಂದ 799 ಕ್ರೆಡಿಟ್ ಸ್ಕೋರ್ ಹೊಂದಿದ್ರೆ ಶೇ.8.15 ಬಡ್ಡಿದರ ವಿಧಿಸಲಾಗುತ್ತದೆ. ರಿಸ್ಕ್ ಪ್ರೀಮಿಯಂ 10 ಬೇಸಿಸ್ ಪಾಯಿಂಟ್ಸ್ ಆಗಿರುತ್ತದೆ. ಮಹಿಳಾ ಸಾಲಗಾರರು ಶೇ.0.05 ಬಡ್ಡಿದರ ಕಡಿತದ ಸೌಲಭ್ಯ ಪಡೆಯುತ್ತಾರೆ. ಬಡ್ಡಿದರ ಹೆಚ್ಚಳವಾದಂತೆ ಇಎಂಐ ಮೊತ್ತ ಕೂಡ ಏರಿಕೆಯಾಗುತ್ತದೆ. ಒಂದು ವೇಳೆ ಹೆಚ್ಚಳವಾದ ಇಎಂಐ ಪಾವತಿಸಲು ಕಷ್ಟವಾದ್ರೆ ಸಾಲದ ಅವಧಿಯನ್ನು ವಿಸ್ತರಿಸಬಹುದು.
ಸಾಲ ಪ್ರಕ್ರಿಯೆ ವೆಚ್ಚ ಕಡಿತ
ಗೃಹಸಾಲದ ಪ್ರಕ್ರಿಯೆ ವೆಚ್ಚವನ್ನು ಶೇ.50-100ರಷ್ಟು ಕಡಿತಗೊಳಿಸಿರೋದಾಗಿ ಎಸ್ ಬಿಐ ತಿಳಿಸಿದೆ. ಈ ಸೌಲಭ್ಯವು 2022ರ ಆಗಸ್ಟ್ 1ರಿಂದ 2022ರ ಸೆಪ್ಟೆಂಬರ್ 30ರ ತನಕ ಮಾತ್ರ ಲಭ್ಯವಿದೆ.
ತೆರಿಗೆದಾರರೇ ಗಮನಿಸಿ, ಅಕ್ಟೋಬರ್ 1ರಿಂದ ಈ ಎರಡು ನಿಯಮಗಳಲ್ಲಿ ಬದಲಾವಣೆ
ರೆಪೋ ದರ ಹೆಚ್ಚಳ ಸಾಧ್ಯತೆ
ಭಾರತದ ಚಿಲ್ಲರೆ ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.7ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.71ರಷ್ಟಿತ್ತು. ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಪರಿಣಾಮ ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ತಿಂಗಳ ಕೊನೆಯಲ್ಲಿ ನಡೆಯುವ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಹಣದುಬ್ಬರಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಮೇನಿಂದ ಈ ತನಕ ಆರ್ ಬಿಐ ರೆಪೋ ದರವನ್ನು 140 ಮೂಲಾಂಕಗಳಷ್ಟು ಏರಿಕೆ ಮಾಡಿದ್ದು, ಪ್ರಸ್ತುತ ಶೇ.5.4ಕ್ಕೆ ತಲುಪಿದೆ. ರೆಪೋ ದರ ಏರಿಕೆಯಿಂದ ಗೃಹ ಸಾಲ ಹಾಗೂ ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಇನ್ನೊಮ್ಮೆ ಹೆಚ್ಚಳವಾಗಲಿದೆ. ಈಗಾಗಲೇ ಬಡ್ಡಿದರ ಹೆಚ್ಚಳದಿಂದ ಶಾಕ್ ಆಗಿರುವ ಜನಸಾಮಾನ್ಯರಿಗೆ ಅದರ ಬಿಸಿ ಇನ್ನಷ್ಟು ತಟ್ಟಲಿದೆ.
