ಜೀರೋ ಬ್ಯಾಲೆನ್ಸ್ ಅಕೌಂಟ್ ಎಂದು ಖುಷಿಯೇ?| ಈ ಖಾತೆಗಳಿಂದಲೇ ಕೋಟಿ ಕೋಟಿ ರೂಪಾಯಿ ಲಾಭ ಗಳಿಸಿದ ಎಸ್‌ಬಿಐ| ಹೇಗೆ? ಇಲ್ಲಿದೆ ವಿವರ
ಬೆಂಗಳೂರು(ಏ.12): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇತರ ಕೆಲ ಬ್ಯಾಂಕ್‌ಗಳು ಜೀರೋ ಬ್ಯಾಲೆನ್ಸ್ ಅಕೌಂಟ್‌ನಿಂದ ಭಾರೀ ಲಾಭ ಗಳಿಸಿವೆ. ಐಐಟಿ ಬಾಂಬೆಯ ಒಂದು ಅಧ್ಯಯನದ ಅನ್ವಯ ಎಸ್‌ಬಿಐ ಜೀರೋ ಬ್ಯಾಲೆನ್ಸ್ ಅಕೌಂಟ್‌ನಿಂದ ಮುನ್ನೂರು ಕೋಟಿ ರೂಪಾಯಿ ಲಾಭ ಗಳಿಸಿದೆ. ಇದು 2015 ರಿಂದ 2020ರವರೆಗೆ, ಐದು ವರ್ಷದಲ್ಲಿ ಪಡೆದಿದ್ದಾಗಿದೆ. ಇನ್ನು ಬ್ಯಾಂಕ್ ಈ ಲಾಭ ಸರ್ವಿಸ್ ಚಾರ್ಜ್‌ನಿಂದ ಪಡೆದಿದೆ ಎಂದೂ ತಿಳಿದು ಬಂದಿದೆ.
ಹನ್ನೆರಡು ಕೋಟಿ ಜೀರೋ ಬ್ಯಾಲೆನ್ಸ್ ಖಾತೆಗಳು
ಪ್ರಧಾನ ಮಂತ್ರಿ ಜನ್‌ಧನ್ ಯೋಜನೆಯಡಿ ದೇಶಾದ್ಯಂತ ಕಡಿಮೆ ಆದಾಯವಿರುವ ಜನರು ಜೀರೋ ಬ್ಯಾಲೆನ್ಸ್ ಖಾತೆಗಳನ್ನು ತೆರೆದಿದ್ದಾರೆ. ಎಸ್‌ಬಿಐನ ವಿಭಿನ್ನ ಶಾಖೆಗಳಲ್ಲಿ ಇಂತಹ ಖಾತೆಗಳ ಸಂಖ್ಯೆ ಹನ್ನೆರಡು ಕೋಟಿ ದಾಟಿದೆ. ಐಐಟಿ ಬಾಂಬೆಯನ್ವಯ ಈ ಅಕೌಂಟ್‌ಗಳಿಂದಲೇ ಸರ್ವಿಸ್ ಚಾರ್ಜ್ ರೂಪದಲ್ಲಿ ಮುನ್ನೂರು ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ.
ಸರ್ವಿಸ್ ಚಾರ್ಜ್ ಎಷ್ಟು?
ಎಸ್‌ಬಿಐನ ಜೀರೋ ಬ್ಯಾಲೆನ್ಸ್ ಖಾತೆಗಳಿಗೆ ನಾಲ್ಕು ತಿಂಗಳವರೆಗೆ ನಡೆಸುವ ವ್ಯವಹಾರ ಉಚಿತವಾಗಿದೆ. ಇದಾದ ಬಳಿಕ ನಡೆಸುವ ವ್ಯವಹಾರಕ್ಕೆ ಖಾತೆಯೊಂದಕ್ಕೆ 17.70 ರೂ. ಚಾರ್ಜ್ ಮಾಡಲಾಗುತ್ತದೆ. ಇನ್ನು ಈ ವ್ಯವಹಾರ ಯುಪಿಐ ಐಡಿಯಿಂದ ನಡೆಸಿದರೆ ಮತ್ತಷ್ಟು ಚಾರ್ಜ್ ಕಟ್ ಮಾಡಲಾಗುತ್ತದೆ. ಇನ್ನು ಐಡಿಬಿಐ ಬ್ಯಾಂಕ್‌ನ ಎಟಿಎಂ ತಿಂಗಳಿಗೆ ಹತ್ತಕ್ಕಿಂತ ಹೆಚ್ಚು ಬಾರಿ ಬಳಸಿದರೆ ಇಪ್ಪತ್ತು ರೂಪಾಯಿ ಚಾರ್ಜ್ ಮಾಡಲಾಗುತ್ತದೆ.
2019-2020 ರಲ್ಲಿ 158 ಕೋಟಿ ಸಂಗ್ರಹ
ಜೀರೋ ಬ್ಯಾಲೆನ್ಸ್ ಖಾತೆಗಳಿಂದ ಅತೀ ಹೆಚ್ಚು ಹಣ ಗಳಿಸುವ ಬ್ಯಾಂಕ್‌ಗಳ ಪಟ್ಟಿಯಲ್ಲಿ ಎಸ್‌ಬಿಐ ಮೊದಲ ಸ್ಥಾನದಲ್ಲಿದೆ. ಇದು 2019-20 ರಲ್ಲಿ ಈ ಖಾತೆಗಳಿಂದ 158 ಕೋಟಿ ರೂಪಾಯಿ ಸಂಗ್ರಹಿಸಿದೆ. ಇನ್ನೂ ಇದಕ್ಕೂ ಮುನ್ನ 2018-19 ರಲ್ಲಿ ಕೇವಲ 72 ಕೋಟಿ ರೂಪಾಯಿ ಗಳಿಸಿತ್ತು.
