ಇನ್ನು ಪೈಲಟ್ – ಸಿಬ್ಬಂದಿ ಸೆಂಟ್ ಬಳಸೋ ಹಾಗಿಲ್ಲ!
ವಿಮಾನ ಪ್ರಯಾಣ ಸುರಕ್ಷಿತ ಹಾಗೂ ಆರಾಮದಾಯಕವಾಗೋದು ಸಿಬ್ಬಂದಿ ಹಾಗೂ ಪೈಲಟ್ ಪರ್ಫೆಕ್ಟ್ ಆಗಿದ್ದಾಗ. ನಿಯಮ ಪಾಲನೆ ಇಲ್ಲಿ ಬಹಳ ಮುಖ್ಯ. ಈಗ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಅದರ ವಿವರ ಇಲ್ಲಿದೆ.
ಭಾರತದಲ್ಲಿ ಪೈಲಟ್‌ಗಳು ಮತ್ತು ಫ್ಲೈಟ್ ಸಿಬ್ಬಂದಿಗೆ ಸಂಬಂದಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಪೈಲಟ್ ಹಾಗೂ ವಿಮಾನ ಸಿಬ್ಬಂದಿ, ಸುಗಂಧ ದ್ರವ್ಯದ ಬಳಕೆಯ ಮೇಲೆ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಈ ಪ್ರಸ್ತಾವನೆ ಮಾಡಿದೆ. ಇದನ್ನು ಅನುಮೋದಿಸಿದರೆ, ಪೈಲಟ್‌ಗಳು ಮತ್ತು ಫ್ಲೈಟ್ ಸಿಬ್ಬಂದಿ ಸದಸ್ಯರು ಹಾರಾಟದ ಸಮಯದಲ್ಲಿ ಸುಗಂಧ ದ್ರವ್ಯವನ್ನು ಬಳಸುವಂತಿಲ್ಲ.
ವಿಮಾನ (Flight) ಏರುವಾಗ ಪೈಲಟ್ ಹಾಗೂ ಸಿಬ್ಬಂದಿ, ಸುಗಂಧ ದ್ರವ್ಯ ಹಾಕಿಕೊಳ್ಳೋದು ಮಾಮೂಲಿ. ಆದ್ರೆ ಇನ್ಮುಂದೆ ಇದು ಸಾಧ್ಯವಾಗೋದಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ರೆ ಪೈಲಟ್ (Pilot) ಹಾಗೂ ಸಿಬ್ಬಂದಿ ವಿರುದ್ಧ ಡಿಜಿಸಿಎ (DGCA) ಕ್ರಮ ಕೈಗೊಳ್ಳಬಹುದು. ವರದಿಯ ಪ್ರಕಾರ, ಸುಗಂಧ ದ್ರವ್ಯಗಳ ಹೊರತಾಗಿ, ಆಲ್ಕೋಹಾಲ್ ಹೊಂದಿರುವ ಔಷಧಿಗಳು, ಮೌತ್‌ವಾಶ್ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಕೂಡ ಪೈಲಟ್ ಹಾಗೂ ಸಿಬ್ಬಂದಿ ಬಳಸುವಂತಿಲ್ಲ. ಅವುಗಳ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಈ ಉತ್ಪನ್ನಗಳು ಬ್ರೀಥಲೈಜರ್ ಪರೀಕ್ಷೆಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದೇ ಮುಖ್ಯ ಕಾರಣ.
ಸಿಮ್ ಮಾರಿ ಜೀವನ ನಡೆಸ್ತಿದ್ದ ವ್ಯಕ್ತಿಯೀಗ ಟಿವಿ ಸ್ಟಾರ್, ಬರೋಬ್ಬರಿ 80,000 ಕೋಟಿ ಕಂಪೆನಿಯ ಮಾಲೀಕ!
ವೈದ್ಯಕೀಯ ಪರೀಕ್ಷೆಯ ವಿಧಾನದಲ್ಲಿ ಬದಲಾವಣೆ : ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇತ್ತೀಚೆಗೆ ತನ್ನ ವೈದ್ಯಕೀಯ ಪರೀಕ್ಷೆಯ ವಿಧಾನದಲ್ಲಿ ಬದಲಾವಣೆ ತರುವ ಪ್ರಸ್ತಾವನೆ ಮುಂದಿಟ್ಟಿದೆ. ಪೈಲಟ್‌ಗಳು ಮತ್ತು ಸಿಬ್ಬಂದಿ ಆಲ್ಕೊಹಾಲ್ ಸೇವನೆ ಮಾಡಿದ್ದಾರೆಯೇ ಎಂದು ಪರಿಶೀಲಿಸುವ ಪ್ರಕ್ರಿಯೆಯನ್ನು ಬದಲಾಯಿಸಲಿದೆ. ಹೊಸ ನಿಯಮದ ಪ್ರಕಾರ, ಸಿಬ್ಬಂದಿ ಅಥವಾ ಪೈಲಟ್‌ಗಳು ಆಲ್ಕೋಹಾಲ್ ಹೊಂದಿರುವ ಯಾವುದೇ ಔಷಧ, ಸುಗಂಧ ದ್ರವ್ಯ ಅಥವಾ ಮೌತ್ ವಾಶ್ ಉತ್ಪನ್ನಗಳನ್ನು ಬಳಸುವಂತಿಲ್ಲ. ಅವರು ಈ ಉತ್ಪನ್ನಗಳನ್ನು ಬಳಕೆ ಮಾಡಿದಾಗ ಆಲ್ಕೋಹಾಲ್ ಪರೀಕ್ಷೆಯು ಧನಾತ್ಮಕವಾಗಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ನಂತರ ಆ ಉದ್ಯೋಗಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇದು ಪರೀಕ್ಷೆ ವೇಳೆ ಗೊಂದಲ ಸೃಷ್ಟಿಸುತ್ತದೆ. ಯಾವುದೇ ಸಿಬ್ಬಂದಿ ಅಂತಹ ಔಷಧಿಯನ್ನು ತೆಗೆದುಕೊಂಡರೆ, ಅವರು ಮೊದಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ಈ ಪ್ರಸ್ತಾವನೆಯಲ್ಲಿ ಹೇಳಲಾಗಿದೆ.
ಫೇಸ್‌ಬುಕ್, ಇನ್‌ಸ್ಟಾ ಖಾತೆಗೆ ಪ್ರತಿ ತಿಂಗಳು 1,164 ರೂ ಶುಲ್ಕ, 27 ರಾಷ್ಟ್ರದಲ್ಲಿ ಜಾರಿ!
ಸುಗಂಧ ದ್ರವ್ಯದ ಮೇಲೆ ನಿಷೇಧ ಏಕೆ? : ಸುಗಂಧ ದ್ರವ್ಯದಲ್ಲಿ ಅಲ್ಪ ಪ್ರಮಾಣದ ಆಲ್ಕೋಹಾಲ್ ಇರುತ್ತದೆ. ಸುಗಂಧ ದ್ರವ್ಯದಲ್ಲಿರುವ ಸ್ವಲ್ಪ ಆಲ್ಕೋಹಾಲ್, ಉಸಿರಾಟದ ವಿಶ್ಲೇಷಕದ ಪರೀಕ್ಷೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದ್ರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆಲ್ಕೋಹಾಲ್ ಪರೀಕ್ಷೆ ಮೇಲೆ ಇದು ಪರಿಣಾಮ ಬೀರುತ್ತದೆ ಎಂದಾದ್ರೆ ಸಮಸ್ಯೆಯಾಗುತ್ತದೆ.
ಭಾರತದಲ್ಲಿ ವಿಮಾನಯಾನ ಸಂಸ್ಥೆಗಳಲ್ಲಿ ಮದ್ಯಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ. ಪೈಲಟ್‌ಗಳು ಮತ್ತು ಸಿಬ್ಬಂದಿ ಸದಸ್ಯರು ಅದನ್ನು ಪಾಲನೆ ಮಾಡಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳು ಮತ್ತು ಡಿಜಿಸಿಎ ಎರಡೂ, ಕ್ಯಾಮೆರಾಗಳ ಕಣ್ಗಾವಲಿನ ಅಡಿಯಲ್ಲಿ ಈ ಪರೀಕ್ಷೆಯನ್ನು ಮಾಡುತ್ತದೆ. ವರ್ಷಗಳ ಹಿಂದೆ ಈ ಪರೀಕ್ಷೆಯಲ್ಲಿ ಫೇಲ್ ಆದ ಸಿಬ್ಬಂದಿ, ಶೇವಿಂಗ್ ನಂತ್ರ ಬಳಸಿದ ಲೋಷನ್, ಸುಗಂಧ ದ್ರವ್ಯ, ಹೋಮಿಯೋಪತಿ ಔಷಧಿಗಳನ್ನು ಕಾರಣ ಮಾಡಿದ್ದಾರೆ.
ಮೊದಲ ಬಾರಿಗೆ ವಿಮಾನ ಹಾರಾಟಕ್ಕೆ ಮೊದಲು ನಡೆಯುವ ಬಿಎ ಪರೀಕ್ಷೆಯಲ್ಲಿ ವಿಫಲರಾದ ಅಥವಾ ತಪ್ಪಿಸಿಕೊಂಡ ಸಿಬ್ಬಂದಿ ಸದಸ್ಯರ ಪರವಾನಿಗೆಯನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸುತ್ತಾರೆ. ಅದೇ ವ್ಯಕ್ತಿಗೆ ಎರಡನೇ ಬಾರಿಯೂ ಬಿಎ ಪಾಸಿಟಿವ್ ಬಂದ್ರೆ ಮೂರು ವರ್ಷಗಳ ಕಾಲ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ. ಮತ್ತು ಮೂರನೇ ಬಾರಿ ನಿರ್ಲಕ್ಷ್ಯ ಕಂಡುಬಂದಲ್ಲಿ ಪ್ರಸ್ತುತ ನಿಯಮಗಳ ಪ್ರಕಾರ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ. ಪ್ರಸ್ತುತ ನಾಗರಿಕ ವಿಮಾನಯಾನ ಅಗತ್ಯತೆಯ (CAR) ಕರಡನ್ನು ಸಾರ್ವಜನಿಕ ಒಳಹರಿವು ಮತ್ತು ಸಲಹೆಗಳಿಗಾಗಿ ಮುಂದಿಡಲಾಗಿದೆ ಎಂದು ಡಿಜಿಸಿಎ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.