ನವದೆಹಲಿ(ಫೆ.02): ನರೇಗಾ ಯೋಜನೆ ಸೇರಿದಂತೆ ಗ್ರಾಮೀಣ ಭಾರತದ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುತ್ತಿದ್ದ ಅನುದಾನಗಳನ್ನು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.

ಕಳೆದ ಬಜೆಟ್‌ಗೆ ಹೋಲಿಸಿದರೆ ನರೇಗಾ ಯೋಜನೆ ಅನುದಾನ ಶೇ.13ರಷ್ಟು ಕಡಿತಗೊಂಡಿದೆ. 2019-20ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿರುವ ಯೋಜನೆಗಳಿಗಾಗಿ 1.22 ಲಕ್ಷ ಕೋಟಿ ರು. ನೀಡಲಾಗಿತ್ತು. ಆದರೆ ಈ ಬಾರಿ ಈ ಮೊತ್ತ 1.20 ಲಕ್ಷ ಕೋಟಿ ರು.ಗೆ ಇಳಿದಿದೆ. ಪರಿಣಾಮ ನರೇಗಾ ಯೋಜನೆಗೆ ನೀಡಲಾಗುವ ಅನುದಾನ ಹೆಚ್ಚು ಕಡಿಮೆ 9,500 ಕೋಟಿ ರು.ನಷ್ಟು ಇಳಿಕೆಯಾಗಿದ್ದು, ಈ ಬಾರಿ 61,500 ಕೋಟಿ ನೀಡಲಾಗಿದೆ. ಹಿಂದಿನ ವಿತ್ತೀಯ ವರ್ಷದ ಬಜೆಟ್‌ನಲ್ಲಿ 71,001.81 ಕೋಟಿ ರು. ನೀಡಲಾಗಿತ್ತು.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಗಳ ಪ್ರಕಾರ, 2020-21ನೇ ಸಾಲಿನ ಅಂದಾಜು ಆಯವ್ಯಯದ ಪ್ರಕಾರ ಹೆಚ್ಚಿನ ಅನುದಾನವನ್ನು ಗ್ರಾಮೀಣಾಭಿವೃದ್ಧಿಗೆ ನೀಡಬೇಕಿತ್ತು. ಕಡೇ ಪಕ್ಷ ಸರಿದೂಗಿಸಿಕೊಂಡು ಹೋಗಬಹುದಾದ ಅನುದಾನ ನೀಡಬೇಕಿತ್ತು. ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, 2008-14ರ ಅವಧಿಯಲ್ಲಿ ಅಂದಿನ ಯುಪಿಎ ಸರ್ಕಾರ 1.91 ಲಕ್ಷ ಕೋಟಿ ನೀಡಿತ್ತು. ಬಳಿಕ 2014ರಲ್ಲಿ ಇದು 2.95 ಲಕ್ಷ ರು.ಗೆ ಏರಿಕೆಯಾಯಿತು. ಆದರೆ ಈಗ ಮತ್ತೆ ಕಡಿತಗೊಳಿಸಲಾಗಿದೆ.