Rupee Vs Dollar; ಮೊದಲ ಬಾರಿ 80 ದಾಟಿದ ರು. ಮೌಲ್ಯ
ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರು. ಗಡಿ ದಾಟಿದೆ. ಸೋಮವಾರ ದಿನದಂತ್ಯಕ್ಕೆ 16 ಪೈಸೆ ಕುಸಿತ ಕಾಣುವುದರೊಂದಿಗೆ 79.98ರಲ್ಲಿ ವಹಿವಾಟು ಅಂತ್ಯಗೊಂಡಿತ್ತು.
ಮುಂಬೈ (ಜು.19): ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರು. ಗಡಿ ದಾಟಿದೆ. ಸೋಮವಾರ ದಿನದಂತ್ಯಕ್ಕೆ 16 ಪೈಸೆ ಕುಸಿತ ಕಾಣುವುದರೊಂದಿಗೆ 79.98ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಮತ್ತು ಭಾರತೀಯ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆಗಳ ಹಿಂತೆಗೆತದ ಪರಿಣಾಮದಿಂದ ರುಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. ದಿನದ ಆರಂಭದಲ್ಲಿ 79.76 ಇದ್ದ ರುಪಾಯಿ ಮೌಲ್ಯ ವಹಿವಾಟಿನ ಮಧ್ಯಂತರಲ್ಲಿ 80 ರು.ಗಳ ಗಡಿಯನ್ನು ಮೊದಲ ಬಾರಿಗೆ ತಲುಪಿತ್ತು. ಇನ್ನು ಇದೇ ವೇಳೆ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 760.397 ಅಂಕ ಏರಿಕೆಯೊಂದಿಗೆ 54,521.15 ಅಂಕಗಳಲ್ಲಿ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 229.3 ಅಂಕಗಳ ಏರಿಕೆಯೊಂದಿಗೆ 16,278.5 ಅಂಕಗಳಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿತ್ತು.
ಇನ್ನು ಮಂಗಳವಾರದ ಷೇರುಮಾರುಕಟ್ಟೆ ವಹಿವಾಟಿನಲ್ಲಿ. ವಿದೇಶಿ ಹೂಡಿಕೆದಾರರು ರಾಷ್ಟ್ರದ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದ್ದರಿಂದ ಭಾರತೀಯ ರೂಪಾಯಿ ಮತ್ತೊಂದು ದಾಖಲೆಯ ಕುಸಿತವನ್ನು ಕಂಡಿತು. ರೂಪಾಯಿಯು ಡಾಲರ್ ವಿರುದ್ಧ 80 ರೂ. ಮಟ್ಟಕ್ಕಿಂತ ಕೆಳಕ್ಕಿಳಿದ ಬಳಿಕ ಕುಸಿತ ಇನ್ನೂ ಹೆಚ್ಚಾಗಬಹುದೆಂದು ಆತಂಕ ಶುರುವಾಗಿದೆ.
ಬ್ಲೂಮ್‌ಬರ್ಗ್ ಹೇಳಿರುವಂತೆ ರೂಪಾಯಿ ಮಂಗಳವಾರ 79.9863ರಲ್ಲಿ ವಹಿವಾಟು ಪ್ರಾರಂಭಿಸಿ ಡಾಲರ್ ವಿರುದ್ಧ 80.0163 ಮಟ್ಟದಲ್ಲಿ ವಹಿವಾಟು ನಡೆಸಿತು. ಇದೇ ವೇಳೆ ಒಮ್ಮೆ 80.0175ರ ಮಟ್ಟ ಕ್ಕೂ ಹೋಯ್ತು. ದಿನದ ಮೊದಲ ವಹಿವಾಟಿನಲ್ಲಿ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ 80.05ಕ್ಕೆ ಏರಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಹೇಳಿದೆ, ಹಿಂದಿನ ಮುಕ್ತಾಯಕ್ಕಿಂತ 7 ಪೈಸೆ ಇಳಿಕೆ ಕಂಡಿದೆ.
ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕೇಂದ್ರದಿಂದ ಸಮಿತಿ ರಚನೆ: ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಸಮಿತಿಯ ಮುಖ್ಯಸ್ಥ
ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯ ವೇಳೆ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಲು 8 ತಿಂಗಳ ಬಳಿಕ ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೋಮವಾರ ಸಮಿತಿಯೊಂದನ್ನು ರಚನೆ ಮಾಡಿದೆ. ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್‌ವಾಲ್ ಅವರನ್ನು ಈ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಸಮಿತಿಯಲ್ಲಿ ಇರಲಿದ್ದಾರೆ.
ಈ ಸಮಿತಿಗೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮೂವರು ಸದಸ್ಯರನ್ನು ನೇಮಕ ಮಾಡಲು ಅವಕಾಶ ನೀಡಲಾಗಿದೆ. ಆದರೆ ಈವರೆಗೂ ರೈತ ಸಂಘಟನೆಗಳು ಯಾವುದೇ ಹೆಸರನ್ನು ಸೂಚಿಸಿಲ್ಲ. ಈ ಸಮಿತಿಯಲ್ಲಿ ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಇನ್ಸ್‌ಸ್ಟಿಟ್ಯೂಟ್ ಆಫ್ ಎಕಾನಾಮಿಕ್ ಡೆವಲಪ್‌ಮೆಂಟ್‌ನ ಶೇಖರ್ ಮತ್ತು ಐಐಎಂ ಅಹಮದಾಬಾದ್‌ನಿಂದ ಸುಖ್‌ಪಾಲ್ ಸಿಂಗ್ ಅವರನ್ನು ಸೇರಿಸಲಾಗಿದೆ. ರೈತರ ಪರವಾಗಿ, ರಾಷ್ಟ್ರೀಯ ಪ್ರಶಸ್ತಿ ವಿಜೇತ ರೈತ ಭರತ್ ಭೂಷಣ್ ತ್ಯಾಗಿ, ಎಸ್‌ಕೆಎಂನಿಂದ 3 ಸದಸ್ಯರು, ಇತರ ರೈತ ಸಂಘಟನೆಗಳಿಂದ ಗುಣವಂತ್ ಪಾಟೀಲ್, ಕೃಷ್ಣವೀರ್ ಚೌಧರಿ, ಪ್ರಮೋದ್ ಚೌಧರಿ ಮತ್ತು ಸಯ್ಯದ್ ಪಾಶಾ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒಂದೂ ವರ್ಷಗಳಿಗೂ ಹೆಚ್ಚು ಕಾಲ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಕಳೆದ ನವೆಂಬರ್‌ನಲ್ಲಿ ಕಾಯ್ದೆಗಳನ್ನು ಹಿಂಪಡೆಯುವಾಗ ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು.