Asianet Suvarna News Asianet Suvarna News

ರೂಪಾಯಿ ಮೌಲ್ಯ: ಎಲ್ರೂ ಒಂದ್ ಹೇಳಿದ್ರೆ ಇವ್ರು ಹೇಳೊದೇ ಬೇರೆ!

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ! ಜನರ ಮುಂದೆ ಬೇರೊಂದು ಆಯಾಮ ತೆರೆದಿಟ್ಟ ಅರವಿಂದ್ ಪನಗಾರಿಯಾ! ರೂಪಾಯಿ ಮೌಲ್ಯ ಕುಸಿತದ ಸಕಾರಾತ್ಮಕ ಪರಿಣಾಮ ತಿಳಿಸಿದ ಪನಗಾರಿಯಾ! ಸದ್ಯದ ಆರ್ಥಿಕ ಸ್ಥಿತಿಗತಿಗಳ ಕುರಿತು ಅರವಿಂದ್ ಅಭಿಪ್ರಾಯವೇನು?
 

Rupee fall no macro worry, was long overdue says Arvind Panagariya
Author
Bengaluru, First Published Sep 20, 2018, 6:32 PM IST
  • Facebook
  • Twitter
  • Whatsapp

ಬೆಂಗಳೂರು(ಸೆ.20): ಈ ವರ್ಷದ ಜನವರಿ ತಿಂಗಳಿನಿಂದ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು ಶೇ.10ರಷ್ಟು ಕುಸಿದಿದೆ. ಈಗ ಸುಮಾರು 72 ರೂಪಾಯಿಗೆ ಕುಸಿದು ಸಾರ್ವಕಾಲಿಕ ಕನಿಷ್ಠ ದರಕ್ಕೆ ತಲುಪಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಆತಂಕಭರಿತ ಲೇಖನಗಳು ಹರಿದಾಡುತ್ತಿವೆ. 

ಸರ್ಕಾರದ ಮಟ್ಟದಲ್ಲೂ ಅಲ್ಲೋಲಕಲ್ಲೋಲವಾಗಿದೆ. ಭಾರತೀಯ ರೂಪಾಯಿಯು ಏಷ್ಯಾದ ಅತ್ಯಂತ ಕಳಪೆ ಕರೆನ್ಸಿಯಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಕಾರ್ಯನಿರ್ವಹಣೆ ಬಗ್ಗೆ ಯದ್ವಾತದ್ವಾ ಟೀಕೆಗಳು ಕೇಳಿಬರುತ್ತಿವೆ. ರೂಪಾಯಿ ಇಷ್ಟು ಕನಿಷ್ಠ ಮಟ್ಟ ತಲುಪಿದರೆ ಭಾರತ ಹೇಗೆ ವಿದೇಶಿ ಸಾಲ ತೀರಿಸುತ್ತದೆ ಎಂದು ಕೆಲವರು ಕೇಳುತ್ತಿದ್ದಾರೆ. 

ಕುಸಿಯುತ್ತಿರುವ ರೂಪಾಯಿಯನ್ನು ಮೇಲೆತ್ತಲು ಸರ್ಕಾರ ಏನಾದರೂ ಮಾಡಲೇಬೇಕು ಎಂದು ಎಲ್ಲೆಡೆ ಕೂಗೆದ್ದಿದೆ.ಆದರೆ, ಇದು ಅಷ್ಟೊಂದು ತಲೆಕೆಡಿಸಿಕೊಳ್ಳಬೇಕಾದ ವಿಚಾರವೇ?. ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರುಪಾಯಿ ಮೌಲ್ಯವನ್ನು ಮೇಲೆತ್ತಲು ತಕ್ಷಣ ಮಧ್ಯಪ್ರವೇಶಿಸಬೇಕೆ? ರೂಪಾಯಿ ಕುಸಿದಿರುವುದರಿಂದ ಜನರಿಗೆ ಭಾರಿ ತೊಂದರೆಯಾಗಲಿದೆಯೇ?

ಸಂಕ್ಷಿಪ್ತ ಉತ್ತರ ಇಲ್ಲ:

ಇಲ್ಲಿಯವರೆಗೆ ಆರ್‌ಬಿಐ ಚೆನ್ನಾಗಿ ಕೆಲಸ ಮಾಡಿದೆ. ಈಗಲೂ ರೂಪಾಯಿ ವಿಷಯದಲ್ಲಿ ಅದು ಸುಮ್ಮನಿದ್ದುಬಿಡಬೇಕು. ಏಕೆಂದರೆ, ರೂಪಾಯಿ ದುರ್ಬಲವಾಗುವುದು ನಮ್ಮ ದೇಶಕ್ಕೆ ಒಳ್ಳೆಯದೇ! 

ಏಕೆ ಇದು ಭಾರತಕ್ಕೆ ಒಳ್ಳೆಯದು?:

ವಿನಿಮಯ ದರವೆಂದರೆ, ನಮ್ಮ ದೇಶದ ಕರೆನ್ಸಿಯ ಮೌಲ್ಯದ ಲೆಕ್ಕದಲ್ಲಿ ವಿದೇಶಿ ಕರೆನ್ಸಿಯ (ಅಮೆರಿಕನ್ ಡಾಲರ್) ಮೌಲ್ಯವನ್ನು ಅಳೆಯುವುದು. ಅಂದರೆ, ಡಾಲರ್ ಎದುರು ರೂಪಾಯಿ ಮೌಲ್ಯವನ್ನು ನಿಗದಿಪಡಿಸುವುದು. ಇದರ ಉದ್ದೇಶ- ನಮ್ಮ ದೇಶದ ಸರಕುಗಳಿಗೆ ವಿದೇಶಿ ಸರಕುಗಳ ಎದುರು ದರ ನಿಗದಿಪಡಿಸುವುದು.

ಇನ್ನೂ ಸರಳವಾಗಿ ಹೇಳಬೇಕೆಂದರೆ, ರೂಪಾಯಿ ಮೌಲ್ಯ ಕುಸಿದಷ್ಟೂ ಭಾರತಕ್ಕೆ ಆಮದಾಗುವ ವಿದೇಶಿ ಸರಕುಗಳ ಬೆಲೆ ರೂಪಾಯಿ ಲೆಕ್ಕದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಭಾರತದಿಂದ ರಫ್ತಾಗುವ ಸರಕುಗಳ ಬೆಲೆ ಡಾಲರ್ ಲೆಕ್ಕದಲ್ಲಿ ಅವುಗಳನ್ನು ಖರೀದಿಸುವ ವಿದೇಶಿಗರಿಗೆ ಸೋವಿಯಾಗುತ್ತಾ ಹೋಗುತ್ತದೆ. 

ಆಮದಾಗುವ ವಿದೇಶಿ ಸರಕುಗಳು ದುಬಾರಿಯಾದರೆ ದೇಸಿ ಉದ್ಯಮಿಗಳು ಆ ಸರಕುಗಳಿಗೆ ಪರ್ಯಾಯವಾದ ಉತ್ಪನ್ನಗಳನ್ನು ಭಾರತದಲ್ಲೇ ಉತ್ಪಾದಿಸಲು ಆರಂಭಿಸುತ್ತಾರೆ. ಇದಕ್ಕೆ ಪ್ರತಿಯಾಗಿ, ನಮ್ಮ ದೇಶದಿಂದ ರಫ್ತಾಗುವ ಸರಕುಗಳ ಬೆಲೆ ವಿದೇಶಿ ಖರೀದಿದಾರರಿಗೆ ಸೋವಿಯಾದರೆ ಆಗ ವಿದೇಶಗಳಲ್ಲಿ ನಮ್ಮ ದೇಶದ ಸರಕುಗಳ ಮಾರುಕಟ್ಟೆ ವಿಸ್ತರಿಸುತ್ತಾ ಹೋಗುತ್ತದೆ. 

ಆಗ ವಿದೇಶಗಳಲ್ಲಿ ಭಾರತದ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚುತ್ತದೆ. ಒಂದು ವೇಳೆ ಭಾರತವು ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಮೌಲ್ಯದ ಸರಕನ್ನು ರಫ್ತು ಮಾಡುತ್ತಿದ್ದಿದ್ದರೆ ಆಗ ರೂಪಾಯಿ ಮೌಲ್ಯ ಕುಸಿಯುವುದು ನಮ್ಮ ದೇಶದ ಆರ್ಥಿಕತೆಗೆ ಒಳ್ಳೆಯದ್ದಾಗಿರಲಿಲ್ಲ. ಆದರೆ, ನಮ್ಮ ದೇಶ ರಫ್ತು ಮಾಡುವುದಕ್ಕಿಂತ ಹೆಚ್ಚು ಸರಕನ್ನು ಆಮದು ಮಾಡಿಕೊಳ್ಳುತ್ತಿದೆ. 

ಕಳೆದ ಜೂನ್ ವೇಳೆಗೆ ಈ ವ್ಯಾಪಾರ ಕೊರತೆ (ಟ್ರೇಡ್ ಡೆಫಿಸಿಟ್ ಅಥವಾ ಚಾಲ್ತಿ ಖಾತೆ ಕೊರತೆ) ಸುಮಾರು 1.1 ಲಕ್ಷ ಕೋಟಿ ರು. ಆಗಿತ್ತು. ಇದು ಕಳೆದ ಐದು ವರ್ಷಗಳಲ್ಲೇ ಅತಿ ಹೆಚ್ಚು. ಚಾಲ್ತಿ ಖಾತೆ ಕೊರತೆ ಅಂದರೆ ಒಟ್ಟಾರೆ ಆಮದು ಹಾಗೂ ಒಟ್ಟಾರೆ ರಫ್ತಿನ ಮೊತ್ತದಲ್ಲಿ ಅಂತಿಮವಾಗಿ ನಾವು ವಿದೇಶಕ್ಕೆ ಪಾವತಿಸಬೇಕಾದ ಹಣ ಎಷ್ಟಿದೆಯೋ ಅದು. ರುಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಈ ಕೊರತೆಯನ್ನು ಭಾರತ ಸುಲಭವಾಗಿ ತುಂಬಿಕೊಳ್ಳಬಹುದು. 

ಒಂದು ವೇಳೆ, ರೂಪಾಯಿ ಮೌಲ್ಯವನ್ನು ಮೇಲೆತ್ತಲು ಪ್ರಯತ್ನಿಸಿದರೆ ಆಗ ಚಾಲ್ತಿ ಖಾತೆ ಕೊರತೆ ಇನ್ನಷ್ಟು ಹೆಚ್ಚುತ್ತದೆ. ಆಗ ಚಾಲ್ತಿ ಖಾತೆ ಕೊರತೆ ತುಂಬಿಕೊಳ್ಳಲು ವಿದೇಶಿ ಸಾಲ ಪಡೆಯಬೇಕಾಗುತ್ತದೆ. ಅದು ದೇಶಕ್ಕೆ ಒಳ್ಳೆಯದಲ್ಲ. ರೂಪಾಯಿ ಕುಸಿತ ತಡೆಯಬಾರದು ಇಲ್ಲಿ ಕೇವಲ ವಿನಿಮಯ ದರವೊಂದನ್ನೇ ನೋಡಿದರೆ ಸಾಲದು. ಹಣದುಬ್ಬರವನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ರೂಪಾಯಿ ಕುಸಿತವನ್ನು ನಾವು ಇಲ್ಲಿಗೇ ತಡೆಹಿಡಿಯುತ್ತೇವೆ ಎಂದಿಟ್ಟುಕೊಳ್ಳಿ. ಆಗ ದೇಸಿ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚುವ ಸಾಧ್ಯತೆಯಿದೆ. ಹಣದುಬ್ಬರ ಹೆಚ್ಚುವುದು ಅಂದರೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುವುದು. ನಮ್ಮ ದೇಶದ ವಿನಿಮಯ ದರ ಕುಸಿದಿದ್ದರೂ ನಾವು ವ್ಯಾಪಾರ ಮಾಡುವ ದೇಶಗಳಿಗೆ ಹೋಲಿಸಿದರೆ ಈಗಲೂ ಇಲ್ಲಿನ ಹಣದುಬ್ಬರ ದರ ಹೆಚ್ಚೇ ಇದೆ. 

ಇದೂ ಕೂಡ ನಮಗೆ ಒಳ್ಳೆಯದು. ಏಕೆ ಗೊತ್ತೆ? ಹಣದುಬ್ಬರ ಹೆಚ್ಚಿದ್ದರೆ ನಮ್ಮ ವ್ಯಾಪಾರಿ ಪಾಲುದಾರ ದೇಶಗಳಿಗಿಂತ ನಮ್ಮಲ್ಲಿನ ಉತ್ಪನ್ನಗಳ ಬೆಲೆ ಹೆಚ್ಚಿದೆ ಎಂದರ್ಥ. ಆಗ ಆ ದೇಶಗಳು ವ್ಯಾಪಾರದಲ್ಲಿ ನಮಗೆ ಸ್ಪರ್ಧೆಯೊಡ್ಡುವ ಭಯವಿಲ್ಲ. ಉದಾಹರಣೆಗೆ, ನಮ್ಮ ದೇಶದ ಹಣದುಬ್ಬರ ದರ ಶೇ.4ರಷ್ಟಿದೆ ಮತ್ತು ಅಮೆರಿಕದ ಹಣದುಬ್ಬರ ದರ ಶೇ.೨ರಷ್ಟಿದೆ ಎಂದಿಟ್ಟುಕೊಳ್ಳಿ. ಆಗ ಭಾರತದ ರುಪಾಯಿ ಲೆಕ್ಕದಲ್ಲಿ ಅಗತ್ಯ ವಸ್ತುಗಳ ಬೆಲೆ ಶೇ.4ರ ದರದಲ್ಲಿ ಹೆಚ್ಚುತ್ತಿರುತ್ತದೆ. ಅದಕ್ಕೆ ಪ್ರತಿಯಾಗಿ, ಅಮೆರಿಕದಲ್ಲಿನ ವಸ್ತುಗಳ ಬೆಲೆ ಡಾಲರ್ ಲೆಕ್ಕದಲ್ಲಿ ಶೇ.2ರ ದರದಲ್ಲಿ ಹೆಚ್ಚುತ್ತಿರುತ್ತದೆ. 

ಒಂದು ಪಕ್ಷ ನಾವೇನಾದರೂ ರೂಪಾಯಿ ಕುಸಿತವನ್ನು ಕೃತಕವಾಗಿ ತಡೆಹಿಡಿದರೆ, ಅಂದರೆ ವಿದೇಶಿ ವಿನಿಮಯ ದರ ಬದಲಾಗದೆ ಇದ್ದರೆ, ಆಗ ಭಾರತದ ವಸ್ತುಗಳು ಅಮೆರಿಕದ ವಸ್ತುಗಳಿಗಿಂತ ಶೇ.2ರಷ್ಟು ದುಬಾರಿಯಾಗುತ್ತವೆ. ಅದರಿಂದಾಗಿ ಕ್ರಮೇಣ ಭಾರತಕ್ಕೆ ಆಮದು ಹೆಚ್ಚುತ್ತದೆ ಮತ್ತು ನಮ್ಮ ದೇಶದಿಂದ ಬೇರೆ ದೇಶಗಳಿಗೆ ಮಾಡುವ ರಫ್ತು ಕಡಿಮೆಯಾಗುತ್ತದೆ. 

ನೈಜ ವಿನಿಮಯ ದರ ಚೆನ್ನಾಗಿದೆ:
ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಾಗ ಸ್ಪರ್ಧೆ ಇದ್ದೇ ಇರುತ್ತದೆ. ಆಗ ಯಾವ್ಯಾವ ದೇಶದಲ್ಲಿ ಹಣದುಬ್ಬರ ದರ ಎಷ್ಟಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಇದರಿಂದಾಗುವ ಲಾಭ-ನಷ್ಟದ ಲೆಕ್ಕಾಚಾರ ಮಾಡಲು ಅರ್ಥಶಾಸ್ತ್ರಜ್ಞರು ಯಾವಾಗಲೂ ಸಾಂಕೇತಿಕ ವಿನಿಮಯ ದರ ಹಾಗೂ ನೈಜ ವಿನಿಮಯ ದರದ ನಡುವಿನ ವ್ಯತ್ಯಾಸವನ್ನು ಗಮನಿಸುತ್ತಿರುತ್ತಾರೆ.

ಸಾಂಕೇತಿಕ ವಿನಿಮಯ ದರವೆಂದರೆ ಮಾಧ್ಯಮಗಳಲ್ಲಿ ದಿನನಿತ್ಯ ಪ್ರಕಟವಾಗುವ, ನಮ್ಮನಿಮ್ಮೆಲ್ಲರ ಕಣ್ಣಿಗೆ ಬೀಳುವ ರುಪಾಯಿ ವಿನಿಮಯ ದರ. ನೈಜ ವಿನಿಮಯ ದರವೆಂದರೆ ವ್ಯಾಪಾರಿ ದೇಶಗಳ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕುವ ವಿನಿಮಯ ದರ.

ಭಾರತದ ಜೊತೆ ಆಮದು-ರಫ್ತು ವ್ಯವಹಾರ ಹೊಂದಿರುವ ದೇಶಗಳ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು ನಮ್ಮ ದೇಶದ ರೂಪಾಯಿಯ ನೈಜ ವಿನಿಮಯ ದರ ಲೆಕ್ಕ ಹಾಕಿದರೆ 2014ರಿಂದ 2018ರ ನಡುವೆ ಅದು ಸಾಕಷ್ಟು ಏರುತ್ತಾ ಬಂದಿರುವುದು ಕಾಣಿಸುತ್ತದೆ. 

ಅಂದರೆ, ನಮ್ಮ ದೇಶದಿಂದ ರಫ್ತಾಗುವ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಕಡಿಮೆಯಾಗಿದೆ. ಜಾಗತಿಕ ಆರ್ಥಿಕ ಕುಸಿತದ ನಂತರ ಹಾಗೂ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಹೆಚ್ಚಿಸಿದ ನಂತರ ರೂಪಾಯಿಯ ನೈಜ ವಿನಿಮಯ ದರ ಸಾಕಷ್ಟು ಕುಸಿದಿತ್ತು. ನಂತರ 2013-14ನೇ ಸಾಲಿನಿಂದ ಸಾಕಷ್ಟು ಏರಿತು. 

ಕಳೆದ ಐದು ವರ್ಷಗಳಲ್ಲಿ ರುಪಾಯಿಯ ನೈಜ ವಿನಿಮಯ ದರ ಶೇ.15.6ರಷ್ಟು ಏರಿಕೆಯಾಗಿದೆ. ಅಂದರೆ, ರೂಪಾಯಿಯ ಮೌಲ್ಯ ಇಷ್ಟು ವರ್ಷಗಳಲ್ಲಿ ನಿಜವಾಗಿಯೂ ಕುಸಿದಿಲ್ಲ, ಬದಲಿಗೆ ಏರಿಕೆಯಾಗಿದೆ. ಹಾಗಾದರೆ, ರೂಪಾಯಿಯ ನೈಜ ವಿನಿಮಯ ದರ ಏರಿರುವುದರಿಂದ ನಮಗೆ ಲಾಭವಾಗಿದೆಯೇ? ಇಲ್ಲ. 

ಏಕೆಂದರೆ ನಮ್ಮ ದೇಶದ ಆಮದು ಹೆಚ್ಚಾಗಿ, ರಫ್ತು ಕಡಿಮೆಯಾಗಿದೆ. ಸರ್ಕಾರ ಚಿಂತೆ ಮಾಡಬೇಕಿರುವುದು ಇದರ ಬಗ್ಗೆ. ಆದರೆ, ಮೇಕ್ ಇನ್ ಇಂಡಿಯಾದಿಂದ ದೇಸಿ ಉತ್ಪಾದನೆ ಹೆಚ್ಚುತ್ತಿರುವುದರಿಂದ ಕ್ರಮೇಣ ಈ ಸಮಸ್ಯೆ ಸರಿಹೋಗಲಿದೆ.

ಈ ಎಲ್ಲ ಕಾರಣಗಳಿಂದ, ರೂಪಾಯಿ ಕುಸಿತದಿಂದ ಏನೋ ಆಗಬಾರದ್ದು ಆಗುತ್ತಿದೆ, ದೇಶಕ್ಕೆ ಗಂಡಾಂತರ ಕಾದಿದೆ ಎಂಬುದೆಲ್ಲ ನಿಜವಲ್ಲ. ಜನಸಾಮಾನ್ಯರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ರೂಪಾಯಿ ಕುಸಿತದಿಂದ ಅನಾಹುತವಾಗುತ್ತಿದೆ ಎಂದು ಗುಲ್ಲೆಬ್ಬಿಸುತ್ತಿರುವವರು ವಿದೇಶಿ ಹೂಡಿಕೆದಾರರು.

ಏಕೆಂದರೆ, ನಮ್ಮ ದೇಶದ ಆರ್ಥಿಕತೆ ಬಲಿಷ್ಠವಾದಂತೆ ಅವರಿಗೆ ನಷ್ಟವಾಗಲಿದೆ. ಹಾಗಾಗಿ ಅವರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ನಮ್ಮ ದೇಶಕ್ಕೆ ಏನು ಒಳ್ಳೆಯದೋ ಅಷ್ಟನ್ನೇ ಮಾಡಿದರೆ ಸಾಕು.

Follow Us:
Download App:
  • android
  • ios