ಡಾಲರ್ ಎದುರು ಮುಂದುವರಿದ ರೂಪಾಯಿ ಮೌಲ್ಯ ಕುಸಿತ, ಕಾರಣವೇನು?
*ಬುಧವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 40 ಪೈಸೆ ಕುಸಿತ
*ಡಾಲರ್ ಎದುರು ಕುಸಿತ ಕಂಡ ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳ ಕರೆನ್ಸಿ
*ಅಮೆರಿಕದ ಟ್ರೆಷರ್ ಯೀಲ್ಡ್ ಗರಿಷ್ಠ ಮಟ್ಟಕ್ಕೆ ಏರಿಕೆ
ಮುಂಬೈ (ಸೆ.28): ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 40 ಪೈಸೆ ಕುಸಿತ ಕಂಡು 81.93 ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.ರೂಪಾಯಿ ಮಾತ್ರವಲ್ಲ,ಇತರ ಕೆಲವು ರಾಷ್ಟ್ರಗಳ ಕರೆನ್ಸಿಗಳು ಕೂಡ ಡಾಲರ್ ಎದುರು ಇಳಿಕೆ ದಾಖಲಿಸಿವೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ಕಠಿಣ ಹೇಳಿಕೆಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಡಾಲರ್ ಮೌಲ್ಯವರ್ಧನೆಗೊಂಡ ಪರಿಣಾಮ ರೂಪಾಯಿ ಸೇರಿದಂತೆ ಇತರ ರಾಷ್ಟ್ರಗಳ ಕರೆನ್ಸಿಗಳು ತೀವ್ರ ಹೊಡೆತ ಅನುಭವಿಸಿವೆ. ಅಮೆರಿಕದ ಟ್ರೆಷರ್ ಯೀಲ್ಡ್ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವ ಜೊತೆಗೆ ಆಮದುದಾರರಿಂದ ಡಾಲರ್ ಗೆ ಬೇಡಿಕೆ ಹೆಚ್ಚಳವಾಗಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಇನ್ನು ಭಾರತದ ವಿದೇಶಿ ವಿನಿಮಯ ಸಂಗ್ರಹವು ಸತತ ಏಳನೇ ವಾರವೂ ಕುಸಿತ ದಾಖಲಿಸಿದ್ದು, ಸೆಪ್ಟೆಂಬರ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ 545.65 ಬಿಲಿಯನ್ ಡಾಲರ್‌ಗೆ ಕುಸಿದಿದೆ. ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹೂಡಿಕೆ ಹಿಂತೆಗೆಯುತ್ತಿರೋದೆ ಇದಕ್ಕೆ ಕಾರಣ.
ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಇತ್ತೀಚೆಗೆ ಬಡ್ಡಿದರವನ್ನು ಶೇ.0.75ರಷ್ಟು ಹೆಚ್ಚಿಸಿದೆ. ಇದ್ರಿಂದ ಒಟ್ಟು ಬಡ್ಡಿದರ ಶೇ.3.25ಕ್ಕೆ ಹೆಚ್ಚಳವಾಗಿದೆ.ಪರಿಣಾಮ ಹೂಡಿಕೆದಾರರಿಗೆ ಹೂಡಿಕೆ ಮೇಲಿನ ಆಸಕ್ತಿ ತಗ್ಗಿದೆ ಎನ್ನುತ್ತಾರೆ ತಜ್ಞರು.
DA Hike: ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ನವರಾತ್ರಿ ಗಿಫ್ಟ್ ; ತುಟ್ಟಿ ಭತ್ಯೆ ಶೇ.4ಕ್ಕೆ ಹೆಚ್ಚಳ
ಅಮೆರಿಕದ ಬಾಂಡ್ ಯೀಲ್ಡ್ ಏರಿಕೆ ಹಾಗೂ ಡಾಲರ್ ಒತ್ತಡ ಅಭಿವೃದ್ಧಿ ಹೊಂದಿದ ಕರೆನ್ಸಿಗಳ (Currencies) ಮೇಲೆ ಹೆಚ್ಚುತ್ತಿದ್ದು, ಇಂಥ ರಾಷ್ಟ್ರಗಳು ಬಡ್ಡಿದರವನ್ನು ಹೆಚ್ಚಳ ಮಾಡೋದು ಅಗತ್ಯವಾಗಿದೆ. ಆಗ ಮಾತ್ರ ಈ ಬೆಳವಣಿಗೆಗೆ ಕಡಿವಾಣ ಸಾಧ್ಯ ಎನ್ನಲಾಗುತ್ತಿದೆ. ಭಾರತದಲ್ಲಿ ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆಯಾಗಿದೆ. ಹೀಗಾಗಿ ಇಂದಿನಿಂದ (ಸೆ.28) ಪ್ರಾರಂಭವಾಗಿರುವ ಮೂರು ದಿನಗಳ ಆರ್ ಬಿಐ (RBI) ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಇನ್ನೊಮ್ಮೆ ರೆಪೋ ದರ (Repo Rate) ಏರಿಕೆ ಮಾಡುವ ನಿರೀಕ್ಷೆಯಿದೆ. ಭಾರತದ ಹೂಡಿಕೆದಾರರು (Investors) ಕೂಡ ಸದ್ಯಕ್ಕೆ ಈ ಸಭೆಯತ್ತ ಚಿತ್ತ ನೆಟ್ಟಿದ್ದಾರೆ.
2010ರ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ 10 ವರ್ಷಗಳ ಟ್ರೆಷರ್ ಬಾಂಡ್ ಯೀಲ್ಡ್ ಶೇ.4ಕ್ಕೆ ತಲುಪಿದೆ. ಬಾಂಡ್ ಮಾರುಕಟ್ಟೆಯಲ್ಲಿನ ಇತ್ತೀಚೆಗೆ ಮಾರಾಟದ ಭರಾಟೆ ಹೆಚ್ಚಿದೆ. ಈ ವರ್ಷದ ಅಂತ್ಯದೊಳಗೆ ಯೀಲ್ಡ್ ದರ ಶೇ.4.4 ತಲುಪುವ ನಿರೀಕ್ಷೆ ಕೂಡ ಇದೆ. ಇನ್ನು 2022ರಲ್ಲಿ ಬಾಕಿಯಿರುವ ಫೆಡರಲ್ ರಿಸರ್ವ್ ಎರಡು ಸಭೆಗಳಲ್ಲಿ ಬಡ್ಡಿದರವನ್ನು 125 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡುವ ಸಾಧ್ಯತೆಯಿದೆ.
ಅಮೆರಿಕದ ಫೆಡರಲ್ ರಿಸರ್ವ್ (Federal Reserve) ಕಠಿಣ ಆರ್ಥಿಕ ನೀತಿಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಡಾಲರ್ ಸೂಚ್ಯಂಕ (Dollar Index) ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇನ್ನು ಯುರೋ (Euro) ಹಾಗೂ ಪೌಂಡ್ (Pound) ಕೂಡ ಇಳಿಕೆ ದಾಖಲಿಸಿವೆ. ಜಪಾನ್ (Japan) ಕರೆನ್ಸಿ ಯುವಾನ್ (yuan) ಡಾಲರ್ (Dollar) ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.
ಈ ಬ್ಯಾಂಕ್ ಗಳ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಿ ಹಬ್ಬದ ಶಾಪಿಂಗ್ ಮಾಡಿದ್ರೆ ಆಕರ್ಷಕ ಆಫರ್ ಗಳು!
ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭವಾಗಿದ್ದು,ಈ ಬಾರಿ ಕೂಡ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಮೇನಿಂದ ಈ ತನಕ ಆರ್ ಬಿಐ ರೆಪೋ ದರವನ್ನು 140 ಮೂಲಾಂಕಗಳಷ್ಟು ಏರಿಕೆ ಮಾಡಿದ್ದು, ಪ್ರಸ್ತುತ ಶೇ.5.4ಕ್ಕೆ ತಲುಪಿದೆ. ರೆಪೋ ದರ ಏರಿಕೆಯಿಂದ ಗೃಹ ಸಾಲ ಹಾಗೂ ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಇನ್ನೊಮ್ಮೆ ಹೆಚ್ಚಳವಾಗಲಿದೆ. ಈಗಾಗಲೇ ಬಡ್ಡಿದರ ಹೆಚ್ಚಳದಿಂದ ಶಾಕ್ ಆಗಿರುವ ಜನಸಾಮಾನ್ಯರಿಗೆ ಅದರ ಬಿಸಿ ಇನ್ನಷ್ಟು ತಟ್ಟಲಿದೆ.