ಸ್ಟಾರ್ ಚಿಹ್ನೆಯಿರುವ 500ರೂ. ನೋಟು ನಕಲಿನಾ? ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಈ ಸುದ್ದಿ ನಿಜಾನಾ?
ಸ್ಟಾರ್ ಚಿಹ್ನೆ ಹೊಂದಿರುವ 500ರೂ. ಮುಖಬೆಲೆಯ ನೋಟುಗಳು ನಕಲಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ನಡೆಸಿದ್ದು,ಇದು ಸುಳ್ಳು ಸುದ್ದಿ ಎಂಬ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
ನವದೆಹಲಿ (ಡಿ.8): ವಾಟ್ಸಾಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಕೆಲವು ಸುಳ್ಳು ಸುದ್ದಿಗಳು ವೈರಲ್ ಆಗೋದು ಸಾಮಾನ್ಯ. ಇಂಥ ಸುದ್ದಿಗಳು ಕೆಲವೊಮ್ಮೆ ಜನರಲ್ಲಿ ಅನುಮಾನ, ಆತಂಕಗಳನ್ನು ಸೃಷ್ಟಿಸೋದು ಕೂಡ ಇದೆ. ಈಗ 500ರೂ. ನೋಟಿಗೆ ಸಂಬಂಧಿಸಿ ಅಂಥದ್ದೇ ಒಂದು ಸುದ್ದಿ ವೈರಲ್ ಆಗಿದೆ. ಸ್ಟಾರ್ ಚಿಹ್ನೆ ಹೊಂದಿರುವ 500ರೂ. ನೋಟು ನಕಲಿ ಎಂಬ ಸುದ್ದಿ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಜನರು ಚರ್ಚೆ ಮಾಡಲು ಕೂಡ ಪ್ರಾರಂಭಿಸಿದ್ದಾರೆ. ಅಲ್ಲದೆ, ಅನೇಕರು ಈ ಸುದ್ದಿಯ ನಿಜಾಂಶ ಪರಿಶೀಲಿಸದೆ ಅದನ್ನು ಮತ್ತಷ್ಟು ಜನರಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಸ್ಟಾರ್ ಚಿಹ್ನೆ ಹೊಂದಿರುವ 500ರೂ. ನೋಟು ಹೊಂದಿರೋರಲ್ಲಿ ಆತಂಕ ಹಾಗೂ ಗೊಂದಲ ಮೂಡಿಸಿದೆ. ಇದೀಗ ಈ ವೈರಲ್ ಸಂದೇಶದ ಸತ್ಯಾಂಶವನ್ನು ಪರಿಶೀಲಿಸಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯುರೋ (ಪಿಐಬಿ), ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.
ಸ್ಟಾರ್ ಚಿಹ್ನೆ (*) ಹೊಂದಿರುವ 500ರೂ. ನೋಟು ನಕಲಿ ಎಂಬ ಕುರಿತು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಪಿಐಬಿ ಹೇಳಿದೆ. ಅಲ್ಲದೆ, ಈ ನೋಟು 2016ರ ಡಿಸೆಂಬರ್ ನಿಂದಲೂ ಚಲಾವಣೆಯಲ್ಲಿದೆ ಎಂಬ ಮಾಹಿತಿಯನ್ನು ಪಿಐಬಿ 'ಎಕ್ಸ್ ' ನಲ್ಲಿ (ಟ್ವಿಟ್ಟರ್) ಹಂಚಿಕೊಂಡಿದೆ. ಇನ್ನು ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಕುರಿತು ಯೂಟ್ಯೂಬ್ ಚಾನಲ್ 'ಡೈಲಿ ಸ್ಟಡಿ'ಗೆ ಪಿಐಬಿ ಎಚ್ಚರಿಕೆ ಕೂಡ ನೀಡಿದೆ.
ಆರ್ ಬಿಐ ಸ್ಪಷ್ಟನೆ
ಈ ಹಿಂದೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಚಿಹ್ನೆ ಹೊಂದಿರುವ 500ರೂ. ನೋಟುಗಳು ನಕಲಿ ಎಂಬ ಸುದ್ದಿ ಹರಿದಾಡಿತ್ತು. ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿತ್ತು ಕೂಡ. ಬ್ಯಾಂಕ್ ನೋಟುಗಳ ನಂಬರ್ ಪ್ಯಾನಲ್ ನಲ್ಲಿ ಸ್ಟಾರ್ (*) ಇದ್ದರೆ ಅದು ಬದಲಾಯಿಸಿದ ಅಥವಾ ಮರುಮುದ್ರಣಗೊಂಡ ಬ್ಯಾಂಕ್ ನೋಟು ಎಂಬುದನ್ನು ಸೂಚಿಸುತ್ತದೆ. ಈ ನೋಟುಗಳು ಇತರ ಬ್ಯಾಂಕ್ ನೋಟುಗಳಂತೆ ಅರ್ಹ ಕರೆನ್ಸಿಯಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಬೇರೆ ಮುಖಬೆಲೆ ನೋಟುಗಳಲ್ಲೂ ಸ್ಟಾರ್ ಇದೆ
ಬರೀ 500ರೂ. ಮುಖಬೆಲೆಯ ನೋಟುಗಳು ಮಾತ್ರವಲ್ಲ, ₹10, ₹20, ₹50 ಹಾಗೂ ₹100 ಬ್ಯಾಂಕ್ ನೋಟುಗಳಲ್ಲಿ ಈ ಹಿಂದೆಯೇ ಸ್ಟಾರ್ ಬಳಸುವ ಕ್ರಮವನ್ನು ಆರಂಭಿಸಲಾಗಿತ್ತು. ಈ ಕ್ರಮ 2016ಕ್ಕಿಂತಲೂ ಮುಂಚಿನಿಂದಲೂ ಇತ್ತು. ಆರ್ ಬಿಐ ಮಹಾತ್ಮ ಗಾಂಧಿ (ಹೊಸ) ಆವೃತ್ತಿಯ 500ರೂ. ಮುಖಬೆಲೆಯ ನೋಟುಗಳನ್ನು 2016ರಿಂದ ಪರಿಚಯಿಸಿದೆ. ಈ ನೋಟುಗಳ ಎರಡೂ ನಂಬರ್ ಪ್ಯಾನಲ್ ಗಳಲ್ಲಿ ‘E’ಅಕ್ಷರ ಸೇರಿಸಲಾಗಿದೆ. ಇನ್ನು ಕೆಲವು ನೋಟುಗಳಲ್ಲಿ ಹೆಚ್ಚುವರಿಯಾಗಿ ‘*’ ಚಿಹ್ನೆಯಿದೆ.
ಇನ್ನೂ 9,760 ಕೋಟಿ ರೂ. ಮೌಲ್ಯದ 2,000ರೂ. ನೋಟುಗಳು ಹಿಂತಿರುಗಲು ಬಾಕಿ: ಆರ್ ಬಿಐ
ಸ್ಟಾರ್ ಬ್ಯಾಂಕ್ ನೋಟನ್ನು ಆರ್ ಬಿಐ ಏಕೆ ಮುದ್ರಿಸುತ್ತದೆ?
ಆರ್ ಬಿಐ ಸ್ಟಾರ್ ಬ್ಯಾಂಕ್ ನೋಟನ್ನು ಮುದ್ರಣ ಸಮಯದಲ್ಲಿ ದೋಷ ಹೊಂದಿರುವ ಬ್ಯಾಂಕ್ ನೋಟುಗಳಿಗೆ ಬದಲಿಯಾಗಿ ಮುದ್ರಿಸುತ್ತದೆ. ಮುದ್ರಣದ ಸಮಯದಲ್ಲಿ ನೋಟುಗಳಲ್ಲಿ ದೋಷ ಕಂಡುಬಂದರೆ ಅವುಗಳಿಗೆ ಬದಲಿಯಾಗಿ ಸ್ಟಾರ್ ಚಿಹ್ನೆ ಹೊಂದಿರುವ ಅದೇ ಸೀರಿಯಲ್ ನಂಬರ್ ಹೊಂದಿರುವ ಬದಲಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ಮೂಲಕ ಪ್ರಿಂಟಿಂಗ್ ನಲ್ಲಿ ನಂಬರ್ ಆರ್ಡರ್ ನಲ್ಲಿ ಯಾವುದೇ ಬದಲಾವಣೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಸ್ಟಾರ್ ಸೀರೀಸ್ ನಂಬರ್ ವ್ಯವಸ್ಥೆಯು ನೋಟು ಮುದ್ರಣದಲ್ಲಿ ಆರ್ ಬಿಐಯು ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಅಭ್ಯಾಸಗಳನ್ನು ಅನುಸರಿಸುವ ಪ್ರಯತ್ನದ ಭಾಗವೇ ಆಗಿದೆ. ಹಾಗೆಯೇ ಇದು ಮುದ್ರಣ ವೆಚ್ಚವನ್ನು ತಗ್ಗಿಸುವ ಪ್ರಯತ್ನದ ಭಾಗವೂ ಆಗಿದೆ.