ಝೊಮ್ಯಾಟೋ ಇದೇ ಮೊದಲ ಬಾರಿಗೆ ಲಾಭ ಗಳಿಸಿದೆ. 2023-24ನೇ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ 2 ಕೋಟಿ ರೂ. ಲಾಭ ಗಳಿಸಿದೆ. ಕೆಲವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರೆ, ಇನ್ನೂ ಕೆಲವರು ಜೋಕ್ಸ್ ಹಾಗೂ ಮೀಮ್ಸ್ ಹಂಚಿಕೊಂಡಿದ್ದಾರೆ. ಆದರೆ, ಈ ಎಲ್ಲವನ್ನೂ ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ.
ಮುಂಬೈ (ಆ.4): ದೇಶದ ಜನಪ್ರಿಯ ಆಹಾರ ಡೆಲಿವರಿ ಅಪ್ಲಿಕೇಷನ್ ಝೊಮ್ಯಾಟೋ ಇದೇ ಮೊದಲ ಬಾರಿಗೆ ಲಾಭ ಗಳಿಕೆ ಮಾಡಿದೆ. ಈ ಬಗ್ಗೆ ಗುರುವಾರ ಕಂಪನಿ ಮಾಹಿತಿ ನೀಡಿದ್ದು, 2023-24ನೇ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ 2 ಕೋಟಿ ರೂ. ಲಾಭ ದೊರಕಿರೋದಾಗಿ ತಿಳಿಸಿದೆ. ಇದು ತೆರಿಗೆ ಪಾವತಿ ಬಳಿಕ ಕಂಪನಿಗೆ ಸಿಕ್ಕಿರುವ ಲಾಭವಾಗಿದೆ. ವರ್ಷದ ಹಿಂದೆ ಈ ಸಂಸ್ಥೆ 186 ಕೋಟಿ ರೂ. ನಷ್ಟದಲ್ಲಿತ್ತು. ಲಾಭ ಗಳಿಕೆ ಮಾಹಿತಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದ ಎಲ್ಲೆಡೆ ಝೊಮ್ಯಾಟೋ ಕುರಿತೇ ಚರ್ಚೆ ನಡೆದಿತ್ತು. ಅನೇಕರು ಈ ಸಂದರ್ಭದಲ್ಲಿ ಝೊಮ್ಯಾಟೋಗೆ ಅಭಿನಂದನೆ ಸಲ್ಲಿಸಿದರೆ, ಇನ್ನೂ ಕೆಲವರು ಜೋಕ್ಸ್ ಹಾಗೂ ಮೀಮ್ಸ್ ಹಂಚಿಕೊಂಡರು. ಆದರೆ, ಇವೆಲ್ಲವನ್ನೂ ಝೊಮ್ಯಾಟೋ ಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಸಕಾರಾತ್ಮಕವಾಗಿಯೇ ತೆಗೆದುಕೊಂಡಿದ್ದಾರೆ. ಕಾಲೆಳೆದವರಿಗೂ ತಮಾಷೆಯಿಂದಲೇ ಉತ್ತರ ನೀಡಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಕೂಡ ಝೊಮ್ಯಾಟೋಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ವೀರೇಂದ್ರ ಹೆಗ್ಡೆ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ಗೋಯಲ್ ಅವರನ್ನು ಉದ್ದೇಶಿಸಿ ಲೈಟರ್ ನೋಟ್ ನಲ್ಲಿ ಟ್ವೀಟ್ ಮಾಡಿದ್ದರು. 'ಎರಡು ಕೋಟಿ ರೂ. ನನ್ನಿಂದ ಪಡೆಯಬಹುದಿತ್ತಲ್ಲ, ಇದಕ್ಕೆ ಏಕೆ ಮನೆ ಮನೆಗೆ ಹೋಗಿ ಆಹಾರ ಡೆಲಿವರಿ ಮಾಡುವ ಅಗತ್ಯ ಏನಿತ್ತು?' ಎಂದು ಹೆಗ್ಡೆ ಟ್ವೀಟ್ ನಲ್ಲಿ ಪ್ರಶ್ನಿಸಿದ್ದರು.ಈ ಟ್ವೀಟ್ ನಲ್ಲಿರುವ ತಮಾಷೆಯನ್ನು ಗುರುತಿಸಿರುವ ಗೋಯಲ್ 'Tweet of the day. ROFL!'ಎಂದು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಅನೇಕರು ಲಾಭ ಗಳಿಸಿರುವ ವಿಚಾರವಾಗಿ ಗೋಯಲ್ ಅವರನ್ನು ಅಭಿನಂದಿಸಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಕೂಡ ಗೋಯಲ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. 'ಅಭಿನಂದನೆಗಳು! ಲಾಭ ಗಳಿಕೆಯ ಹಾದಿಯಲ್ಲಿ ನಡೆಯಲು ಸಾಧ್ಯ ಎಂಬುದಕ್ಕೆ ಇದು ಎಲ್ಲ ಹೂಡಿಕೆದಾರರು ಹಾಗೂ ಸ್ಟಾರ್ಟ್ ಅಪ್ ಗಳಿಗೆ ಒಂದು ದಾರಿದೀಪವಾಗಿದೆ. ಹಾಗೆಯೇ ಇದನ್ನು ಸಾಧಿಸಲು ಕಾರ್ಯನಿರ್ವಹಿಸುತ್ತಿರುವ ಎಲ್ಲ ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ಈ ಫಲಿತಾಂಶ ಸಿಗಬೇಕು' ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೋಯಲ್ ' ತುಂಬಾ ಧನ್ಯವಾದಗಳು ಸರ್. ನಿಮ್ಮಿಂದ ಈ ಮಾತುಗಳು ಬರುತ್ತಿರೋದು ನಮ್ಮ ಪಾಲಿಗೆ ದೊಡ್ಡ ಉಡುಗೊರೆ. ನಮ್ಮ ದೇಶದ ಸೇವೆಗಾಗಿ ಝೊಮ್ಯಾಟೋವನ್ನು ನಿರ್ಮಿಸುವ ಕೆಲಸವನ್ನು ನಾವು ಮುಂದುವರಿಸಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ಉತ್ತಮ ಸೇವೆಗಳನ್ನು ಕಲ್ಪಿಸುವ ಸಲುವಾಗಿ ಲಾಭ ಗಳಿಸುವ ಗುರಿಯನ್ನು ನಾವು ಹೊಂದಿದ್ದೇವೆಯೇ ಹೊರತು ಲಾಭ ಗಳಿಸೋದಕ್ಕೋಸ್ಕರ ಸೇವೆಗಳನ್ನು ರೂಪಿಸುತ್ತಿಲ್ಲ' ಎಂದಿದ್ದಾರೆ.
ಪೇಟಿಎಂ ಸ್ಥಾಪಕ ಹಾಗೂ ಸಿಇಒ ವಿಜಯ್ ಶೇಖರ್ ಶರ್ಮಾ ಕೂಡ ಈ ಮೈಲಿಗಲ್ಲು ಮುಟ್ಟಿರೋದಕ್ಕೆ ಝೊಮ್ಯಾಟೋ ತಂಡವನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಅಚ್ಚರಿಯ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.
ಮಲ್ಟಿ ಕಾರ್ಟ್ ಫೀಚರ್ಸ್
ಗ್ರಾಹಕರಿಗೆ ಯಾವುದೇ ಅಡಚಣೆಯಿಲ್ಲದೆ ಆರ್ಡರ್ ಮಾಡಲು ನೆರವು ನೀಡುವ ಉದ್ದೇಶದಿಂದ ಝೊಮ್ಯಾಟೋ ಮಲ್ಟಿ ಕಾರ್ಟ್ ಫೀಚರ್ಸ್ ಅನ್ನು ಜುಲೈನಲ್ಲಿ ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಯಾವುದೇ ಅಡೆಚಣೆ ಇಲ್ಲದೆ ವಿವಿಧ ರೆಸ್ಟೋರೆಂಟ್‌ಗಳ ಖಾದ್ಯಗಳನ್ನು ಏಕಕಾಲದಲ್ಲಿ ಆರ್ಡರ್ ಮಾಡಬಹುದು. ಹೊಸ ಫೀಚರ್ಸ್‌ನಿಂದ ತಮ್ಮ ಕಾರ್ಟ್ ಹಿಸ್ಟರಿ ಕ್ಲೀಯರ್ ಮಾಡಬೇಕಾದ ಪ್ರಮೇಯ ಇಲ್ಲ. ಓರ್ವ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಕಾರ್ಟ್ ರಚಿಸಲು ಅವಕಾಶ ನೀಡಲಾಗಿದೆ. ಒಂದು ರೆಸ್ಟೋರೆಂಟ್‌ನಿಂದ ಒಂದು ಖಾದ್ಯ ಆರ್ಡರ್ ಮಾಡಿ, ಬೇರೊಂದು ರೆಸ್ಟೋರೆಂಟ್‌ನಿಂದ ಮತ್ತೊಂದು ಖಾದ್ಯ ಆರ್ಡರ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇವೆಲ್ಲವೂ ಏಕಕಾಲಕ್ಕೆ ಮಾಡಲು ಮಲ್ಟಿ ಕಾರ್ಟ್ ಫೀಚರ್ಸ್ ನೀಡಲಾಗಿದೆ. ಈ ಫೀಚರ್ಸ್ ಮೂಲಕ ಝೊಮ್ಯಾಟೋ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮುಂದಾಗಿದೆ.
