ಇತ್ತೀಚೆಗೆ 25 ಕೆ.ಜಿ.ವರೆಗಿನ ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲು ಆರಂಭಿಸಿದ ಕೇಂದ್ರ ಸರ್ಕಾರ   

ಬೆಂಗಳೂರು(ಜು.24):  ಕೇಂದ್ರ ಸರ್ಕಾರ 25 ಕೆ.ಜಿ.ವರೆಗಿನ ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿರುವ ಕ್ರಮಕ್ಕೆ ತಿರುಗೇಟು ನೀಡಲು ಮುಂದಾಗಿರುವ ಅಕ್ಕಿ ಗಿರಣಿ ಮಾಲೀಕರು, 26 ಕೆ.ಜಿ. ಇರುವ ಪ್ಯಾಕ್‌ಗಳನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ತೆರಿಗೆಯಿಲ್ಲದೆ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ 25 ಕೆ.ಜಿ.ವರೆಗಿನ ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳಿಗೆ (ಅಕ್ಕಿ, ಬೇಳೆ ಇತರೆ) ಶೇ.5ರಷ್ಟುತೆರಿಗೆ ವಿಧಿಸಲು ಆರಂಭಿಸಿದ್ದು, ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಅಕ್ಕಿ ಗಿರಣಿ ಮಾಲೀಕರು ಪ್ರತಿಭಟನೆ ನಡೆಸಿ, ಜಿಎಸ್‌ಟಿ ವಿಧಿಸುವುದರಿಂದ ದರ ಹೆಚ್ಚಳವಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ, ಹಾಗಾಗಿ ತೆರಿಗೆ ವಿಧಿಸಬಾರದೆಂದು ಆಗ್ರಹಿಸಿದ್ದರು. ಆದರೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಕಿ ಗಿರಣಿ ಮಾಲೀಕರು ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ತೂಕದಲ್ಲಿ ಬದಲಾವಣೆ ಮಾಡಿ ಪ್ಯಾಕ್‌ ಮಾಡಿದ ಆಹಾರ ಪದಾರ್ಥ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಜಿಎಸ್‌ಟಿ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್, ವಾಹನ ಮಾಲೀಕರ ಜೇಬಿಗೆ ಕತ್ತರಿ!

ಅಕ್ಕಿ, ಬೇಳೆ ಮತ್ತು ಹಾಲಿನ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿರುವುದರಿಂದ ಮಧ್ಯಮ ವರ್ಗದವರಿಗೆ ಹೆಚ್ಚಿನ ಹೊರೆಯಾಗಲಿದೆ. ಈ ನಿಟ್ಟಿನಲ್ಲಿ ತೆರಿಗೆ ಇಲ್ಲದೆ ಆಹಾರ ಪದಾರ್ಥಗಳನ್ನು ವಿತರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಿದ್ದೇವೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.

ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ:

ಪ್ಯಾಕ್‌ ಮಾಡಿದ 25 ಕೆ.ಜಿ ಮತ್ತು ಅದಕ್ಕಿಂತ ಕಡಿಮೆ ತೂಕದ ಆಹಾರ ಪದಾರ್ಥಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗಿದೆ. ಆದರೆ, ಪ್ಯಾಕ್‌ ಮಾಡದ ಯಾವುದೇ ಉತ್ಪನ್ನಗಳಿಗೆ ಜಿಎಸ್‌ಟಿ ಇಲ್ಲ. 25 ಕೆ.ಜಿ. ಚೀಲಕ್ಕೆ ಮಾತ್ರ ತೆರಿಗೆ ಪಾವತಿ ಮಾಡುವಂತೆ ನಿರ್ಧರಿಸಿರುವ ಕೇಂದ್ರದ ಕ್ರಮ ಅತ್ಯಂತ ಅವೈಜ್ಞಾನಿಕವಾಗಿದೆ. ಆದ್ದರಿಂದ 26 ಕೆ.ಜಿ. ತೂಕದ ಚೀಲಗಳಲ್ಲಿ ಪ್ಯಾಕ್‌ ಮಾಡಿ ಮಾರಾಟ ಮಾಡುವುದಕ್ಕೆ ಮುಂದಾಗಿದ್ದು, ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇದಕ್ಕೆ ಅಧಿಕಾರಿಗಳಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಆದ್ದರಿಂದ ತೂಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ಯಾಕ್‌ ಮಾಡಿದ 25 ಕೆ.ಜಿ. ತೂಕದ ಅಕ್ಕಿ ಚೀಲಕ್ಕೆ ಮಾತ್ರ ಶೇ.5ರಷ್ಟು ತೆರಿಗೆ ವಿಧಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ 25ರ ಬದಲಿಗೆ 26 ಕೆ.ಜಿ.ತೂಕದ ಚೀಲಗಳಲ್ಲಿ ಮಾರುಕಟ್ಟೆಗೆ ಬಿಡಲು ನಿರ್ಧರಿಸಿದ್ದೇವೆ ಅಂತ ಅಕ್ಕಿ ಗಿರಣಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಶಿವಕುಮಾರ್‌ ತಿಳಿಸಿದ್ದಾರೆ.