*ಮೇಗಿಂತ ಜೂನ್ ನಲ್ಲಿ ಅಲ್ಪ ಇಳಿಕೆ ಕಂಡ ಚಿಲ್ಲರೆ ಹಣದುಬ್ಬರ*ಹಣದುಬ್ಬರ ನಿಯಂತ್ರಣಕ್ಕೆ ಮೇ, ಜೂನ್ ನಲ್ಲಿ ರೆಪೋ ದರ ಏರಿಕೆ ಮಾಡಿದ್ದ ಆರ್ ಬಿಐ*ಸತತ 6 ತಿಂಗಳಿಂದ ಆರ್ ಬಿಐ ಸಹನಾ ಮಟ್ಟ ಮೀರಿರುವ ಚಿಲ್ಲರೆ ಹಣದುಬ್ಬರ
ನವದೆಹಲಿ (ಜು.12): ದೇಶದಲ್ಲಿ ಜೂನ್ (June) ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ (retail inflation) ಶೇ.7.01ರಷ್ಟಿದ್ದು, ಹೆಚ್ಚುಕಡಿಮೆ ಮೇ (May) ತಿಂಗಳಷ್ಟೇ ಇದೆ. ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.04ರಷ್ಟಿತ್ತು. ಚಿಲ್ಲರೆ ಹಣದುಬ್ಬರ ದರ ಸತತ 6 ತಿಂಗಳಿಂದ ಆರ್ ಬಿಐ (RBI) ನಿಗದಿಪಡಿಸಿರುವ ಸಹನಾ ಮಟ್ಟ ಶೇ.6ಕ್ಕಿಂತ ಹೆಚ್ಚಿದೆ.
ಕೊಂಚ ಇಳಿಕೆ
ಸತತ ಎರಡು ತಿಂಗಳಿಂದ ಚಿಲ್ಲರೆ ಹಣದುಬ್ಬರದಲ್ಲಿ ಅಲ್ಪ ಮಟ್ಟಿನ ಇಳಿಕೆಯಾಗುತ್ತಿದೆ. ಏಪ್ರಿಲ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.79ರಷ್ಟಿದ್ದು, ಮೇನಲ್ಲಿ ಶೇ. 7.04 ಕ್ಕೆ ಇಳಿಕೆಯಾಗಿತ್ತು. ಇನ್ನು ಜೂನ್ ನಲ್ಲಿ ಮತ್ತೆ ಶೇ.7.01 ಇಳಿಕೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚು
ಜೂನ್ ನಲ್ಲಿ ಗ್ರಾಮೀಣ ಭಾಗದಲ್ಲಿ (Rural area) ಚಿಲ್ಲರೆ ಹಣದುಬ್ಬರ ನಗರ ಪ್ರದೇಶಕ್ಕಿಂತ (Urban area) ಹೆಚ್ಚಿತ್ತು. ಜೂನ್ ನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ಶೇ.7.09ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ. 6.92ರಷ್ಟಿತ್ತು. ಅಹಾರ ಹಣದುಬ್ಬರ (Food Inflation) ಜೂನ್ ನಲ್ಲಿ ಶೇ.7.75ರಷ್ಟಿತ್ತು. ಮೇನಲ್ಲಿ ಆಹಾರ ಹಣದುಬ್ಬರ ಶೇ.7.97ರಷ್ಟಿತ್ತು. ಅಂದ್ರೆ ಆಹಾರ ಹಣದುಬ್ಬರದಲ್ಲಿ ಕೂಡ ಇಳಿಕೆಯಾಗಿದೆ. ಅಡುಗೆ ಎಣ್ಣೆ (Edible oil) ಬೆಲೆ ಇಳಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Crude oil) ಇಳಿಕೆಯ ಕಾರಣಕ್ಕೆ ಆಹಾರ ಹಣದುಬ್ಬರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ದಾಖಲಾಗಿದೆ.
ತರಕಾರಿ ಬೆಲೆ ಇಳಿಕೆ
ತರಕಾರಿ (Vegetable) ಬೆಲೆಯಲ್ಲಿ (Price) ಮೇ ತಿಂಗಳಿಗೆ ಹೋಲಿಸಿದ್ರೆ ಜೂನ್ ನಲ್ಲಿ ಇಳಿಕೆಯಾಗಿದೆ. ಮೇನಲ್ಲಿ ಶೇ.18.26ರಷ್ಟಿದ್ದ ತರಕಾರಿ ಬೆಲೆ ಜೂನ್ ನಲ್ಲಿ ಶೇ.17.37ಕ್ಕೆ ಇಳಿಕೆಯಾಗಿದೆ. ಇನ್ನು ಧಾನ್ಯಗಳು ಹಾಗೂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಶೇ.5.66ಕ್ಕೆ ತಲುಪಿದೆ. ಇನ್ನು ಇಂಧನ ಹಣದುಬ್ಬರ (Fuel Inflation) ಮೇನಲ್ಲಿ ಶೇ. 9.54ರಷ್ಟಿದ್ದು, ಜೂನ್ ನಲ್ಲಿ ಶೇ.10.39ಕ್ಕೆ ಏರಿಕೆಯಾಗಿದೆ. ಇನ್ನು ಹಣ್ಣುಗಳ (Fruits) ಹಣದುಬ್ಬರ ಶೇ.2.33ರಿಂದ ಶೇ.3.10ಕ್ಕೆ ಹೆಚ್ಚಳವಾಗಿದೆ.
ಆರ್ ಬಿಐ ಸಹನಾ ಮಟ್ಟಕ್ಕಿಂತ ಹೆಚ್ಚು
ಸಿಪಿಐ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಆರ್ ಬಿಐ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟವನ್ನು ಮೀರುತ್ತಿರೋದು ಇದು ಸತತ ಐದನೇ ಬಾರಿಯಾಗಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು. ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ (Margin) ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6. ಆದ್ರೆ ಸತತ 5 ತಿಂಗಳಿಂದ ಚಿಲ್ಲರೆ ಹಣದುಬ್ಬರ ಈ ಮಿತಿಯನ್ನು ಮೀರಿದೆ. ಹೀಗಾಗಿ ಆಗಸ್ಟ್ ನಲ್ಲಿ ಕೂಡ ಆರ್ ಬಿಐ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಆರ್ ಬಿಐ ಹಣದುಬ್ಬರ ದರ ಶೇ.5.7ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದ್ರೆ ಈಗ ಅದನ್ನು ಶೇ.6.7ಕ್ಕೆ ಹೆಚ್ಚಿಸಿದೆ.
Dollar Vs Rupee: ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ದುರ್ಬಲ;ಶೀಘ್ರದಲ್ಲೇ 80ರ ಗಡಿ ದಾಟಲಿದೆಯಾ?
ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ಜೂನ್ ನಲ್ಲಿ ರೆಪೋ ದರವನ್ನು ( repo rate) 50 ಮೂಲ ಅಂಕಗಳಷ್ಟು (50 basis points) ಹೆಚ್ಚಿಸಿದೆ. ಇದ್ರಿಂದ ರೆಪೋ ದರ ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ. ಮೇನಲ್ಲಿ ಕೂಡ ಆರ್ ಬಿಐ ರೆಪೋ ದರದಲ್ಲಿ 40 ಮೂಲ ಅಂಕಗಳಷ್ಟು ಹೆಚ್ಚಳ ಮಾಡಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿರೋದಾಗಿ ಆರ್ ಬಿಐ (RBI) ತಿಳಿಸಿತ್ತು
