ನೋಟ್ ಬ್ಯಾನ್ ಪರಿಣಾಮ: 5 ಮಿಲಿಯನ್ ಉದ್ಯೋಗ ಕಡಿತ!
‘ನೋಟು ಅಮಾನ್ಯೀಕರಣದ ಅವಾಂತರಕ್ಕೆ 50 ಲಕ್ಷ ಉದ್ಯೋಗ ನಷ್ಟ’| ಅಜೀಮ್ ಪ್ರೇಮ್‌ಜೀ ಯೂನಿವರ್ಸಿಟಿಯ ಸಂಶೋಧಕರ ತಂಡದ ವರದಿ| ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಸಂಶೋಧಕರ 'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ' ವರದಿ| 2016ರ ಬಳಿಕ ದೇಶದಲ್ಲಿ 5 ಮಿಲಿಯನ್ ಉದ್ಯೋಗ ಕಡಿತ| ‘2018ರಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ.6ಕ್ಕೆ ಏರಿಕೆ’|
ನವದೆಹಲಿ(ಏ.17): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 5 ಮಿಲಿಯನ್ ಉದ್ಯೋಗ ಕಡಿತಗೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಪ್ರಧಾನಿ ಮೋದಿ ಕಳೆದ ಸರಕಾರ ನವೆಂಬರ್ 8, 2016ರಲ್ಲಿ 500/1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ನಿರ್ಧಾರವನ್ನು ಘೋಷಿಸಿದ್ದರು. ಇದರ ಪರಿಣಾಂವಾಗಿ ದೇಶದಲ್ಲಿ ಸುಮಾರು 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಜೀಮ್ ಪ್ರೇಮ್‌ಜೀ ಯೂನಿವರ್ಸಿಟಿಯ ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಸಂಶೋಧಕರ 'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ' ವರದಿ ಉಲ್ಲೇಖಿಸಿದೆ.
2016 ನವೆಂಬರ್ ನಂತರ ಭಾರತದಲ್ಲಿ ಉದ್ಯೋಗ ಕುಸಿತ ಆರಂಭವಾಗಿದ್ದು, ನೋಟು ನಿಷೇಧ ಕ್ರಮದಿಂದ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 2018ರಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ.6ಕ್ಕೆ ಹೆಚ್ಚುವ ಮೂಲಕ ಗರಿಷ್ಠ ಪ್ರಮಾಣವನ್ನು ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಗ್ರಾಮೀಣ ಮತ್ತು ನಗರಗಳೆರಡರಲ್ಲೂ ನಿರೋದ್ಯಗಿಗಳ ಪೈಕಿ 20-24 ವರ್ಷದ ಯುವಕರೇ ಹೆಚ್ಚು ಎಂದು ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ' ವರದಿ ಉಲ್ಲೇಖಿಸಿದೆ.
ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (NSSO) ಬಿಡುಗಡೆ ಮಾಡಿದ 2017-18ರ ಎಂಪ್ಲಾಯ್ಮೆಂಟ್ ಸರ್ವೇಯಲ್ಲಿ ಉದ್ಯೋಗ ನಷ್ಟ 40 ವರ್ಷಗಳಲ್ಲೇ ಅಧಿಕ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಈ ಅಧ್ಯಯನ ಖಾಸಗಿ ಸಂಸ್ಥೆಯಾದ CMEA ನೀಡಿದ ಅಂಶಗಳನ್ನು ಒಳಗೊಂಡಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ನಿರಾಕರಿಸಿರುವ ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ ಅಂಶಗಳನ್ನು ಒಳಗೊಂಡಿಲ್ಲ.