ನವದೆಹಲಿ(ಜು.27): ದೇಶದ ಪ್ರಮುಖ ಪೆಟ್ರೋಲಿಯಂ ಉದ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. 

2018-19 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 9,459 ಕೋಟಿ ರೂ (ಶೇ. 16) ನಿವ್ವಳ ಲಾಭ ಗಳಿಸಿರುವ ಸಂಸ್ಥೆ, ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು.

ಈ ಸಾಲಿನಲ್ಲಿ ಸಂಸ್ಥೆಯ ಒಟ್ಟು ಆದಾಯ ಪ್ರಮಾಣ ಶೇ. 56.5 ರಷ್ಟು ಏರಿಕೆಯಾಗಿದ್ದು,  141,699 ಕೋಟಿ ರೂಪಾಯಿಗಳಿಗೆ ತಲುಪಿದೆ. ಗಲ್ಫ್ ಆಫ್ರಿಕಾ ಪೆಟ್ರೋಲಿಯಂ ಕಾರ್ಪ್ ನಲ್ಲಿನ ಷೇರುಗಳ ಮಾರಾಟದಿಂದ ಬಂದ ಗಳಿಕೆ ಹೊರತಾಗಿ ಈ ಲಾಭವನ್ನು ತೋರಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪೆಟ್ರೋಕೆಮಿಕಲ್ ವ್ಯವಹಾರದಿಂದ ತೆರಿಗೆ ಪಾವತಿಗೆ ಮುನ್ನ ಶೇ 94.9 ಅಥವಾ 7,857 ಕೋಟಿ ರೂ. ಲಾಭಾಂಶ ದಾಖಲಾಗಿದೆ. "ನಮ್ಮ ಸಂಸ್ಥೆಯ ಪೆಟ್ರೋಕೆಮಿಕಲ್ಸ್ ವ್ಯವಹಾರವು ಪ್ರಬಲ ಭರವಸೆಯನ್ನು ಸೃಷ್ಟಿಸಿದೆ." ಎಂದು ರಿಲಯನ್ಸ್ ಸಮೂಹದ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಹೇಳಿದ್ದಾರೆ.

ಚಿಲ್ಲರೆ ವ್ಯವಹಾರದ ಆದಾಯ ದ್ವಿಗುಣಗೊಂಡಿದ್ದು, ಇಬಿಐಟಿಡಿ ಉತ್ತಮಗೊಳ್ಳುತ್ತಾ ಸಾಗಿದೆ. ಟೆಲಿಕಾಂ ವಲಯದಲ್ಲಿ ಜಿಯೋ ಚಂದಾದಾರರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದ ಹೆಚ್ಚಳವಾಗಿದೆ ಎಂದು ಅಂಬಾನಿ ಹೇಳಿದ್ದಾರೆ.