ಕೊರೋನಾ ಸಂಕಷ್ಟ: ಮೃತ ಉದ್ಯೋಗಿಗಳ ಕುಟುಂಬಕ್ಕೆ ಅಂಬಾನಿ ನೆರವು!
* ಕೊರೋನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬದ ನೆರವಿಗೆ ಧಾವಿಸಿದ ರಿಲಯನ್ಸ್
* ಐದು ವರ್ಷದವರೆಗೆ ಮೃತರ ಕುಟುಂಬಕ್ಕೆ ಸಿಗಲಿದೆ ವೇತನ
* ಮಕ್ಕಳಿಗೂ ಶಿಕ್ಷಣ ಒದಗಿಸುವ ಘೋಷಣೆ
ಮುಂಬೈ(ಜೂ.03): ಕೋವಿಡ್ ಹೋರಾಟದಲ್ಲಿ ಜೀವ ಕಳೆದುಕೊಂಡ ತನ್ನ ಉದ್ಯೋಗಿಗಳ ಕುಟುಂಬದವರಿಗೆ ನೆರವಿನ ಹಸ್ತ ಚಾಚುವ ಸಲುವಾಗಿ ರಿಲಯನ್ಸ್ ಇಂಡಸ್ಟ್ರೀಸ್ (ಆರ್ ಐಎಲ್), ಮುಂದಿನ ಐದು ವರ್ಷಗಳವರೆಗೆ ಅವರ ಕೊನೆಯ ವೇತನ ಪ್ರಮಾಣದ ಮೊತ್ತವನ್ನು ನೀಡುವ ಹಾಗೂ ಅವರ ಮಕ್ಕಳಿಗೆ ಕಾಲೇಜು ಪದವಿ ಪೂರೈಸುವವರೆಗೂ ಶಿಕ್ಷಣಕ್ಕೆ ನೆರವು ನೀಡುವ ಮಹತ್ಕಾರ್ಯ ನಡೆಸುತ್ತಿದೆ.
ಕೋವಿಡ್‌ಗೆ ಬಲಿಯಾದ ತನ್ನ ಉದ್ಯೋಗಿಗಳ ಮಕ್ಕಳು ಭಾರತದ ಯಾವುದೇ ಶಿಕ್ಷಣ ಸಂಸ್ಥೆಯಿಂದ ಪದವಿ ಶಿಕ್ಷಣ ಪೂರೈಸುವವರೆಗೂ ಅವರ ಟ್ಯೂಷನ್, ಪುಸ್ತಕ ಮತ್ತು ಹಾಸ್ಟೆಲ್ ವಸತಿ ವೆಚ್ಚಗಳನ್ನು ರಿಲಯನ್ಸ್ ಭರಿಸಲಿದೆ. ಮೃತಪಟ್ಟ ರೋಗಿಗಳ ಸಂಗಾತಿ, ಪೋಷಕರು ಮತ್ತು ಮಕ್ಕಳ ಪದವಿ ಪೂರೈಸುವವರೆಗಿನ ಅವಧಿಯವರೆಗೆ ಆಸ್ಪತ್ರೆ ದಾಖಲೀಕರಣದ ಮೇಲೆ ಶೇ 100ರಷ್ಟು ವಿಮೆ ಪ್ರೀಮಿಯಂಅನ್ನು ಹೆಚ್ಚುವರಿಯಾಗಿ ತುಂಬಲಿದೆ.
ಇದಲ್ಲದೆ, ಕೋವಿಡ್ 19ರಿಂದ ಬಳಲುತ್ತಿರುವ ಉದ್ಯೋಗಿ ಅಥವಾ ಕುಟುಂಬದ ಸದಸ್ಯರ ಆರೈಕೆಗಾಗಿ ತೆರಳಬೇಕಿರುವ ಉದ್ಯೋಗಿಯು ಅವರು ಮಾನಸಿಕ ಹಾಗೂ ದೈಹಿಕವಾಗಿ ಸಂಪೂರ್ಣ ಚೇತರಿಸಿಕೊಳ್ಳುವವರೆಗಿನ ಪೂರ್ಣಾವಧಿಯವರೆಗೂ ವಿಶೇಷ ರಜೆಯನ್ನು ನೀಡಲಾಗುತ್ತದೆ.
ತನ್ನ ಆಫ್-ರೋಲ್ ಕೆಲಸಗಾರರಿಗೆ ಕುಟುಂಬ ನೆರವು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಕೂಡ ರಿಲಯನ್ಸ್ ಪ್ರಕಟಿಸಿದೆ. ಆರ್‌ಐಎಲ್‌ನ ಆಫ್-ರೋಲ್ ಕಾರ್ಯಪಡೆಯ ಯಾವುದೇ ಸದಸ್ಯ ಮೃತಪಟ್ಟರೆ ಅವರ ನಾಮಿನಿಗೆ 10 ಲಕ್ಷ ರೂ ಮೊತ್ತ ನೀಡಲಾಗುತ್ತದೆ. ತನ್ನ ಎಲ್ಲ ಉದ್ಯೋಗಿಗಳು ಹಾಗೂ ಅವರ ಕುಟುಂಬದವರಿಗೂ ಲಸಿಕೆಗಳನ್ನು ನೀಡಲು ರಿಲಯನ್ಸ್ ಮುಂದಾಗಿದೆ.