ನಿಮ್ಮಎನ್ ಪಿಎಸ್ ಖಾತೆ ನಿಷ್ಕ್ರಿಯವಾಗಿದೆಯಾ? ಸಕ್ರಿಯಗೊಳಿಸಲು ಹೀಗೆ ಮಾಡಿ
ಹೂಡಿಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಎನ್ ಪಿಎಸ್ ಕೂಡ ಒಂದು. ನಿಮ್ಮ ಎನ್ ಪಿಎಸ್ ಖಾತೆ ಯಾವುದೋ ಕಾರಣಕ್ಕೆ ನಿಷ್ಕ್ರಿಯಗೊಂಡಿರುತ್ತದೆ. ಅದನ್ನು ಸಕ್ರಿಯಗೊಳಿಸೋದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಮಾಹಿತಿ.
Business Desk: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ) ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ನಿವೃತ್ತಿ ಬದುಕಿಗೆ ಉಳಿತಾಯ ಮಾಡಲು ಹೂಡಿಕೆದಾರರಿಗೆ ನೆರವು ನೀಡುತ್ತದೆ. ಈ ಯೋಜನೆ ಹೂಡಿಕೆದಾರರಿಗೆ ತಮ್ಮ ಹಣಕಾಸಿನ ಭವಿಷ್ಯವನ್ನು ರೂಪಿಸಲು ಹಾಗೂ ಇಳಿ ವಯಸ್ಸಿನಲ್ಲಿ ಆದಾಯದ ಮೂಲವೊಂದನ್ನು ಸೃಷ್ಟಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆದಾಯ ತೆರಿಗೆ ಉಳಿತಾಯದ ಪ್ರಯೋಜನ ಕೂಡ ಇದೆ. ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಬಡ್ಡಿದರವೂ ಸಿಗುವ ಕಾರಣ ಎನ್ ಪಿಎಸ್ ವೇತನ ಪಡೆಯುವ ಬಹುತೇಕ ಜನರ ನೆಚ್ಚಿನ ಹೂಡಿಕೆ ಆಯ್ಕೆಯಾಗಿದೆ. ಆದರೆ, ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್ ಪಿಎಸ್ ಖಾತೆ ನಿಷ್ಕ್ರಿಯವಾಗುತ್ತದೆ. ಇಂಥ ಸಂದರ್ಭದಲ್ಲಿ ಎನ್ ಪಿಎಸ್ ಖಾತೆದಾರರು ತಮ್ಮ ಖಾತೆಯನ್ನು ಮರಳಿ ಸಕ್ರಿಯಗೊಳಿಸುವ ಮೂಲಕ ನಿವೃತ್ತಿಗೆ ಉಳಿತಾಯವನ್ನು ಮುಂದುವರಿಸಲು ಬಯಸುತ್ತಾರೆ. ಆದರೆ, ಬಹುತೇಕರಿಗೆ ಎನ್ ಪಿಎಸ್ ಖಾತೆಯನ್ನು ಮರಳಿ ಸಕ್ರಿಯಗೊಳಿಸೋದು ಹೇಗೆ ಎಂಬುದು ತಿಳಿದಿರೋದಿಲ್ಲ. ಹಾಗಾದ್ರೆ ಎನ್ ಪಿಎಸ್ ಖಾತೆಯನ್ನು ಮರಳಿ ಸಕ್ರಿಯಗೊಳಿಸೋದು ಹೇಗೆ? ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ಮಾಹಿತಿ.
ಎನ್ ಪಿಎಸ್ ಖಾತೆ ಮರಳಿ ಕ್ರಿಯಾಶೀಲಗೊಳಿಸೋದು ಹೇಗೆ?
1.ಕೇಂದ್ರೀಯ ದಾಖಲೆ ನಿರ್ವಹಣೆ ಏಜೆನ್ಸಿಯನ್ನು ಸಂಪರ್ಕಿಸಿ
ಎನ್ ಪಿಎಸ್ ಖಾತೆದಾರರು ತಮ್ಮ ಖಾತೆಗಳನ್ನು ಮರಳಿ ಸಕ್ರಿಯಗೊಳಿಸಲು ಮೊದಲು ಕೇಂದ್ರೀಯ ದಾಖಲೆಗಳ ನಿರ್ವಹಣೆ ಏಜೆನ್ಸಿ (CRA) ಸಂಪರ್ಕಿಸಬೇಕು. ಎಲ್ಲ ಎನ್ ಪಿಎಸ್ ಖಾತೆಗಳ ದಾಖಲೆಗಳನ್ನು ಸಿಆರ್ ಎ (CRA) ನಿರ್ವಹಣೆ ಮಾಡುತ್ತದೆ. ಹಾಗೆಯೇ ಖಾತೆಗಳನ್ನು ಸಕ್ರಿಯಗೊಳಿಸುವ ಕಾರ್ಯವನ್ನು ಕೂಡ ಎನ್ ಪಿಎಸ್ ಮಾಡುತ್ತದೆ. ಚಂದಾದಾರರು ಇ-ಮೇಲ್, ಫೋನ್ ಅಥವಾ ಎನ್ ಪಿಎಸ್ ಟ್ರಸ್ಟ್ ವೆಬ್ ಸೈಟ್ ಮೂಲಕ ಸಿಆರ್ ಎ ಅನ್ನು ಸಂಪರ್ಕಿಸಬಹುದು.
ತೆರಿಗೆದಾರರೇ ಗಮನಿಸಿ, ವಿಳಂಬ ಐಟಿಆರ್ ಸಲ್ಲಿಕೆಗೆ ನಾಳೆ ಕೊನೆಯ ಅವಕಾಶ
2.ಅಗತ್ಯ ದಾಖಲೆಗಳ ಸಲ್ಲಿಕೆ
ಎನ್ ಪಿಎಸ್ ಖಾತೆಯನ್ನು ಸಕ್ರಿಯಗೊಳಿಸಲು ಚಂದಾದಾರರು ನಿರ್ದಿಷ್ಟ ದಾಖಲೆಗಳನ್ನು ಸಿಆರ್ ಎಗೆ ಸಲ್ಲಿಕೆ ಮಾಡಬೇಕು. ಇದರಲ್ಲಿ ಮರು ಸಕ್ರಿಯಗೊಳಿಸುವ ಅರ್ಜಿ, ಗುರುತು ದೃಢೀಕರಣ ದಾಖಲೆಗಳು, ವಿಳಾಸ ದೃಢೀಕರಣ ಹಾಗೂ ಸಿಆರ್ ಎಗೆ ಅಗತ್ಯವಿರುವ ಇತರ ದಾಖಲೆಗಳು ಸೇರಿವೆ. ಈ ದಾಖಲೆಗಳನ್ನು ಸಿಆರ್ ಎಗೆ ಸಲ್ಲಿಕೆ ಮಾಡುವ ಮುನ್ನ ಎಲ್ಲವೂ ಸಮರ್ಪಕವಾಗಿವೆಯಾ ಎಂದು ಪರಿಶೀಲಿಸಬೇಕು.
3.ಕೊಡುಗೆ ನೀಡಿ
ಎನ್ ಪಿಎಸ್ ಖಾತೆಯನ್ನು ಸಕ್ರಿಯಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎನ್ ಪಿಎಸ್ ಚಂದಾದಾರರು ತಮ್ಮ ಖಾತೆಯನ್ನು ಸಕ್ರಿಯಗೊಳಿಸಲು ಕೊಡುಗೆ ನೀಡಬೇಕು. ಕನಿಷ್ಠ ಎಷ್ಟು ಮೊತ್ತದ ಹಣವನ್ನು ಖಾತೆಯಲ್ಲಿ ಜಮೆ ಮಾಡಬೇಕು ಎಂಬುದು ಎನ್ ಪಿಎಸ್ ಖಾತೆಯ ವಿಧ ಹಾಗೂ ಚಂದಾದಾರರ ವಯಸ್ಸನ್ನು ಅವಲಂಬಿಸಿದೆ.
4.ಹೂಡಿಕೆ ಆಯ್ಕೆಯನ್ನು ಆರಿಸಿ
ಒಮ್ಮೆ ಖಾತೆಯನ್ನು ಸಕ್ರಿಯಗೊಳಿಸಿದರೆ ಚಂದಾದಾರರು ಎನ್ ಪಿಎಸ್ ಖಾತೆಗೆ ಕೊಡುಗೆ ನೀಡಲು ಹೂಡಿಕೆದಾರರು ಹೂಡಿಕೆ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಎನ್ ಪಿಎಸ್ ಅಡಿಯಲ್ಲಿ ಎರಡು ವಿಧದ ಹೂಡಿಕೆ ಆಯ್ಕೆಗಳು ಲಭ್ಯವಿವೆ. ಸಕ್ರಿಯ ಹಾಗೂ ಸ್ವಯಂ ಅಥವಾ ಅಟೋ. ಸಕ್ರಿಯ ಆಯ್ಕೆ ಚಂದಾದಾರರಿಗೆ ಯಾವ ನಿರ್ದಿಷ್ಟ ನಿಧಿಯಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಇನ್ನು ಸ್ವಯಂ ಅಥವಾ ಅಟೋ ಆಯ್ಕೆ ಚಂದಾದಾರರ ವಯಸ್ಸು ಹಾಗೂ ರಿಸ್ಕ್ ಮಟ್ಟವನ್ನು ಪರಿಗಣಿಸಿ ವಿವಿಧ ನಿಧಿಗಳಲ್ಲಿ ಹೂಡಿಕೆ ಮಾಡುತ್ತದೆ.
ಸರ್ಟಿಫಿಕೇಟ್ ಆಫ್ ಕವರೇಜ್ ಅಂದ್ರೇನು? ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ?
5.ವೈಯಕ್ತಿಕ ಮಾಹಿತಿಗಳನ್ನು ನವೀಕರಿಸಿ
ಎನ್ ಪಿಎಸ್ ಚಂದಾದಾರರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ನವೀಕರಿಸೋದು ಕೂಡ ಮುಖ್ಯ. ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ಮಾಹಿತಿಗಳನ್ನು ನವೀಕರಿಸಬೇಕು. ಇದ್ರಿಂದ ಎನ್ ಪಿಎಸ್ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಅವರಿಗೆ ಲಭಿಸುತ್ತದೆ.