RBI action against RBL Bank : ಮುಂಬೈ ಮೂಲದ ಬ್ಯಾಂಕ್ ವಿರುದ್ಧ ಆರ್ ಬಿಐ ಹಠಾತ್ ಕ್ರಮ, ಕಾರಣವೇನು?
ಮುಂಬೈ ಮೂಲದ ಬ್ಯಾಂಕ್ ಆರ್ ಬಿಎಲ್ ವಿರುದ್ಧ ಆರ್ ಬಿಐ ಕ್ರಮ
ಭಾನುವಾರ ಸುದ್ದಿಗೋಷ್ಠಿ ಕರೆದ ಆರ್ ಬಿಎಲ್ ಮ್ಯಾನೇಜ್ ಮೆಂಟ್
ನಮ್ಮ ಬ್ಯಾಂಕ್ ನ ಬೆಂಬಲಕ್ಕೆ ಆರ್ ಬಿಐ ನಿಂತಿದೆ ಎಂದ ಹಂಗಾಮಿ ಸಿಇಒ ರಾಜೀವ್ ಅಹುಜಾ
ಮುಂಬೈ (ಡಿ.26): ಮುಂಬೈ ಮೂಲದ ಖಾಸಗಿ ಬ್ಯಾಂಕ್, 74 ವರ್ಷದ ಇತಿಹಾಸ ಹೊಂದಿರುವ ಆರ್ ಬಿಎಲ್ ಬ್ಯಾಂಕ್ (RBL Bank) ಆಡಳಿತದಲ್ಲಿ ಆರ್ ಬಿಐ ಎರಡು ಮಹತ್ತರವಾದ ಬದಲಾವಣೆ ಮಾಡಿದ ಒಂದು ದಿನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ನ ಹಂಗಾಮಿ ಮುಖ್ಯ ವ್ಯವಸ್ಥಾಪಕ ಅಧಿಕಾರಿ ರಾಜೀವ್ ಅಹುಜಾ (RBL Bank interim MD & CEO Rajeev Ahuja), "ಆರ್ ಬಿಎಲ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve Bank of India) ಬೆಂಬಲ ಇದೆ" ಎಂದಿದ್ದಾರೆ. ಬ್ಯಾಂಕ್ ಆಡಳಿತದಲ್ಲಿ ಮಾತ್ರವಲ್ಲದೆ, ಆಡಳಿತ ಮಂಡಳಿಯಲ್ಲಿರುವ ಸದಸ್ಯರಿಗೂ ಆರ್ ಬಿಐ (RBI) ಬೆಂಬಲ ನೀಡಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ರಜಾ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ಇಂಥ ಬದಲಾವಣೆಯಾಗುವುದು ಬಹಳ ಕಡಿಮೆ ಆದರೆ, ಕ್ರಿಸ್ ಮಸ್ ದಿನ ಆರ್ ಬಿಎಲ್ ಬ್ಯಾಂಕ್ ವಿರುದ್ಧವಾಗಿ ಆರ್ ಬಿಐ ತೆಗೆದುಕೊಂಡಿರುವ ಕೆಲ ಕಠಿಣ ಕ್ರಮಗಳು ಬ್ಯಾಂಕ್ ನ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. ಮೊದಲಿಗೆ ಆರ್ ಬಿಐನ ಸಂವಹನ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ಯೋಗೇಶ್ ದಯಾಳ್ (Yogesh K Dayal ) ಅವರನ್ನು ಆರ್ ಬಿಎಲ್ ಬ್ಯಾಂಕ್ ನ ಸಹಾಯಕ ನಿರ್ದೇಶಕರನ್ನಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದ ದಿನವೇ ದೇಶದ ಅಗ್ರ ಷೇರು ಮಾರುಕಟ್ಟೆಗಳಿಗೆ ಮಾಹಿತಿ ನೀಡಿದ ಆರ್ ಬಿಐ, ದೀರ್ಘಕಾಲದಿಂದ ಆರ್ ಬಿಎಲ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ವ್ಯವಸ್ಥಾಪಕರಾಗಿದ್ದ ವಿಶ್ವವೀರ್ ಅಹುಜಾ (Vishwavir Ahuja) ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಡ್ಡಾಯ ರಜೆಗೆ ತೆರಳಿದ್ದಾರೆ ಎಂದು ಹೇಳಿತ್ತು. ಆ ಬಳಿಕ ಅವರ ಸ್ಥಾನಕ್ಕೆ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ರಾಜೀವ್ ಅಹುಜಾ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ನೇಮಕ ಮಾಡಿದೆ.
ಆರ್ ಬಿಐನ ಹಠಾತ್ ನಿರ್ಧಾರದ ಬಳಿಕ ಭಾನುವಾರ ಸಂಜೆಯ ವೇಳೆ ಸುದ್ದಿಗೋಷ್ಠಿ ಕರೆದ ರಾಜೀವ್ ಅಹುಜಾ, "ಆರ್ ಬಿಎಲ್ ನಲ್ಲಿ ಹಣಕಾಸಿನ ಕಾರ್ಯಕ್ಷಮತೆಯ ಕುರಿತಾಗಿ ಆರ್ ಬಿಐ ಮಾಡಿರುವ ಕ್ರಮ ಇದಲ್ಲ. ಬ್ಯಾಂಕ್ ಗೆ ಆರ್ ಬಿಐ ಸಂಪೂರ್ಣವಾದ ಬೆಂಬಲ ನೀಡಿದೆ. ಅದರೊಂದಿಗೆ ಬ್ಯಾಂಕ್ ಉತ್ತಮ ಬಂಡವಾಳವನ್ನು ಹೊಂದಿದ್ದು ಮುಂದಿನ 2-3 ವರ್ಷಗಳವರೆಗೆ ಯಾವುದೇ ಬಂಡವಾಳದ ಅವಶ್ಯಕತೆಯನ್ನು ಹೊಂದಿಲ್ಲ' ಎಂದು ಮಾಹಿತಿ ನೀಡಿದರು.
Banking Sector : 2022 ರಲ್ಲಿ ಆಗಲು ಸಿದ್ಧವಾಗಿರುವ ಬದಲಾವಣೆಗಳೇನು?
ಅದರೊಂದಿಗೆ ಅನುಭವಿ ಬ್ಯಾಂಕರ್ ವಿಶ್ವವೀರ್ ಅಹುಜಾ ಅವರ ರಜೆಗೆ ಮಂಡಳಿ ಅನುಮತಿ ನೀಡಿದೆ ಎಂದು ಹೇಳಿದ ರಾಜೀವ್ ಅಹುಜಾ, "ಬ್ಯಾಂಕ್ ನ ಹೊಸ ಆಡಳಿತ ಮಂಡಳಿ ಬ್ಯಾಂಕ್ಅನ್ನು ಮುಂದಿನ ಹಂತಕ್ಕೇರಿಸುವವರೆಗೂ ವಿಶ್ವವೀರ್ ಅಹಜಾ ನಮ್ಮೊಂದಿಗೆ ಇರಬೇಕು ಎಂದು ನಾವು ಬಯಸಿದ್ದೆವು" ಎಂದಿದ್ದಾರೆ. ಹೊಸ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಯಶಸ್ವಿಯಾಗಿ ಬ್ಯಾಂಕ್ ಅನ್ನು ಮುನ್ನಡೆಸುವ ವಿಶ್ವಾಸವಿದೆ ಎಂದು ಅಹುಜಾ ವಿವರಿಸಿದ್ದಾರೆ.
World Economy : 2022ರಲ್ಲಿ ಮೊಟ್ಟಮೊದಲ ಬಾರಿಗೆ 100 ಲಕ್ಷ ಕೋಟಿ ಗಡಿ ಮುಟ್ಟಲಿದೆ ವಿಶ್ವದ ಆರ್ಥಿಕತೆ!
ಏನಿರಬಹುದು ಕಾರಣ?: ಇವೆಲ್ಲದರ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂಥದ್ದೊಂದು ಕ್ರಮ ಕೈಗೊಳ್ಳಲು ಕಾರಣವೇನು ಎನ್ನುವ ಚರ್ಚೆಗಳು ಆರಂಭವಾಗಿದೆ. ಬ್ಯಾಂಕ್ ಆಗಲಿ ಎಕ್ಸ್ ಚೇಂಜ್ ಆಗಲಿ ಈ ನಿಟ್ಟಿನಲ್ಲಿ ಯಾವುದೇ ಕಾರಣವನ್ನು ನೀಡಿಲ್ಲ. ಆದರೆ, ಯಾವುದೇ ಕಾರಣವಿಲ್ಲದೆ ಇಂಥದ್ದೊಂದು ಬದಲಾವಣೆಗಳು ಸಾಧ್ಯವೇ ಇಲ್ಲ ಎನ್ನುವ ಮಾತನ್ನೂ ಒಪ್ಪಬೇಕಾಗುತ್ತದೆ. ಆದರೆ, ಇದೇ ಕಾರಣ ಎನ್ನುವ ಯಾವುದೇ ಮಾಹಿತಿ ಸದ್ಯಕ್ಕಿಲ್ಲ. ಹಿಂದೆ ಇತರ ಬ್ಯಾಂಕ್ ಗಳ ದೃಷ್ಟಿಯಲ್ಲಿ ಆದ ಇದೇ ರೀತಿಯ ಬದಲಾವಣೆಗಳನ್ನು ಗಮನಿಸಿದರೆ ಇದನ್ನು ಕಾಕತಾಳೀಯ ಎನ್ನಲು ಸಾಧ್ಯವಿಲ್ಲ. ಹಣಕಾಸಿನ ಕಾರ್ಯಕ್ಷಮತೆ ಅಥವಾ ಆಡಳಿತಾತ್ಮಕ ಸಮಸ್ಯೆಗಳು ಅಥವಾ ಈ ಎರಡರ ವಿಷಯದಲ್ಲೂ ನಿಕಟ ಪರಿಶೀಲನೆಯ ಅಗತ್ಯವಿದೆ ಎಂದು ಭಾವಿಸಿದಾಗ ಮಾತ್ರವೇ ಆರ್ ಬಿಐ ತನ್ನ ವ್ಯಕ್ತಿಗಳನ್ನು ಆಯಾ ಬ್ಯಾಂಕ್ ಗಳ ಆಡಳಿತ ಮಂಡಳಿಗೆ ನೇಮಿಸುತ್ತದೆ.