ನವದೆಹಲಿ[ಏ.27]: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 20ರೂಪಾಯಿಯ ಹೊಸ ನೋಟು ಬಿಡುಗಡೆಗೊಳಿಸಲಿದೆ. ಸದ್ಯ ಈ ನೋಟಿನ ವಿನ್ಯಾಸ ಹಾಗೂ ಬಣ್ಣ ಯವುದು ಅದು ಹೇಗಿರಲಿದೆ ಎಂಬುವುದು ರಿವೀಲ್ ಆಗಿದೆ. ನಿಂಬೆಹಣ್ಣಿನಂತಹ ಹಳದಿ ಬಣ್ಣದಲ್ಲಿರುವ ಈ ಹೊಸ ನೋಟಿನಲ್ಲಿ, RBI ಗವರ್ನರ್ ಶಶಿಕಾಂತ್ ದಾಸ್ ಹಸ್ತಾಕ್ಷರವಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸೆಂಟ್ರಲ್ ಬ್ಯಾಂಕ್ ’ನೋಟಿನ ಒಂದು ಬದಿಯಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿದೆ. ಇದು ನಮ್ಮ ದೇಶದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ' ಎಂದಿದ್ದಾರೆ. ಇದೇ ವೇಳೆ 20 ರೂಪಾಯಿಯ ಹಳೆ ನೋಟುಗಳು ಬ್ಯಾನ್ ಆಗುವುದಿಲ್ಲ, ಅಬವು ಕೂಡಾ ಚಲಾವಣೆಯಲ್ಲಿರಲಿವೆ ಎಂದಿದ್ದಾರೆ.

20 ರೂಪಾಯಿ ಹೊಸ ನೋಟಿನ ಮಹತ್ವದ ವಿಚಾರ:

* ನೂತನ 20 ರೂಪಾಯಿ ನೋಟು ಸಂಪೂರ್ಣವಾಗಿ ಹೊಸ ವಿನ್ಯಾಸವಾಗಿದೆ. ಈ ನೋಟಿನ ಮುಂಭಾಗ ಹಾಗೂ ಹಿಂಬಾಗದಲ್ಲಿ ಹೊಸ ಬಣ್ಣದಿಂದ ಕೂಡಿದ ಜಿಯೋಮೆಟ್ರಿಕ್ ಪ್ಯಾಟರ್ನ್ ಅಳವಡಿಸಲಾಗಿದೆ.

* 20 ರೂಪಾಯಿ ನೂತನ ನೋಟು 63 mm x 129 mm ಅಳತೆ ಹೊಂದಿದೆ.  ಅಂದರೆ 63mm ಉದ್ದ ಹಾಗೂ 129mm ಅಗಲವಿದೆ.

* ನೋಟಿನ ಮುಂಭಾಗದಲ್ಲಿ 20 ಸಂಖ್ಯೆಯನ್ನು ಅಂಕೆ ಹಾಗೂ ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. 

* ಈ ಹೊಸ ನೋಟಿನಲ್ಲಿ ಗಾಂಧೀಜಿಯ ಭಾವಚಿತ್ರವೂ ಇದೆ. ಇದರೊಂದಿಗೆ ಅತಿ ಚಿಕ್ಕ ಅಕ್ಷರಗಳಲ್ಲಿ "RBI", "Bharat", "India" ಹಾಗೂ "20" ಎಂದು ಬರೆಯಲಾಗಿದೆ. ಇಷ್ಟೇ ಅಲ್ಲದೇ ಗವರ್ನರ್ ಶಶಿಕಾಂತ್ ದಾಸ್ ಹಸ್ತಾಕ್ಷರವೂ ಇದೆ.

* ಈ ನೂತನ ನೋಟಿನ ಹಿಂಬದಿಯಲ್ಲಿ ಅಶೋಕ ಸ್ಥಂಭ ಹಾಗೂ ಎಲೆಕ್ಟ್ರೋಟೈಪ್ ನಲ್ಲಿ 20 ಎಂದು ಬರೆಯಲಾಗಿದೆ.

* 20 ರೂಪಾಯಿಯ ಹೊಸ ನೋಟಿನ ಹಿಂಬದಿಯಲ್ಲಿ ಮುದ್ರಣದ ಇಸವಿ ಕೂಡಾ ಇದೆ. ಅಲ್ಲದೇ ಸ್ವಚ್ಛ ಭಾರತ ಅಭಿಯಾನದ ಲಾಂಛನ ಹಾಗೂ ಘೋಷಣೆ ಕೂಡಾ ನೋಡಬಹುದು.

* ಇವೆಲ್ಲವನ್ನು ಹೊರತುಪಡಿಸಿ 15 ವಿಭಿನ್ನ ಭಾಷೆಗಳಲ್ಲಿ 20 ರೂಪಯಿಗಳು ಎಂದೂ ಬರೆಯಲಾಗಿದೆ.

ನೋಟಿನಲ್ಲಿ ಮುದ್ರಿಸಲಾಗಿರುವ ಎಲ್ಲೋರಾ ಗುಹೆಯು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನೋಡಬಹುದು. ಇದು ಯುನೆಸ್ಕೋ ಮಾನ್ಯತೆಯ ವಿಶ್ವ ಪಾರಂಪರಿಕ ಕ್ಷೇತ್ರದಲ್ಲಿ ಸ್ಥಾನ ಗಳಿಸಿದೆ. ಒಟ್ಟು 34 ಗುಹೆಗಳಿದ್ದು, ಇದು ಒಟ್ಟು 30 ಕಿ.ಮೀ ವಿಸ್ತೀರ್ಣ ಹೊಂದಿದೆ. ಈ ಗುಹೆಗಳಲ್ಲಿ ಹಿಂದೂ, ಬೌದ್ಧ ಹಾಗೂ ಜೈನ ಮಂದಿರಗಳಿವೆ. 12 ಬೌದ್ಧ ಗುಹೆ, 17 ಹಿಂದೂ ಹಾಗೂ 5 ಜೈನ ಗುಹೆಗಳಿವೆ. ಇವು 1000 ವರ್ಷಗಳ ಹಿಂದೆ ನಿರ್ಮಿಸಲಾದ ಗುಹೆಗಳು ಎಂಬುವುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಇವುಗಳನ್ನು ರಾಷ್ಟ್ರಕೂಟ ರಾಜಮನೆತನ ನಿರ್ಮಿಸಿದ್ದು, ಮಹಾರಾಷ್ಟ್ರದ ಪ್ರಮುಖ ದೇವಸ್ಥಾನವಾಗಿರುವ ಕೈಲಾಶ ಮಂದಿರ ಇಲ್ಲೇ ಇದೆ.