Asianet Suvarna News Asianet Suvarna News

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವಂಚನೆ ತಡೆಯಲು ಹೊಸ ವಿಧಾನ!: ಏನಿದರ ಲಾಭ?

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವಂಚನೆ ತಡೆಗೆ ‘ಟೋಕನೈಸೇಷನ್‌’ ಸುರಕ್ಷತೆ| ಕಾರ್ಡ್‌ ವ್ಯವಹಾರಕ್ಕೆ ಭದ್ರತೆ ನೀಡಲು ಆರ್‌ಬಿಐ ಮಾರ್ಗಸೂಚಿ| ಕಾರ್ಡ್‌ ವಿವರ ಬಚ್ಚಿಟ್ಟು, ಟೋಕನ್‌ ಮೂಲಕ ವ್ಯವಹಾರ

RBI Releases Guidelines For Electronic Debit and Credit Card Payments
Author
New Delhi, First Published Jan 10, 2019, 12:40 PM IST

ಮುಂಬೈ[ಜ.10]: ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಅಕ್ರಮವಾಗಿ ಕಲೆ ಹಾಕಿ, ಖಾತೆಯಿಂದ ಹಣ ಲಪಟಾಯಿಸುವ ಸೈಬರ್‌ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ‘ಟೋಕನೈಸೇಷನ್‌’ ಎಂಬ ಸುರಕ್ಷಾ ವಿಧಾನದ ಮೊರೆ ಹೋಗಿದೆ. ಈ ಸಂಬಂಧ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳಿಗೆ ಹೆಚ್ಚುವರಿ ಸುರಕ್ಷತಾ ಪದರವಾಗಿ ‘ಟೋಕನೈಸೇಷನ್‌’ ಕೆಲಸ ಮಾಡುತ್ತದೆ. ಕಾರ್ಡ್‌ಗಳಲ್ಲಿ ಇರುವ 16 ಸಂಖ್ಯೆ, ವಾಯಿದೆ ಮುಗಿಯುವ ಅವಧಿ ಹಾಗೂ ಭದ್ರತಾ ಕೋಡ್‌ನಂತಹ ಅತ್ಯಂತ ಮಹತ್ವದ ಮಾಹಿತಿಗಳನ್ನು ಇದು ಬಚ್ಚಿಡುತ್ತದೆ. ವಿಶಿಷ್ಟಗುರುತಿನ ಸಂಖ್ಯೆ ಹೊಂದಿದ ‘ಟೋಕನ್‌’ಗಳನ್ನು ಸೃಷ್ಟಿಸುತ್ತದೆ. ಅದನ್ನು ಬಳಸಿ ನಿಶ್ಚಿಂತೆಯಿಂದ ಆನ್‌ಲೈನ್‌ ಅಥವಾ ವ್ಯಾಪಾರಿಗಳ ಬಳಿ ವ್ಯವಹಾರ ಮಾಡಬಹುದಾಗಿದೆ. ಈ ಟೋಕನ್‌ ಪಡೆಯಲು ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.

ಈ ವ್ಯವಸ್ಥೆ ಆರಂಭಿಸಲು ಕಾರ್ಡ್‌ಗಳನ್ನು ಒದಗಿಸುವ ಕಂಪನಿಗಳು ಆ್ಯಪ್‌ ಸೌಲಭ್ಯ ಕಲ್ಪಿಸುವ ಕಂಪನಿಗಳಿಗೆ ಅನುಮತಿ ನೀಡಬೇಕು. ಆರ್‌ಬಿಐ ವಿಧಿಸಿರುವ ಮಾರ್ಗಸೂಚಿಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಕಾರ್ಡ್‌ದಾರರು ಈ ಸೇವೆ ಪಡೆಯಲು ಇಚ್ಛಿಸಿದಲ್ಲಿ ನೋಂದಾಯಿಸಿಕೊಳ್ಳಬೇಕು. ಸದ್ಯ ಮೊಬೈಲ್‌ ಹಾಗೂ ಟ್ಯಾಬ್ಲೆಟ್‌ಗಳ ಮೂಲಕ ಟೋಕನ್‌ ವ್ಯವಹಾರ ಮಾಡಬಹುದು.

ಏನಿದರ ಲಾಭ?:

ಕೆಲವೊಂದು ವೆಬ್‌ಸೈಟ್‌/ಆ್ಯಪ್‌ಗಳ ಮೂಲಕ ನಿರಂತರ ಖರೀದಿ ವ್ಯವಹಾರ ಮಾಡುವ ಗ್ರಾಹಕರು, ಪದೇ ಪದೇ ಕಾರ್ಡ್‌ ವಿವರ ನಮೂದಿಸುವುದನ್ನು ತಪ್ಪಿಸಿಕೊಳ್ಳಲು ಅಲ್ಲೇ ಕಾರ್ಡ್‌ ವಿವರ ಸಂಗ್ರಹಿಸುವ ಅವಕಾಶ ಬಳಸಿಕೊಳ್ಳುತ್ತಾರೆ. ಆ ವಿವರ ಶಾಶ್ವತವಾಗಿ ವೆಬ್‌ಸೈಟ್‌ ಅಥವಾ ಆ್ಯಪ್‌ನಲ್ಲಿ ಸಂಗ್ರಹವಾಗಿರುತ್ತದೆ. ಆ ಮಾಹಿತಿಯನ್ನು ಖದೀಮರು ಕದ್ದು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿರುತ್ತದೆ.

ಅದರ ಬದಲಿಗೆ ಟೋಕನೈಸೇಷನ್‌ ವಿಧಾನ ಬಳಸಿದರೆ ಕಾರ್ಡ್‌, ಟೋಕನ್‌ ಸೌಲಭ್ಯ ಒದಗಿಸುವ ಕಂಪನಿ ಹಾಗೂ ಅದನ್ನು ಬಳಸುವ ಉಪಕರಣಗಳ ವಿವರ ಸಮ್ಮಿಲನಗೊಂಡ ವಿಶಿಷ್ಟಅಂಕಿಗಳ ಟೋಕನ್‌ ಲಭಿಸುತ್ತದೆ. ಅದನ್ನು ಬಳಸಿಕೊಂಡು ಎಷ್ಟುಬಾರಿ ಬೇಕಾದರೂ ಆ್ಯಪ್‌ ಅಥವಾ ವೆಬ್‌ಸೈಟ್‌ನಲ್ಲಿ ವ್ಯವಹಾರ ಮಾಡಬಹುದು. ಕಾರ್ಡ್‌ನ ವಿವರವನ್ನು ನೀಡಬೇಕಾಗಿಲ್ಲ. ಆ ಮಾಹಿತಿ ಟೋಕನ್‌ನಲ್ಲಿ ಅಡಕವಾಗಿರುತ್ತದೆ. ಕಾರ್ಡ್‌ ಒದಗಿಸುವ ಕಂಪನಿ ಬಿಟ್ಟು ಬೇರೆ ಯಾರಿಗೂ ಅದರ ವಿವರ ಇರುವುದಿಲ್ಲ.

Follow Us:
Download App:
  • android
  • ios