ನವದೆಹಲಿ(ನ.6): ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ಮುಸುಕಿನ ಗುದ್ದಾಟದ ಕುರಿತು ಆರ್‌ಬಿಐ ಮಾಜಿ ಗರ್ವನರ್ ರಘುರಾಮ್ ರಾಜನ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಬಿಐ ಮತ್ತು ಕೇಂದ್ರದ ತಿಕ್ಕಾಟವನ್ನು ಕ್ರಿಕೆಟ್‌ಗೆ ಹೋಲಿಸಿರುವ ರಾಜನ್, ಈ ಸಂದರ್ಭದಲ್ಲಿ ಆರ್‌ಬಿಐ ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ತಾಳ್ಮೆಯ ಆಟಗಾರ ರಾಹುಲ್ ದ್ರಾವಿಡ್ ರೀತಿ ತನ್ನ ಆಟವನ್ನು ಆಡಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಆರ್‌ಬಿಐ ದ್ರಾವಿಡ್ ರೀತಿ ಆಡಬೇಕೆ ಹೊರತು ಸಿಕ್ಸರ್ ಸಿದ್ದು ರೀತಿ ಅಲ್ಲ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಆರ್‌ಬಿಐ ಅತ್ಯಂತ ತಾಳ್ಮೆಯಿಂದ ತನ್ನ ಸಮಸ್ಯೆಗಳನ್ನು ಬಗೆಹರಿಸಬೇಕು. ಸಿದ್ದು ರೀತಿ ತಾಳ್ಮೆ ಕಳೆದುಕೊಂಡರೆ ಕೇಂದ್ರದ ವಿರುದ್ಧದ ಆಟದಲ್ಲಿ ಆರ್‌ಬಿಐ ಸೋಲುವುದು ಗ್ಯಾರಂಟೀ ಎಂದು ರಾಜನ್ ಹೇಳಿದ್ದಾರೆ.

ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಎರಡೂ ಪರಸ್ಪರ ಹೊಂದಾಣಿಕೆ ಮೂಲಕ ಸಮಸ್ಯ ಇತ್ಯರ್ಥಕ್ಕ ಮುಂದಾಗಬೇಕು. ಕೇಂದ್ರ ಸರ್ಕಾರ ಆರ್‌ಬಿಐ ಸ್ವಾಯತ್ತತೆಯನ್ನು ಗೌರವಿಸಬೇಕು. ಆರ್‌ಬಿಐ ಕಾರ್ಯಚಟುವಟಿಕೆಯಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ.