* ಇಂದು ಮತ್ತೆ ಆರ್‌ಬಿಐ ಶಾಕ್‌?* ಸಾಲದ ಮೇಲಿನ ಬಡ್ಡಿ ದರ ಶೇ.0.25-0.50ರಷ್ಟುಹೆಚ್ಚಳ ಸಾಧ್ಯತೆ* ರಿಸರ್ವ್ ಬ್ಯಾಂಕ್‌ನಿಂದ ಮಹತ್ವದ ದ್ವೈಮಾಸಿಕ ಸಾಲ ನೀತಿ ಪ್ರಕಟ

ಮುಂಬೈ(ಜೂ.08): ಭಾರತೀಯ ರಿಸರ್ವ್ ಬ್ಯಾಂಕ್‌ನ ದ್ವೈಮಾಸಿಕ ಸಾಲ ನೀತಿ ಬುಧವಾರ ಪ್ರಕಟವಾಗಲಿದ್ದು, ಬ್ಯಾಂಕ್‌ ಗೃಹ, ವಾಹನ ಮತ್ತು ಇತರೆ ಸಾಲ ಪಡೆದವರಿಗೆ ಮತ್ತೊಂದು ಭರ್ಜರಿ ಶಾಕ್‌ ನೀಡುವ ಸಾಧ್ಯತೆ ಇದೆ. ಹಣದುಬ್ಬರ ಪ್ರಮಾಣ ನಿಯಂತ್ರಣದಲ್ಲಿಡಲು ನಾನಾ ವಿತ್ತೀಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಆರ್‌ಬಿಐ, ಬುಧವಾರ ತನ್ನ ಸಾಲ ನೀತಿಯಲ್ಲಿ ಸಾಲದ ಮೇಲಿನ ಬಡ್ಡಿದರವನ್ನು ಶೇ.0.25ರಿಂದ ಶೇ.0.50ರವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಎನ್ನಲಾಗಿದೆ.

ಒಂದು ವೇಳೆ ನಿರೀಕ್ಷೆಯಂತೆ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಿದರೆ ಗೃಹ, ವಾಹನ ಮತ್ತು ಇತರೆ ಸಾಲಗಳ ಮಾಸಿಕ ಕಂತಿನಲ್ಲಿ ಮತ್ತಷ್ಟುಏರಿಕೆಯಾಗಲಿದೆ. ಕಳೆದ ತಿಂಗಳು ಕೂಡಾ ಆರ್‌ಬಿಐ ರೆಪೋದರವನ್ನು ಶೇ.0.40ರಷ್ಟುಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಶಾಕ್‌ ನೀಡಿತ್ತು. ಅದರ ಬೆನ್ನಲ್ಲೇ ಮತ್ತೆ ಶಾಕ್‌ ನೀಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಆರ್‌ಬಿಐನ ಗವರ್ನರ್‌ ಶಕ್ತಿಕಾಂತ್‌ ನೇತೃತ್ವದ ಹಣಕಾಸು ನೀತಿ ಸಮಿತಿಯು ಸೋಮವಾರದಿಂದಲೇ ತನ್ನ ಮೂರು ದಿನಗಳ ಸಭೆ ಆರಂಭಿಸಿದ್ದು, ಬುಧವಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಸ್ವತಃ ದಾಸ್‌ ಕೂಡಾ ಈಗಾಗಲೇ ಇನ್ನೊಂದು ಸುತ್ತಿನಲ್ಲಿ ಬಡ್ಡಿದರ ಏರಿಕೆ ಸುಳಿವು ನೀಡಿರುವ ಹಿನ್ನೆಲೆಯಲ್ಲಿ, ಬುಧವಾರ ಬಡ್ಡಿದರ ಏರಿಕೆಯಾಗುವುದು ಖಚಿತ. ಏರಿಕೆಯ ಪ್ರಮಾಣವಷ್ಟೇ ಇದೀಗ ಕುತೂಹಲದ ವಿಷಯ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಬಡ್ಡಿದರ ಏರಿಕೆ ಏಕೆ?

ಚಿಲ್ಲರೆ ಹಣದುಬ್ಬರ ಪ್ರಮಾಣವು ಹಲವು ಸಮಯಗಳಿಂದ ನಿರ್ವಹಣೆ ಮಾಡಬಹುದು ಎನ್ನಲಾದ ಶೇ.6ರ ಆಸುಪಾಸಿನಲ್ಲೇ ಇತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ಅದು ಶೇ.7.79ಕ್ಕೆ ತಲುಪುವ ಮೂಲಕ 8 ವರ್ಷದ ಗರಿಷ್ಠ ಮಟ್ಟಮುಟ್ಟಿತ್ತು. ಕೇಂದ್ರ ಸರ್ಕಾರವು ಆರ್‌ಬಿಐಗೆ ಹಣದುಬ್ಬರ ಪ್ರಮಾಣವನ್ನು ಶೇ.4ರಲ್ಲಿ ಕಾಪಾಡುವಂತೆ ಸೂಚಿಸಿದೆ. ಆದರೂ ಶೇ.2ರಷ್ಟುಏರುಪೇರಿಗೆ ಅವಕಾಶ ಕಲ್ಪಿಸಿದೆ. ಆದರೆ ಇದೀಗ ಆ ಮಿತಿಯೂ ಮೀರಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಅನಿವಾರ್ಯವಾಗಿ ವಿತ್ತೀಯ ಕ್ರಮಗಳ ಮೂಲಕ ಹಣದುಬ್ಬರ ನಿಯಂತಣಕ್ಕೆ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

2 ಹಂತದಲ್ಲಿ ಶೇ.0.75ರಷ್ಟು ಏರಿಕೆ?

ಮುಂಬೈ: ವಿದೇಶಿ ಬ್ರೊಕರೇಜ್‌ ಸಂಸ್ಥೆಯಾದ ಬೋಫಾ ಸೆಕ್ಯುರಿಟೀಸ್‌, ಆರ್‌ಬಿಐ ಒಟ್ಟು ಎರಡು ಹಂತಗಳಲ್ಲಿ ಬಡ್ಡಿದರವನ್ನು ಶೇ.0.75ರವರೆಗೂ ಏರಿಸುವ ಸಾಧ್ಯತೆ ಇದೆ ವಿಶ್ಲೇಷಿಸಿದೆ. ಅದರ ಪ್ರಕಾರ ಜೂನ್‌ನ ಸಾಲ ನೀತಿಯಲ್ಲಿ æೕ.0.35ರಷ್ಟುಏರಿಕೆ ಮತ್ತು ಆಗಸ್ಟ್‌ನ ಸಾಲನೀತಿಯಲ್ಲಿ ಮತ್ತೆ ಶೇ.0.40ರಷ್ಟುಏರಿಕೆ ಮಾಡಬಹುದು. ಇಲ್ಲವೇ ಜೂನ್‌ ಸಾಲ ನೀತಿಯಲ್ಲಿ ಶೇ.0.50ರಷ್ಟುಏರಿಕೆ ಮಾಡಿ, ಆಗಸ್ಟ್‌ನಲ್ಲಿ ಶೇ.0.25ರಷ್ಟುದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.