ಮುಂಬೈ(ಡಿ.05): ಆರ್‌ಬಿಐ ತನ್ನ ಹಣಕಾಸು ನೀತಿಯ ಪ್ರಕಟಣೆ ಹೊರಡಿಸಿದ್ದು, ಮಾರುಕಟ್ಟೆಯ ನಿರೀಕ್ಷಣೆಯಂತೆಯೇ ರೆಪೋ ದರವನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲಾಗಿದೆ. 

ಈ ಹಿಂದಿನ ಪ್ರಕಟಣೆಯಂತೆ ರೆಪೋ ದರ ಶೇ.6.5 ರಷ್ಟಿದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಲ್ಲದೆ ರಿವರ್ಸ್ ರೆಪೋ ದರ ಕೂಡ ಶೇ. 6.25 ರಷ್ಟರಲ್ಲಿ ಮುಂದುವರೆದಿದೆ.

ಎರಡು ಬಾರಿಯ ಸತತ ರೆಪೋ ದರ ಏರಿಕೆಯ ಬಳಿಕ ಆರ್‌ಬಿಐ ಈ ಬಾರಿ ಯಾವುದೇ ದರ ಏರಿಕೆ ಮಾಡಿಲ್ಲ. ರೆಪೋ ದರ ಏರಿಕೆ ಮಾಡಬೇಕೋ ಅಥವಾ ಬೇಡವೋ ಎಂಬುದರ ಕುರಿತು ಈ ಹಿಂದೆ ನಡೆದಿದ್ದ ಸಭೆಯಲ್ಲಿ ವಿತ್ತೀಯ ನೀತಿ ಸಮಿತಿ ಸದಸ್ಯರ ಪೈಕಿ, ಐವರು ಸದಸ್ಯರು ರೆಪೋ ದರ ಯಥಾಸ್ಥಿತಿ ಕಾಪಾಡಿಕೊಳ್ಳುವ ಪರ ಮತ ಹಾಕಿದ್ದರು ಎನ್ನಲಾಗಿದೆ.

ಇನ್ನು ರೆಪೋ ದರ ಬದಲಾವಣೆ ಮಾಡದಿರುವುದರಿಂದ ಗೃಹಸಾಲ ಕೂಡ ಯಥಾ ಸ್ಥಿತಿ ಕಾಪಾಡಿಕೊಳ್ಳಲಿದ್ದು, ಮನೆ ಕೊಳ್ಳುವವರಿಗೆ ಇದು ನಿಜಕ್ಕೂ ಸಿಹಿ ಸುದ್ದಿ ಎಂದೇ ಹೇಳಬೇಕಾಗುತ್ತದೆ.