ನವದೆಹಲಿ[ಮಾ.10]: ಬಂಧಿತ ಯಸ್‌ ಬ್ಯಾಂಕ್‌ ಪ್ರವರ್ತಕ ರಾಣಾ ಕಪೂರ್‌ ತಮ್ಮ ಅಧಿಕಾರಾವಧಿಯಲ್ಲಿ ನಡೆಸಿದ ‘ಅಂಧಾ ದರ್ಬಾರ್‌’ನ ಮತ್ತಷ್ಟುಮಾಹಿತಿಗಳು ಲಭ್ಯವಾಗಿವೆ. ಇತರ ಬ್ಯಾಂಕ್‌ಗಳಿಂದ ಸಾಲ ನಿರಾಕರಿಸಲ್ಪಟ್ಟಉದ್ಯಮಿಗಳಿಗೆ ಕೂಡ ಯಸ್‌ ಬ್ಯಾಂಕ್‌ ಮೂಲಕ ರಾಣಾ ಕಪೂರ್‌ ಅವರು ಸಾಲ ಕೊಡಿಸಿದರು. ಇದರಿಂದಾಗಿ ಇಂಥವರಿಗೆ ನೀಡಿದ ಸಾಲ ವಸೂಲಿ ಆಗದೇ ಬ್ಯಾಂಕ್‌ಗೆ 54 ಸಾವಿರ ಕೋಟಿ ರು. ನಷ್ಟವಾಯಿತು ಎಂದು ತಿಳಿದುಬಂದಿದೆ.

ಕಪೂರ್‌ ಅವರು ಎಂಥಾ ಬ್ಯಾಂಕರ್‌ ಎಂದರೆ, ತಮ್ಮ ಬ್ಯಾಂಕ್‌ ಹೆಸರಿಗೆ ಅನುಗುಣವಾಗಿಯೇ ನಡೆದುಕೊಳ್ಳುತ್ತಿದ್ದರು. ಯಾವುದಕ್ಕೂ ‘ನೋ’ ಎನ್ನುತ್ತಿರಲಿಲ್ಲ. ಎಲ್ಲದಕ್ಕೂ ‘ಯಸ್‌’ ಅನ್ನುತ್ತಿದ್ದರು. ಬೇರೆ ಬ್ಯಾಂಕ್‌ಗಳಿಂದ ಸಾಲ ನಿರಾಕರಿಸಲ್ಪಟ್ಟ‘ಕೋಟಿಪತಿ’ ಉದ್ಯಮಿಗಳಿಗೂ ಯಸ್‌ ಬ್ಯಾಂಕ್‌ನಿಂದ ಸಾಲ ಕೊಡಿಸುತ್ತಿದ್ದರು. ಒಂದು ಹಂತದಲ್ಲಿ ಬ್ಯಾಂಕ್‌ 26 ಪಟ್ಟು ಬೆಳೆಯಿತು. ಆದರೆ ಹಿಂದೆ ಮುಂದೆ ನೋಡದೇ ಕೊಟ್ಟಸಾಲದಿಂದಾಗಿ, ಆ ಸಾಲ ವಸೂಲಿ ಆಗದೇ ಬ್ಯಾಲೆನ್ಸ್‌ ಶೀಟ್‌ನಲ್ಲಿ 54 ಸಾವಿರ ಕೋಟಿ ರು. ಕೊರತೆ ಕಾಣಿಸಿಕೊಂಡಿತು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಕೇಂದ್ರದ ಆಮಿಷ: ನೀರವ್, ಮಲ್ಯರಂತೆ ಪರಾರಿಯಾಗಿದ್ದ ರಾಣಾ ಸಿಕ್ಕಿಬಿದ್ದಿದ್ದು ಹೀಗೆ!

ಬ್ಯಾಂಕ್‌ನಲ್ಲಿ ಉತ್ತಮ ಸಾಧನೆ ಮಾಡಿದ ಉದ್ಯೋಗಿಗಳಿಗೆ ‘ಗೋಲ್ಡನ್‌ ಪಿನ್‌’ ಪ್ರಶಸ್ತಿ ನೀಡಿ, ಮುಂಬೈನಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ತಮ್ಮ ಮನೆಯಲ್ಲಿ ಐಷಾರಾಮಿ ಪಾರ್ಟಿ ಕೊಡಿಸುತ್ತಿದ್ದರು. ‘ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿದರೆ ಮಾತ್ರ ನೀವು ದೊಡ್ಡದಾಗಿ ಬೆಳೆಯುತ್ತೀರಿ’ ಎಂದು ಹೇಳುತ್ತಿದ್ದರು ಎಂದು ಬ್ಯಾಂಕ್‌ನ ಹಿರಿಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಐಷಾರಾಮಿ ಜೀವನ ನಡೆಸುತ್ತಿದ್ದ ಅವರು, ಪ್ರಚಾರ ಪ್ರಿಯರಾಗಿದ್ದರು ಎಂದೂ ವರದಿ ಹೇಳಿದೆ.