ನವದೆಹಲಿ[ಡಿ.19]: ಭಾರತೀಯರನ್ನು ತೀವ್ರವಾಗಿ ಕಾಡುತ್ತಿರುವ ಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರೋಟಿನ್‌ ಭರಿತ ಆಹಾರ ಪದಾರ್ಥಗಳು, ಮೊಟ್ಟೆ, ಮೀನು, ಚಿಕನ್‌ ಮತ್ತು ಮಾಂಸವನ್ನು ಪಡಿತರ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ವಿತರಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ನೀತಿ ಆಯೋಗದ 15 ವರ್ಷಗಳ ದೂರದೃಷ್ಟಿಯೋಜನೆಯ ಭಾಗವಾಗಿ ಈ ಪ್ರಸ್ತಾವನೆಯನ್ನು ಮುಂದಿನ ವರ್ಷದ ಆರಂಭದಲ್ಲಿ ನೀತಿ ಆಯೋಗ ಸರ್ಕಾರದ ಮುಂದೆ ಇಡಲಿದ್ದು, 2020 ಏಪ್ರಿಲ್‌ 1ರಂದು ಜಾರಿ ಮಾಡುವ ಸಾಧ್ಯತೆ ಇದೆ.

ಪಡಿತರ ವ್ಯವಸ್ಥೆಯ ಅಡಿಯಲ್ಲಿ ವಿತರಿಸಲಾಗುತ್ತಿರುವ ಗೋಧಿ, ಅಕ್ಕಿ, ಧಾನ್ಯಗಳ ಜೊತೆಗೆ ಇನ್ನಷ್ಟುಆಹಾರ ಪದಾರ್ಥ ಸೇರಿಸಲು ನೀತಿ ಆಯೋಗ ಉದ್ದೇಶಿಸಿದೆ. ಸರ್ಕಾರ ಈಗಾಗಲೇ ಆಹಾರ ಸಬ್ಸಿಡಿಗೆ 2019-​20ನೇ ಸಾಲಿನಲ್ಲಿ 1.84 ಲಕ್ಷ ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಪ್ರೋಟಿನ್‌ ಪೂರಿತ ಆಹಾರ ಪದಾರ್ಥಗಳ ಸಬ್ಸಿಡಿ ವಿಸ್ತರಣೆಯಿಂದ ಸರ್ಕಾರಕ್ಕೆ ಇನ್ನಷ್ಟುಹೊರ ಬೀಳಲಿದೆ. ಹೀಗಾಗಿ ಪಡಿತರ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ನೀತಿ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಕೆಲವೊಂದು ಆಹಾರ ಧಾನ್ಯಗಳನ್ನು ರಫä್ತ ಮಾಡುತ್ತಿದೆ. ಆದರೆ, ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತೀಯರಲ್ಲಿ ಅಪೌಷ್ಠಿಕತೆ ಪ್ರಮಾಣ ಹೆಚ್ಚಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ, 19.5 ಕೋಟಿ ಜನರು ಭಾರತದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 10ರಲ್ಲಿ ನಾಲ್ಕು ಮಕ್ಕಳಿಗೆ ಅಗತ್ಯವಿರುವಷ್ಟುಪೌಷ್ಠಿಕಾಂಶ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನೀತಿ ಆಯೋಗ ಈ ಹೆಜ್ಜೆ ಇಟ್ಟಿದೆ.