ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್ ) ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಬಡ್ಡಿದರವನ್ನು ಕೇಂದ್ರ ಹಣಕಾಸು ಸಚಿವಾಲಯ ಇಂದು ನಿರ್ಧರಿಸಲಿದೆ. 2020ರ ಏಪ್ರಿಲ್ ಬಳಿಕ ಕೇಂದ್ರ ಸರ್ಕಾರ ಪಿಪಿಎಫ್ ಬಡ್ಡಿದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲವಾದ ಕಾರಣ ಈ ಬಾರಿ ಏರಿಕೆ ಮಾಡುವ ನಿರೀಕ್ಷೆ ಹೆಚ್ಚಿದೆ.
Business Desk:ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್ ) ಹೂಡಿಕೆ ಮಾಡಿದವರಿಗೆ ಇಂದು ಶುಭಸುದ್ದಿ ಸಿಗುವ ಸಾಧ್ಯತೆಯಿದೆ. 2023-24ನೇ ಆರ್ಥಿಕ ಸಾಲಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಪಿಪಿಎಫ್ ಬಡ್ಡಿದರ ಇಂದು (ಜೂ.30) ಘೋಷಣೆಯಾಗಲಿದೆ. 2020ರ ಏಪ್ರಿಲ್ ಬಳಿಕ ಕೇಂದ್ರ ಸರ್ಕಾರ ಪಿಪಿಎಫ್ ಬಡ್ಡಿದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ 2020ರಿಂದ ಪಿಪಿಎಫ್ ಬಡ್ಡಿದರ ಶೇ.7.1ರಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಪಿಪಿಎಫ್ ಖಾತೆದಾರರು ಈ ಬಾರಿ ಬಡ್ಡಿದರ ಏರಿಕೆಯಾಗುವ ನಿರೀಕ್ಷೆ ಹೊಂದಿದ್ದಾರೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ಎಸ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕಳೆದ ಎರಡು ತ್ರೈಮಾಸಿಕದಲ್ಲಿ ಹೆಚ್ಚಳ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕಳೆದ ಮೇನಿಂದ ಇಲ್ಲಿಯ ತನಕ ರೆಪೋ ದರದಲ್ಲಿ ಶೇ.2.5ರಷ್ಟು ಹೆಚ್ಚಳ ಮಾಡಿದೆ. ಹೀಗಾಗಿ ಈ ಬಾರಿ ಸರ್ಕಾರ ಪಿಪಿಎಫ್ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಹೆಚ್ಚಿದೆ.
2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪಿಪಿಎಫ್ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಶೇ.7.9ರಿಂದ ಶೇ.7.1ಕ್ಕೆ ಇಳಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನ 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೂಡ ಬಡ್ಡಿದರ ಇಳಿಕೆ ಮಾಡಲಾಗಿತ್ತು. ಕೊನೆಯದಾಗಿ ಪಿಪಿಎಫ್ ಬಡ್ಡಿದರದಲ್ಲಿ ಏರಿಕೆ ಮಾಡಿರೋದು 2018ರ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ. ಈ ಸಮಯದಲ್ಲಿ ಬಡ್ಡಿದರವನ್ನು ಶೇ.7.6ರಿಂದ ಶೇ.8ಕ್ಕೆ ಹೆಚ್ಚಳ ಮಾಡಲಾಗಿತ್ತು.
ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಸೌಲಭ್ಯ ಪ್ರಾರಂಭಿಸಿದ ಕೆನರಾ ಬ್ಯಾಂಕ್
ಪಿಪಿಎಫ್ ಖಾತೆಯಲ್ಲಿ ಹೂಡಿಕೆದಾರರು ವಾರ್ಷಿಕ ಗರಿಷ್ಠ 1.5ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಗಳನ್ನು ಕೂಡ ಕ್ಲೇಮ್ ಮಾಡಬಹುದು. ಇನ್ನು ಪಿಪಿಎಫ್ ಠೇವಣಿಗಳ ಮೇಲಿನ ಬಡ್ಡಿ ಗಳಿಕೆ ಹಾಗೂ ಮೆಚ್ಯುರಿಟಿ ಬಳಿಕ ವಿತ್ ಡ್ರಾ ಮಾಡಿರುವ ಮೊತ್ತ ಕೂಡ ತೆರಿಗೆಮುಕ್ತವಾಗಿದೆ.
ಪಿಪಿಎಫ್ ಬಡ್ಡಿದರ ಲೆಕ್ಕಾಚಾರ ಹೇಗೆ?
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪಿಪಿಎಫ್ ಬಡ್ಡಿದರ ಏರಿಕೆಯಾಗುತ್ತ ಎಂಬುದನ್ನು ತಿಳಿಯಲು ನೀವು ಬಡ್ಡಿದರ ಲೆಕ್ಕಾಚಾರ ಮಾಡೋದು ಹೇಗೆ ಎಂಬುದನ್ನು ಅರಿಯೋದು ಅಗತ್ಯ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ 10 ವರ್ಷಗಳ ಅವಧಿಯ ಸರ್ಕಾರಿ ಸೆಕ್ಯುರಿಟಿ ಬಾಂಡ್ ಗಳಿಗೆ (G-sec) ಲಿಂಕ್ ಆಗಿರುತ್ತವೆ. ಈ ಹಿಂದಿನ ಮೂರು ತಿಂಗಳಲ್ಲಿ ಈ ಬಾಂಡ್ ಗಳ ಗಳಿಕೆ ಆಧರಿಸಿ ಬಡ್ಡಿದರ ಬದಲಾವಣೆ ಮಾಡುವ ಸೂತ್ರವನ್ನು ಸರ್ಕಾರ ಅನುಸರಿಸುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಸೂತ್ರದ ಅನುಸಾರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಿಸುತ್ತದೆ.
ಈ ಬಾರಿ ಪಿಪಿಎಫ್ ಬಡ್ಡಿದರ ಹೆಚ್ಚಾಗುತ್ತಾ?
2016ರಿಂದ ಹಣಕಾಸು ಸಚಿವಾಲಯ ಅನುಸರಿಸುತ್ತಿರುವ ಸೂತ್ರದ ಆಧಾರದಲ್ಲಿ ನೋಡಿದರೆ ಪಿಪಿಎಫ್ ಬಡ್ಡಿದರ 10 ವರ್ಷಗಳ ಸರ್ಕಾರಿ ಸೆಕ್ಯುರಿಟಿ ಬಾಂಡ್ ಗಳ ಗಳಿಕೆಗಿಂತ 25 ಬೇಸಿಸ್ ಪಾಯಿಂಟ್ ಹೆಚ್ಚಿರಬೇಕು. ಹೀಗಾಗಿ ಈ ಲೆಕ್ಕಾಚಾರದಲ್ಲಿ ನೋಡಿದರೆ ಪಿಪಿಎಫ್ ಬಡ್ಡಿದರ ಶೇ.7.55ರಷ್ಟಿರಬೇಕು. ಹೀಗಾಗಿ ಈ ಬಾರಿ ಸರ್ಕಾರ ಪಿಪಿಎಫ್ ಬಡ್ಡಿದರ ಹೆಚ್ಚಳ ಮಾಡಬಹುದೆಂಬ ನಿರೀಕ್ಷೆಯಿದೆ. ಆದರೆ, ಕೆಲವೊಮ್ಮೆ ಸಾರ್ವಜನಿಕರ ಅಭಿಪ್ರಾಯಗಳು ಅಥವಾ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರದ ಇತರ ಅಂಶಗಳನ್ನು ಪರಿಗಣಿಸಿ ಈ ಯೋಜನೆ ಬಡ್ಡಿದರವನ್ನು ಸ್ಥಿರವಾಗಿಡುವ ಅಥವಾ ಹೆಚ್ಚಳ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತದೆ.
ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ಟಿಸಿಎಸ್ ಇಲ್ಲ; ಹೊಸ ದರ ಜು.1ರ ಬದಲು ಅ.1ರಿಂದ ಜಾರಿ
ಪಿಪಿಎಫ್ ಅವಧಿ ಎಷ್ಟು?
ಪಿಪಿಎಫ್ ಖಾತೆ ಅವಧಿ 15 ವರ್ಷ. ಅದಾದ ಬಳಿಕ ನೀವು ಬಯಸಿದರೆ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಣೆ ಮಾಡಬಹುದು. ಪಿಪಿಎಫ್ ಯೋಜನೆಗಳ ನಿಯಮಗಳು 2019ರ ಅನ್ವಯ ಪಿಪಿಎಫ್ ಖಾತೆ 15 ವರ್ಷಗಳ ಬಳಿಕ ಮೆಚ್ಯೂರ್ ಆದಾಗ ಮೂರು ಆಯ್ಕೆಗಳಿರುತ್ತವೆ. ಒಂದು ಖಾತೆ ಮುಚ್ಚುವುದು ಹಾಗೂ ಎಲ್ಲ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದು. ಇನ್ನೊಂದು ಹೊಸ ಹೂಡಿಕೆಯಿಲ್ಲದೆ 5 ವರ್ಷಗಳಿಗೆ ಖಾತೆ ಅವಧಿ ವಿಸ್ತರಣೆ ಮಾಡುವುದು. ಹಾಗೆಯೇ ಮತ್ತೊಂದು ಹೊಸ ಹೂಡಿಕೆ ಸಮೇತ ಖಾತೆ ಅವಧಿ ವಿಸ್ತರಣೆ ಮಾಡುವುದು.
