ನವದೆಹಲಿ(ಜೂ.15): ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದು ಸವಾಲಿನ ಕೆಲಸವಾಗಿದ್ದರೂ, ಅದನ್ನು ಸಾಧಿಸುವುದು ಕಷ್ಟದ ಕೆಲಸವೇನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಐದನೇ ನೀತಿ ಆಯೋಗದ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಎಲ್ಲಾ ರಾಜ್ಯಗಳ ಸಹಕಾರ ಮತ್ತು ಪ್ರಯತ್ನದಿಂದ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದು ತಮ್ಮ ಗುರಿ ಎಂದು ಹೇಳಿದರು.

ಇದೇ ವೇಳೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಘೋಷಣೆ ಪೂರ್ಣಗೊಳಿಸುವಲ್ಲಿ ನೀತಿ ಆಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಬಡತನ, ನಿರುದ್ಯೋಗ, ಬರ, ಪ್ರವಾಹ, ಮಾಲಿನ್ಯ, ಭ್ರಷ್ಟಾಚಾರ ಹಾಗೂ ಹಿಂಸೆಯ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಮೋದಿ ಕರೆ ನೀಡಿದರು.

ರಾಜ್ಯಗಳು ತಮ್ಮ ಪ್ರಮುಖ ಸಾಮರ್ಥ್ಯವನ್ನು ಗುರುತಿಸಿ, ಜಿಡಿಪಿ ಗುರಿಗಳನ್ನು ಜಿಲ್ಲಾ ಮಟ್ಟದಿಂದಲೇ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣದ ಮುಖ್ಯಮಂತ್ರಿ  ಕೆ. ಚಂದ್ರಶೇಖರ್ ರಾವ್ ಹೊರತುಪಡಿಸಿ, ಉಳಿದೆಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಹಿರಿಯ ಸಚಿವರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.