ನವದೆಹಲಿ[ಜ.07]: ಕೇಂದ್ರದ ವಾರ್ಷಿಕ ಬಜೆಟ್‌ ಮಂಡನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ದೇಶದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು ಹಾಗೂ ಆರ್ಥಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ಉದ್ಯಮಿಗಳ ಜೊತೆ ಮಹತ್ವದ ಸಭೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಡೆಸಿದ ಈ ಮಹತ್ವಾಕಾಂಕ್ಷೆ ಸಭೆಯಲ್ಲಿ ಭಾರತದ ಅತೀ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ, ಟಾಟಾ ಸಮೂಹದ ರತನ್‌ ಟಾಟಾ, ಭಾರ್ತಿ ಎಂಟರ್‌ಪ್ರೈಸಸ್‌ ಮುಖ್ಯಸ್ಥ ಸುನೀಲ್‌ ಭಾರ್ತಿ ಮಿತ್ತಲ್‌, ಕೋಟ್ಯಾಧಿಪತಿ ಗೌತಂ ಅದಾನಿ, ಮಹಿಂದ್ರಾ ಗ್ರೂಪ್‌ನ ಆನಂದ್‌ ಮಹಿಂದ್ರಾ, ಗಣಿಗಾರಿಕೆ ಉದ್ಯಮಿ ಅನಿಲ್‌ ಅಗರ್ವಾಲ್‌, ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌, ಟಿವಿಎಸ್‌ ಮುಖ್ಯಸ್ಥ ವೇಣು ಶ್ರೀನಿವಾಸನ್‌, ಎಲ್‌ ಅಂಡ್‌ ಟಿ ಮುಖ್ಯಸ್ಥ ಎ.ಎಂ ನಾಯಕ್‌ ಸೇರಿದಂತೆ ಇನ್ನಿತರ ಉದ್ಯಮಿಗಳು ಭಾಗವಹಿಸಿದ್ದರು.

ದೇಶದ ಆರ್ಥಿಕ ಕುಸಿತದ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್‌ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಕಡಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆರ್ಥಿಕತೆಯ ಉತ್ತೇಜನಕ್ಕಾಗಿ ನೂತನ ಉತ್ಪಾದಕ ಕಂಪನಿಗಳ ಸ್ಥಾಪನೆಗೆ ವಿದೇಶಿ ಬಂಡವಾಳ ಆಕರ್ಷಣೆಗಾಗಿ ತೆರಿಗೆ ಕಡಿತ, 10 ಸಾರ್ವಜನಿಕ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4ಕ್ಕೆ ಸೀಮಿತ ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು.

ಆದರೆ, ಇದರಿಂದ ನಿರೀಕ್ಷಿತ ಮಟ್ಟದ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ದೇಶದ ಪ್ರಮುಖ ಉದ್ಯಮಿಗಳ ಜೊತೆ ಸಮಾಲೋಚನೆ ನಡೆಸುವ ಮೂಲಕ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಭೆ ನಡೆಸಿದರು.