* ಪಿಎಫ್‌ ನಿಯಮಗಳಲ್ಲಿ ಬದಲಾವಣೆ* ನಿಮ್ಮ ಖಾತೆಗೆ ಹಣ ಸೇರಬೇಕಾದ್ರೆ ಹೀಗ್ಮಾಡೋದು ಮರೆಯಬೇಡಿ* ಮಾಹಿತಿ ದೃಢೀಕರಿಸಲು ಗಡವು ಕೊಟ್ಟ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ

ನವದೆಹಲಿ(ಜೂ.20): ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ತನ್ನ ನಿಯಮದಲ್ಲಿ ಬದಲಾವಣೆ ಮಾಡಿದೆ. ಇದರ ಅನ್ವಯ UAN ಅಕೌಂಟ್‌ ಜೊತೆ ಆಧಾರ್‌ ಕಾರ್ಡ್‌ ಲಿಂಕ್ ಮಾಡದ ಉದ್ಯೋಗಿಗಳ ಖಾತೆಗೆ ಇನ್ಮುಂದೆ ಹಣ ಕ್ರೆಡಿಟ್ ಆಗುವುದಿಲ್ಲ. ಹೌದು ಇಪಿಎಫ್‌ಒ ಯುಎಎನ್ ಖಾತೆ ಜೊತೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ನೀಡಲಾಗಿದ್ದ ಸಮಯವನ್ನು 2021ರ ಜೂನ್ 1ರಿಂದ 2021 ರ ಸೆಪ್ಟೆಂಬರ್‌ 1rವರೆಗೆ ವಿಸ್ತರಿಸಿದೆ. ತಪ್ಪಿದಲ್ಲಿ ಪಿಎಫ್ ಹಣ ಸೇರಿ ಇತರ ಅನುಕೂಲಗಳು ಕೈತಪ್ಪಲಿವೆ.

ಪಿಎಫ್‌ ಹಣವನ್ನು ಯಾವಾಗ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

ಈ ಬಗ್ಗೆ ಮಾಹಿತಿ ನೀಡಿರುವ EPFO“ಯುಎಎನ್​ ಜೊತೆಗೆ ಆಧಾರ್ ಜೋಡಣೆ ಕಡ್ಡಾಯ. ಒಂದು ವೇಳೆ ಜೋಡಣೆ ಆಗದಿದ್ದಲ್ಲಿ ಸೆಪ್ಟೆಂಬರ್ 1, 2021ರಿಂದ ಜಾರಿಗೆ ಬರುವಂತೆ ಉದ್ಯೋಗದಾತರಿಗೆ ಪಿಎಫ್ ಹಣ ಹಾಕಲು ಆಗುವುದಿಲ್ಲ,” ಎಂದು ತಿಳಿಸಿದೆ.

ಅಲ್ಲದೇ ಈ ಹೊಸ ನಿಯಮ ಜಾರಿಗೆ ತರಲು ಸಾಮಾಜಿಕ ಭದ್ರತೆ ಸಂಹಿತೆ 2020, ಸೆಕ್ಷನ್ 142ಕ್ಕೆ ಕಾರ್ಮಿಕ ಸಚಿವಾಲಯ ತಿದ್ದುಪಡಿ ಮಾಡಿದೆ. ಸೆಕ್ಷನ್ 142ರ ಅನ್ವಯ, ಉದ್ಯೋಗಿ ಅಥವಾ ಅಸಂಘಟಿತ ವಲಯದ ಕಾರ್ಮಿಕರು ಅಥವಾ ಬೇರಾವುದೇ ವ್ಯಕ್ತಿ ಈ ಸಂಹಿತೆಯಡಿ ಅನುಕೂಲ ಪಡೆಯಲು ಆಧಾರ್ ಸಂಖ್ಯೆ ಗುರುತು ಬೇಕು. ಯುಎಎನ್​ ಜತೆ ಆಧಾರ್ ಸಂಖ್ಯೆ ದೃಢೀಕರಣಗೊಂಡ ಎಲೆಕ್ಟ್ರಾನಿಕ್ ಚಲನ್ ಅಥವಾ ಪಿಎಫ್​ ರಿಟರ್ನ್ (ಇಸಿಆರ್) ಫೈಲಿಂಗ್​ ಜಾರಿಯಾಗುವ ಅವಧಿ 2021ರ ಸೆಪ್ಟೆಂಬರ್​ 1 ವಿಸ್ತರಣೆ ಆಗಿದೆ. ಯಾವ ಉದ್ಯೋಗಿಯ ಪಿಎಫ್​ ಯುಎಎನ್ ಜತೆಗೆ ಆಧಾರ್​ ಜೋಡಣೆ ಆಗಿರುತ್ತದೋ ಅಂಥವರ ಇಸಿಆರ್ ಫೈಲ್ ಮಾಡುವುದಕ್ಕೆ ಮಾತ್ರ ಉದ್ಯೋಗದಾತರಿಗೆ ಸಾಧ್ಯವಾಗುತ್ತದೆ. ಯುಎಎನ್​ ಜತೆಗೆ ಆಧಾರ್ ಜೋಡಣೆ ಆಗದ್ದಕ್ಕೆ ಉದ್ಯೋಗದಾತರು ಪ್ರತ್ಯೇಕವಾಗಿ ಇಸಿಆರ್​ ಫೈಲ್ ಮಾಡಬಹುದು ಎಂದು ಇಪಿಎಫ್‌ಒ ಹೇಳಿದೆ. 

ಒಂದು ರಿಕ್ವೆಸ್ಟ್, ಡಬಲ್ ಆಗುತ್ತೆ ನಿಮ್ಮ PF ಹಣ: ಇಲ್ಲಿದೆ ವಿಧಾನ!

ಕೆವೈಸಿ ಅಪ್​ಡೇಷನ್, ಮುಂಗಡಕ್ಕೆ ಮನವಿ, ವಿಥ್​ಡ್ರಾ ಮೊದಲಾದ ಎಲ್ಲಾ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲು ಇಪಿಎಫ್‌ಒ ಸಜ್ಜಾಗುತ್ತಿದೆ. ಹೀಗಿರುವಾಗ ಆಧಾರ್ ಗುರುತು ಅಗತ್ಯ. ಅಧಾರ್ ಮಾಹಿತಿ ಅಪ್​ಡೇಟ್​ ಆಗದಿದ್ದರೆ ಇಪಿಎಫ್​ನ ಇತರ ಅನುಕೂಲಗಳು ಸಹ ಕಳೆದುಕೊಳ್ಳಬೇಕಾಗುತ್ತದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಇನ್ನುಳಿದಂತೆ ಆಧಾರ್‌ ದೃಢೀಕರಿಸದಿದ್ದರೆ ಕೊರೋನಾ ಅಡ್ವಾನ್ಸ್, ಪಿಎಫ್​ ಖಾತೆಗೆ ಜೋಡಣೆಯಾದ ಇನ್ಷೂರೆನ್ಸ್ ಸಿಗಲ್ಲ. ಪ್ಯಾನ್​ ಕಾರ್ಡ್​ ಜತೆಗೆ ಆಧಾರ್​ ಜೋಡಣೆ ಆಗುವುದು ಎಲ್ಲ ಬ್ಯಾಂಕ್​ಗಳು, ಪಿಪಿಎಫ್ ಖಾತೆಗಳು ಮತ್ತು ಇಎಫ್​ಪಿ ಖಾತೆಗಳಿಗೆ ಪ್ರಾಥಮಿಕ ಕೆವೈಸಿ ಅಗತ್ಯ. ಒಂದು ವೇಳೆ ಇದು ಆಗದಿದ್ದಲ್ಲಿ ಬಡ್ಡಿ ಜಮೆ ಹಾಗೂ ವಿಥ್​ಡ್ರಾ ಕ್ಲೇಮ್​ ತಿರಸ್ಕೃತವಾಗುತ್ತದೆ. ಉದ್ಯೋಗದಾತರು ಈಗಿನ ವಿಸ್ತರಣೆಯಾದ ಸಮಯವನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಮಾಹಿತಿ ರವಾನಿಸಬೇಕು. ಒಂದು ವೇಳೆ ಜೋಡಣೆ ಆಗದಿದ್ದಲ್ಲಿ ಅದರ ಪರಿಣಾಮ ಏನು ಹಾಗೂ ಜೋಡಿಸುವುದು ಹೇಗೆ ಎಂಬುದನ್ನು ಮಾರ್ದರ್ಶನ ನೀಡಿ, ಅದನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎನ್ನುತ್ತಾರೆ ವಿಶ್ಲೇಷಕರು.

ಇನ್ಮುಂದೆ PF ಹಣ ಪಡೆಯುವುದು ಸುಲಭ: ಬಂದಿದೆ ಹೊಸ ಆಪ್ಶನ್!

ಆಧಾರ್‌ ಅಪ್ಡೇಟ್‌ ಹೇಗೆ? 

https://unifiedportal-mem.epfindia.gov.in/memberinterface/  ಮೂಲಕ ನಿಮ್ಮ UAN ಖಾತೆಗೆ ಲಾಗಿನ್ ಆಗಿ. ಬಳಿಕ ಮೇಲ್ಬದಿಯಲ್ಲಿ ಕಾಣುವ Manage ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಅಲ್ಲಿರುವ KYC ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ಬ್ಯಾಂಕ್, ಪಾನ್‌ ಕಾರ್ಡ್‌, ಆಧಾರ್‌ ಹಾಗೂ ಪಾಸ್‌ಪೋರ್ಟ್‌ ಮಾಹಿತಿ ನಮೂದಿಸುವ ಆಯ್ಕೆಗಳಿವೆ. ಇಲ್ಲಿ ಆಧಾರ್‌ ಅಪ್ಡೇಟ್‌ ಮಾಡಿ. ಇನ್ನುಳಿದಂತೆ ಪಾನ್ ಹಾಗೂ ಬ್ಯಾಂಕ್‌ ಡೀಟೇಲ್ಸ್ ಮಾಹಿತಿಯನ್ನೂ ನಮೂದಿಸುವುದು ಉತ್ತಮ.