ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗುತ್ತಲೇ ಸಾಗಿದ್ದು ಇದರಿಂದ ಗ್ರಾಹಕರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ. ಪೆಟ್ರೋಲ್ ದರ ಕಳೆದ 3 ತಿಂಗಳ ಕನಿಷ್ಟ ಮಟ್ಟಕ್ಕೆ ಇಳಿಕೆಯಾಗಿದೆ. 

ನವದೆಹಲಿ: ದಿನೇ ದಿನೇ ಏರಿಕೆಯ ಮೂಲಕ ವಾಹನ ಬಳಕೆದಾರರಿಗೆ ಭಾರೀ ಬಿಸಿ ಮುಟ್ಟಿಸಿದ್ದ ಪೆಟ್ರೋಲ್‌ ಬೆಲೆ ಇದೀಗ 3 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. 

ಸತತ 32ನೇ ದಿನವಾದ ಬುಧವಾರ ಕೂಡ ತೈಲ ಕಂಪನಿಗಳು ದರ ಇಳಿಕೆಯ ಇಲ್ಲವೇ ಯಥಾಸ್ಥಿತಿ ಕಾಪಾಡುವ ನಿರ್ಧಾರದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬುಧವಾರ ಪೆಟ್ರೋಲ್‌ ಬೆಲೆ 76.38 ರು. ಮತ್ತು ಡೀಸೆಲ್‌ ಬೆಲೆ 71.27ಕ್ಕೆ ಇಳಿದಿದೆ. 

ಇದು ಕಳೆದ ಮೂರೂವರೆ ತಿಂಗಳಲ್ಲೇ ಪೆಟ್ರೋಲ್‌ನ ಕನಿಷ್ಠ ಬೆಲೆಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ ಲೀ.ಗೆ 83 ರು. ಮತ್ತು ಮುಂಬೈನಲ್ಲಿ 90 ರು. ತಲುಪುವ ಮೂಲಕ ಗ್ರಾಹಕರನ್ನು ಹೈರಣಾಗಿಸಿತ್ತು. 

ಆದರೆ ನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಕಚ್ಚಾತೈಲ ಬೆಲೆ ಇಳಿಕೆಯಾದ ಹಿನ್ನೆಲೆ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯ ಚೇತರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸತತವಾಗಿ ಇಳಿಕೆಯಾಗುತ್ತ ಬಂದಿದೆ.