ನವದೆಹಲಿ(ಆ. 28): ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಆಮದು ವೆಚ್ಚ ಹೆಚ್ಚಳವಾದ ಪರಿಣಾಮ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಗಗನಕ್ಕೇರಿದೆ. 

ಇದರ ನೇರ ಪರಿಣಾಮ ತೈಲ ದರದ ಮೇಲಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತ ಎನ್ನಲಾಗಿದೆ.  ಡೀಸೆಲ್ ದರ ಲೀಟರ್‌ಗೆ 69 ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 78 ರೂ.ಗೆ ತಲುಪಿದೆ. ಡೀಸೆಲ್ ದರ ಸೋಮವಾರ ಲೀಟರ್‌ಗೆ ಏಕಾಏಕಿ 14 ಪೈಸೆ ಮತ್ತು ಪೆಟ್ರೋಲ್‌ಗೆ 13 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಸತತ ಮೂರನೇ ದಿನವೂ ಬೆಲೆ ಏರಿಕೆಯಾದಂತಾಗಿದೆ. 

ಅಮೆರಿಕದ ಡಾಲರ್ ಎದುರು ರೂಪಾಯಿ ದರವು ಆಗಸ್ಟ್ 16ರಿಂದ ತೀವ್ರ ಕುಸಿತ ಕಂಡಿರುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ 12 ದಿನಗಳಲ್ಲಿ ಪೆಟ್ರೋಲ್ ದರ ದೆಹಲಿಯಲ್ಲಿ ಲೀಟರ್‌ಗೆ 77 ಪೈಸೆಯಷ್ಟು ದುಬಾರಿಯಾಗಿದೆ. ಡೀಸೆಲ್ ಬೆಲೆ 74 ಪೈಸೆಗಳಷ್ಟು ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 80.98, ಡೀಸೆಲ್ 72.46, ಚೆನ್ನೈನಲ್ಲಿ ಪೆಟ್ರೋಲ್ 81.09, ಡೀಸೆಲ್ 74.45ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 80.49 ರೂ. ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 71.73ರಷ್ಟಿದೆ.

ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಇಂಧನ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಒತ್ತಾಯಿಸಲಾಗಿದೆ. ಆದರೆ ತಕ್ಷಣವೇ ತೆರಿಗೆ ಕಡಿತಗೊಳಿಸಲು ಸರ್ಕಾರ ನಿರಾಕರಿಸಿದೆ.