ತೈಲ ಕಂಪನಿಗಳಿಗೆ ಪೆಟ್ರೋಲ್‌ ಮೇಲೆ 4 ರು.ನಷ್ಟ| ಡೀಸೆಲ್‌ ಮಾರಾಟದಿಂದ 2 ರು. ನಷ್ಟ| ಕಳೆದ 20 ದಿನದಿಂದ ದರ ಪರಿಷ್ಕರಣೆ ಸ್ಥಗಿತ| ಕಚ್ಚಾತೈಲ ಬೆಲೆ 4 ಡಾಲರ್‌ ಏರಿದ್ದರೂ ಕಂಪನಿಗಳ ಮೌನ| ಚುನಾವಣೆ ಕಾರಣ ದರ ಏರಿಕೆಗೆ ‘ಬ್ರೇಕ್‌?’

ನವದೆಹಲಿ(ಮಾ.20): ‘ತೈಲ ಬೆಲೆ ಏರಿಕೆ ಅಥವಾ ಇಳಿಕೆ ಮೇಲೆ ಸರ್ಕಾರದ ನಿಯಂತ್ರಣ ಇಲ್ಲ’ ಎಂದು ಕೇಂದ್ರ ಸರ್ಕಾರವೇ ಹೇಳಿದ್ದರೂ, ಪಂಚರಾಜ್ಯ ಚುನಾವಣೆ ಘೋಷಣೆಯಾದ ಮಾರನೇ ದಿನದಿಂದ (ಫೆಬ್ರವರಿ 27) ಪೆಟ್ರೋಲ್‌ ಬೆಲೆ ಪರಿಷ್ಕರಣೆ ನಿಂತುಹೋಗಿದೆ. ಈ 20 ದಿನದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಪೇಟೆಯಲ್ಲಿ ಬ್ಯಾರಲ್‌ಗೆ 64 ಡಾಲರ್‌ನಿಂದ 68 ಡಾಲರ್‌ಗೆ ಏರಿದ್ದರೂ ದೇಶದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಯಾಗಿಲ್ಲ. ಹಾಗಾಗಿ ದೇಶದ ತೈಲ ಕಂಪನಿಗಳಿಗೆ ಲೀಟರ್‌ ಪೆಟ್ರೋಲ್‌ ಮೇಲೆ 4 ರು. ಹಾಗೂ ಡೀಸೆಲ್‌ ಮೇಲೆ 2 ರು. ನಷ್ಟವಾಗುತ್ತಿದೆ.

ತೈಲ ಬೆಲೆಯ ದೈನಂದಿನ ಪರಿಷ್ಕರಣೆಗೆ ತೈಲ ಕಂಪನಿಗಳು ಸ್ವತಂತ್ರವಾಗಿವೆ. ಅದರಲ್ಲೂ ಕಳೆದ 6 ದಿನಗಳಿಂದ ಕಚ್ಚಾತೈಲ ದರ ಏರುತ್ತಲೇ ಇದೆ. ಆದರೂ ಕಳೆದ 20 ದಿನಗಳಿಂದ ಇಷ್ಟೊಂದು ನಷ್ಟಆಗುತ್ತಿದ್ದರೂ ಕಂಪನಿಗಳು ಬೆಲೆ ಏಕೆ ಏರಿಸಿಲ್ಲ? ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಒತ್ತಡವಿದೆಯೇ ಎಂಬ ಸಂದೇಹಗಳು ಏಳತೊಡಗಿವೆ.

ಒಂದು ವೇಳೆ ಕಂಪನಿಗಳು ಸ್ವತಂತ್ರವಾಗಿ ನಿರ್ಧಾರ ಕೈಗೊಂಡು ದೈನಂದಿನ ದರ ಪರಿಷ್ಕರಣೆ ಮಾಡಿದ್ದರೆ ಇಂದು ಮುಂಬೈನಲ್ಲಿ ಪೆಟ್ರೋಲ್‌ ಬೆಲೆ 103 ರು. ಹಾಗೂ ಡೀಸೆಲ್‌ ಬೆಲೆ 100 ರು. ತಲುಪಬೇಕಿತ್ತು ಎಂದು ಮೂಲಗಳು ಹೇಳಿವೆ. ಎಲ್‌ಪಿಜಿ ಮಾರಾಟದಲ್ಲೂ ಕಂಪನಿಗಳು ನಷ್ಟಅನುಭವಿಸುತ್ತಿವೆ ಎಂದು ಅವು ತಿಳಿಸಿವೆ.

ಕರ್ನಾಟಕದಲ್ಲಿ 2018ರ ಏಪ್ರಿಲ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಕೂಡ ಇದೇ ರೀತಿ 19 ದಿನಗಳ ಕಾಲ ಬೆಲೆ ಏರಿಕೆಯನ್ನು ತೈಲ ಕಂಪನಿಗಳು ನಿಲ್ಲಿಸಿದ್ದವು ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಬೆಂಗಳೂರಿನಲ್ಲಿ ಹಲವು ದಿನಗಳಿಂದ ಪೆಟ್ರೋಲ್‌ ದರ ಲೀ.ಗೆ 94.22 ರು. ಹಾಗೂ ಡೀಸೆಲ್‌ಗೆ 86.37 ರು. ಇದೆ. ಎಲ್‌ಪಿಜಿ ಗ್ಯಾಸ್‌ ದರ 822 ರು. ಇದೆ. ತೈಲ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದ ಕಾರಣ ಕಳೆದ ತಿಂಗಳು ದೇಶವ್ಯಾಪಿ ಜನಾಕ್ರೋಶ ಕೇಂದ್ರ ಸರ್ಕಾರದ ವಿರುದ್ಧ ವ್ಯಕ್ತವಾಗಿತ್ತು. ಆದರೂ ಕೇಂದ್ರ ಸರ್ಕಾರವು, ‘ಇದಕ್ಕೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಆಮದು ಅವಲಂಬನೆ ನೀತಿಯೇ ಕಾರಣ’ ಎಂದು ಹೇಳಿ ಕೈತೊಳೆದುಕೊಂಡಿತ್ತು.