830 ಕೋಟಿಗೆ ರೋಲ್ಟಾ ಇಂಡಿಯಾ ಕಂಪನಿ ಖರೀದಿಗೆ ನಿರ್ಧಾರ ಮಾಡಿದ ಬಾಬಾ ರಾಮ್‌ದೇವ್!
ಪುಣೆ ಮೂಲದ ಅಶ್ಡಾನ್ ಪ್ರಾಪರ್ಟೀಸ್‌ನ ನಿವ್ವಳ ಪ್ರಸ್ತುತ ಮೌಲ್ಯದ ಆಧಾರದ ಮೇಲೆ ಮಾಡಿದ್ದ 760 ಕೋಟಿ ರೂಪಾಯಿಯ ಆಫರ್‌ಅನ್ನು ಬ್ಯಾಂಕ್‌ಗಳು ಅತಿ ಹೆಚ್ಚು ಬಿಡ್ಡರ್ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಪತಂಜಲಿ ಸಂಸ್ಥೆ 830 ಕೋಟಿಗೆ ಕಂಪನಿ ಖರೀದಿಸುವ ಆಫರ್ ಮಾಡಿದೆ.
ಮುಂಬೈ (ಫೆ.17): ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠವು ಸಾಲದಿಂದ ಮುಚ್ಚಿ ಹೋಗಿರುವ ರೋಲ್ಟಾ ಇಂಡಿಯಾ ಕಂಪನಿಯ ಮಾರಾಟಕ್ಕೆ ಮರು ಬಿಡ್‌ಗಳನ್ನು ಮಾಡಲು ಒಪ್ಪಿದೆ. ಆ ಮೂಲಕ ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ್ ಕಂಪನಿಗೆ ಕಂಪನಿ ಖರೀದಿಯ ನಿಟ್ಟಿನಲ್ಲಿ ಅವಕಾಶ ನೀಡಲು ಒಪ್ಪಿಕೊಂಡಿದೆ. ಪುಣೆ ಮೂಲದ ಅಶ್ಡಾನ್ ಪ್ರಾಪರ್ಟೀಸ್ ನಿವ್ವಳ ಪ್ರಸ್ತುತ ಮೌಲ್ಯದ ಆಧಾರದ ಮೇಲೆ ರೋಲ್ಟಾ ಇಂಡಿಯಾ ಖರೀದಿಗೆ 760 ಕೋಟಿ ಆಫರ್ ಮಾಡಿತ್ತು. ಇದನ್ನು ಬ್ಯಾಂಕ್‌ಗಳು ಕೂಡ ಅತಿದೊಡ್ಡ ಬಿಡ್ಡರ್ ಎಂದು ಘೋಷಣೆ ಮಾಡಿತ್ತು. ಆದರೆ, ಹೀಗೆ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಸಂಪೂರ್ಣ ನಗದು ರೂಪದಲ್ಲಿ 830 ಕೋಟಿ ರೂಪಾಯಿಗಳ ಆಫರ್‌ಅನ್ನು ಮಾಡಿದೆ. ಆಸಕ್ತಿ ವ್ಯಕ್ತಪಡಿಸಿದ ಎಲ್ಲಾ ಅರ್ಜಿದಾರರಿಗೆ ಅವಕಾಶ ನೀಡುವುದು ಉತ್ತಮ ಎನ್ನುವ ಕಾರಣಕ್ಕೆ ನ್ಯಾಯಾಲಯ ಮರುಬಿಡ್‌ಗೆ ಒಪ್ಪಿಗೆ ನೀಡಿದೆ.
ಪತಂಜಲಿ ಆಯುರ್ವೇದ ಎಫ್‌ಎಂಸಿಜಿ ಕಂಪನಿಯಾಗಿದೆ. ಇಂಥ ಕಂಪನಿ ರಕ್ಷಣಾ ಕೇಂದ್ರಿತ ಸಾಫ್ಟ್‌ವೇರ್ ಸಲ್ಯೂಷನ್‌ಗಳ ನೀಡುವ ಹಾಗೂ ಉತ್ಪನ್ನ ತಯಾರಿಸುವ ಕಂಪನಿಯ ಖರೀದಿಯ ಮೇಲೆ ಆಸಕ್ತಿ ಮೂಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. 1989 ರಲ್ಲಿ ಕಮಲ್ ಕೆ ಸಿಂಗ್ ಅವರಿಂದ ಸ್ಥಾಪನೆಯಾಗಿದ್ದ ರೋಲ್ಟಾ ಇಂಡಿಯಾ ಜಿಐಎಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಜಿಯೋಸ್ಪೇಷಿಯಲ್ ಸೇವೆಗಳಲ್ಲಿ ವ್ಯವಹಾರ ಮಾಡುತ್ತದೆ. ಕಂಪನಿಯು ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್‌ನೊಂದಿಗಿನ ಒಕ್ಕೂಟದ ಭಾಗವಾಗಿದೆ ಮತ್ತು 2015 ರಲ್ಲಿ ರಕ್ಷಣಾ ಸಚಿವಾಲಯದಿಂದ 50,000 ಕೋಟಿ ರೂ ಮೌಲ್ಯದ ಬ್ಯಾಟಲ್‌ಫೀಲ್ಡ್ ನಿರ್ವಹಣಾ ವ್ಯವಸ್ಥೆ ಯೋಜನೆಗೆ ಅಭಿವೃದ್ಧಿ ಏಜೆನ್ಸಿಯಾಗಿ ಆಯ್ಕೆಯಾಗಿದೆ.
ಆದರೆ, ಈ ಯೋಜನೆಯನ್ನು 2018ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಅದರ ಬೆನ್ನಲ್ಲಿಯೇ ರೋಲ್ಟಾ ಇಂಡಿಯಾ ಸಾಲದ ಸುಳಿಯಲ್ಲಿ ಮುಳುಗಿ ಹೋಗಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎನ್‌ಸಿಎಲ್‌ಟಿ ಮುಂಬೈ ಪೀಠದ ಮುಂದೆ ಅರ್ಜಿ ಸಲ್ಲಿಸಿತ್ತು. ಇದರ ಬೆನ್ನಲ್ಲಿಯೇ ರೋಲ್ಟಾ ಇಂಡಿಯಾ ಸೆಪ್ಟೆಂಬರ್ 2018 ರಲ್ಲಿ ದಿವಾಳಿತನದ ಅರ್ಜಿ ಸಲ್ಲಿಸಿ ನ್ಯಾಯಾಲಯದ ಎದುರು ಬಂದಿತ್ತು. ರೋಲ್ಟಾ ಇಂಡಿಯಾ ಸುಮಾರು 14,000 ಕೋಟಿ ರೂ.ಗಳ ಒಟ್ಟು ಸಾಲವನ್ನು ಹೊಂದಿದೆ. ಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟಕ್ಕೆ ಒಟ್ಟು 7,100 ಕೋಟಿ ರೂ ಮತ್ತು ಸಿಟಿಗ್ರೂಪ್ ನೇತೃತ್ವದ ಅಸುರಕ್ಷಿತ ವಿದೇಶಿ ಬಾಂಡ್ ಹೊಂದಿರುವವರಿಗೆ 6,699 ಕೋಟಿ ರೂಪಾಯಿ ಹಣ ನೀಡಬೇಕಿದೆ.
ಬಾಬಾ ರಾಮ್‌ದೇವ್ ಆಗಿಬಿಟ್ರಲ್ಲಾ ಧನುಷ್! ಏನಪ್ಪಾ ವಿಷ್ಯ ಅಂತಿದ್ದಾರೆ ಫ್ಯಾನ್ಸ್
ಇನ್ನು ಪತಂಜಲಿ ಆಯುರ್ವೇದ ಬಿಡ್ ಮಾಡಿದ್ದರಲ್ಲಿ ಪ್ರಮುಖ ಅಂಶವಿದೆ. ರೋಲ್ಟಾ ಇಂಡಿಯಾದ ಸಾಫ್ಟ್‌ವೇರ್ ವಿಭಾಗಕ್ಕಿಂತ ಈ ಕಂಪನಿ ಹೊಂದಿರುವ ರಿಯಲ್ ಎಸ್ಟೇಟ್ ಆಸ್ತಿಯ ಮೇಲೆ ಪತಂಜಲಿ ಕಣ್ಣಿಟ್ಟು ದೊಡ್ಡ ಮಟ್ಟದ ಬಿಡ್ ಮಾಡಿದೆ. ಬಿಡ್ ಮಾಡಿರುವ ಬಹುತೇಕ ಕಂಪನಿಗಳು ಕೂಡ ಇದೇ ಉದ್ದೇಶ ಹೊಂದಿವೆ. ಕಂಪನಿಯು ಮುಂಬೈ, ಕೋಲ್ಕತ್ತಾ ಮತ್ತು ವಡೋದರಾದಲ್ಲಿ ಪ್ರಧಾನ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹೊಂದಿದೆ. ಮುಂಬೈನಲ್ಲಿ, ಇದು ಸುಮಾರು 40,000 ಚದರ ಅಡಿಗಳ ಫ್ರೀಹೋಲ್ಡ್ ಕಟ್ಟಡವನ್ನು ಹೊಂದಿದೆ, 1 ಲಕ್ಷ ಚದರ ಅಡಿ ವಿಸ್ತೀರ್ಣದ ನಾಲ್ಕು ಗುತ್ತಿಗೆ ಕಟ್ಟಡಗಳನ್ನು (ಒಟ್ಟು) MIDC, ಅಂಧೇರಿ ಪೂರ್ವ (ಮುಂಬೈ)ದಲ್ಲಿ ಹೊಂದಿದೆ. SEEPZ, ಅಂಧೇರಿ ವೆಸ್ಟ್ (ಮುಂಬೈ) ನಲ್ಲಿ ಒಟ್ಟು 65,000 ಚದರ ಅಡಿ ಪ್ರದೇಶವನ್ನು ಒಳಗೊಂಡಿರುವ ಎಂಟು ಗುತ್ತಿಗೆ ಘಟಕಗಳನ್ನು ರೋಲ್ಟಾ ಇಂಡಿಯಾ ಹೊಂದಿದೆ. ವಸತಿ ಪ್ರಾಪರ್ಟಿಗಳಲ್ಲಿ, ಇದು ಲೇಕ್ ಹೋಮ್ಸ್ ಕಾಂಪ್ಲೆಕ್ಸ್, ಪೊವಾಯಿ (ಮುಂಬೈ) ನಲ್ಲಿ ಸುಮಾರು 1,300 ಚದರ ಅಡಿಗಳ ಆರು ಫ್ಲಾಟ್‌ಗಳನ್ನು ಹೊಂದಿದೆ.
ಅಲೋಪತಿಯಲ್ಲಿ ಕ್ಯಾನ್ಸರ್, ಹೈ ಬಿಪಿ, ಮಧುಮೇಹಕ್ಕೆ ಔಷಧಿ ಇಲ್ಲ: ಮತ್ತೆ ವಿವಾದ ಸೃಷ್ಟಿಸಿದ ಬಾಬಾ ರಾಮ್‌ದೇವ್..!
ಮುಂಬೈ ಜೊತೆಗೆ, ಇದು ಕೋಲ್ಕತ್ತಾದ ಲಾರ್ಡ್ ಸಿನ್ಹಾ ರಸ್ತೆಯಲ್ಲಿ ವಾಣಿಜ್ಯ ಕಚೇರಿ ಘಟಕವನ್ನು ಹೊಂದಿದೆ (2,000 ಚದರ ಅಡಿ ಪ್ರದೇಶಕ್ಕಿಂತ ಹೆಚ್ಚು) ಮತ್ತು ವಡೋದರದ ಆರ್‌ಸಿ ದತ್ ರಸ್ತೆಯಲ್ಲಿ ಎರಡು ವಾಣಿಜ್ಯ ಕಚೇರಿ ಘಟಕಗಳನ್ನು ಹೊಂದಿದೆ.