ಪಾನ್ ಮಸಾಲ, ತಂಬಾಕು ಉತ್ಪಾದಕರಿಗೆ ತೆರಿಗೆ ವಂಚಿಸದಂತೆ ಮೂಗುದಾರ; ಈ ಕೆಲ್ಸ ಮಾಡದಿದ್ರೆ ಬೀಳುತ್ತೆ ಒಂದು ಲಕ್ಷ ದಂಡ
ಪಾನ್ ಮಸಾಲ, ತಂಬಾಕು ಉತ್ಪಾದಕರು ಪ್ಯಾಕಿಂಗ್ ಯಂತ್ರಗಳ ಮಾಹಿತಿಯನ್ನು ಜಿಎಸ್ ಟಿ ಅಡಿಯಲ್ಲಿ ನೋಂದಾಯಿಸೋದು ಅಗತ್ಯ. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಒಂದು ಲಕ್ಷ ರೂ. ತನಕ ದಂಡ ಬೀಳುವ ಜೊತೆಗೆ ಯಂತ್ರಗಳು ಜಪ್ತಿಯಾಗೋ ಸಾಧ್ಯತೆ ಕೂಡ ಇದೆ.
ನವದೆಹಲಿ (ಫೆ.5): ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಪ್ರಾಧಿಕಾರದಲ್ಲಿ ಪ್ಯಾಕಿಂಗ್ ಯಂತ್ರಗಳನ್ನು ನೋಂದಣಿ ಮಾಡಿಸದ ಪಾನ್ ಮಸಾಲಾ ಹಾಗೂ ತಂಬಾಕು ಉತ್ಪನ್ನಗಳ ತಯಾರಿಕರಿಗೆ 1ಲಕ್ಷ ರೂ. ದಂಡ ಬೀಳುವ ಸಾಧ್ಯತೆಯಿದೆ. ಹಾಗೆಯೇ ಈ ರೀತಿ ನೋಂದಣಿಯಾಗದ ಯಂತ್ರಗಳನ್ನು ಜಿಎಸ್ ಟಿ ಇಲಾಖೆ ಜಪ್ತಿ ಮಾಡುವ ಸಾಧ್ಯತೆ ಕೂಡ ಇದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ. ನೋಂದಣಿಯಾಗದ ಪ್ರತಿ ಯಂತ್ರಕ್ಕೆ ಜಿಎಸ್ ಟಿ ಅಧಿಕಾರಿಗಳು 1ಲಕ್ಷ ರೂ. ದಂಡ ವಿಧಿಸಲಿದ್ದಾರೆ. ತಂಬಾಕು ಉತ್ಪಾದನಾ ವಲಯದಲ್ಲಿ ತೆರಿಗೆ ಸೋರಿಕೆ ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕೇಂದ್ರೀಯ ಜಿಎಸ್ ಟಿ ಕಾಯ್ದೆಗೆ ಹಣಕಾಸು ಮಸೂದೆ 2024 ಕೆಲವೊಂದು ತಿದ್ದುಪಡಿಗಳನ್ನು ತಂದಿದೆ. 2024-25ನೇ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರೀಯ ಸರಕು ಹಾಗೂ ಸೇವೆಗಳ ತೆರಿಗೆ ಕಾಯ್ದೆಗೆ ಸೆಕ್ಷನ್ 122 ಪರಿಚಯಿಸಲಾಗಿದೆ.
ಜಿಎಸ್ ಟಿ ಮಂಡಳಿ ಶಿಫಾರಸ್ಸಿನ ಆಧಾರದಲ್ಲಿ ತಂಬಾಕು ಉತ್ಪಾದಕರು ಯಂತ್ರಗಳನ್ನು ನೋಂದಾಯಿಸಲು ವಿಶೇಷ ಪ್ರಕ್ರಿಯೆ ರೂಪಿಸಿ ಆ ಬಗ್ಗೆ ಕಳೆದ ವರ್ಷ ಅಧಿಸೂಚನೆ ಹೊರಡಿಸಲಾಗಿತ್ತು. ಇನ್ನು ಯಂತ್ರಗಳನ್ನು ನೋಂದಾಯಿಸದ ಪ್ರಕರಣಗಳಲ್ಲಿ ಜಪ್ತಿ ಹಾಗೂ ವಶಪಡಿಸಿಕೊಳ್ಳಲು ಕೂಡ ಅವಕಾಶ ನೀಡಲಾಗಿದೆ. ಕಳೆದ ವರ್ಷದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಪಾನ್ ಮಸಾಲಾ, ಗುಟ್ಖಾ ಹಾಗೂ ಅದೇ ರೀತಿಯ ಉತ್ಪನ್ನಗಳ ಯಂತ್ರಗಳ ನೋಂದಣಿ ನಡೆಸಬೇಕು. ಇದರಿಂದ ಅವರ ಉತ್ಪಾದನಾ ಸಾಮರ್ಥ್ಯದ ಮೇಲೆ ನಿಗಾವಿಡಲು ಸಾಧ್ಯವಾಗುತ್ತದೆ ಎಂದು ತೀರ್ಮಾನಿಸಲಾಗಿತ್ತು ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತಿಳಿಸಿದ್ದರು.
PAN Card ಕಳೆದು ಹೋದ್ರೆ ಏನ್ ಮಾಡ್ಬೇಕು?ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
'ಆದರೆ, ಈ ಹಿಂದೆ ಈ ನಿಯಮ ಜಾರಿ ಮಾಡಲಾಗಿದ್ದರೂ ನೋಂದಣಿ ಮಾಡಲು ವಿಫಲರಾದ ಸಂದರ್ಭದಲ್ಲಿ ಯಾವುದೇ ದಂಡ ವಿಧಿಸುತ್ತಿರಲಿಲ್ಲ. ಹೀಗಾಗಿ ನಿರ್ದಿಷ್ಟ ದಂಡ ವಿಧಿಸಬೇಕು ಎಂದು ಮಂಡಳಿ ನಿರ್ಧಾರ ಮಾಡಿತು. ಇದೇ ಕಾರಣಕ್ಕೆ ಹಣಕಾಸು ಮಸೂದೆಯಲ್ಲಿ ಯಂತ್ರಗಳ ನೋಂದಣಿ ಮಾಡಿಸದಿದ್ದರೆ ಒಂದು ಲಕ್ಷ ರೂ. ತನಕ ದಂಡ ವಿಧಿಸಲು ನಿರ್ಧರಿಸಲಾಗಿದೆ' ಎಂದು ಮಲ್ಹೋತ್ರ ತಿಳಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಪಾನ್ ಮಸಾಲ ಹಾಗೂ ಗುಟ್ಖಾ ಉದ್ಯಮಕ್ಕೆ ಸಂಬಂಧಿಸಿ ರಾಜ್ಯ ಹಣಕಾಸು ಸಚಿವರ ಪ್ಯಾನಲ್ ವರದಿಯನ್ನು ಅನುಮೋದಿಸಲಾಯಿತು.
ಪಾನ್ ಮಸಾಲ ಹಾಗೂ ತಂಬಾಕು ಉತ್ಪನ್ನಗಳ ಮೇಲಿನ ಪರಿಹಾರ ಸುಂಕ ವಿಧಿಸುವ ಕ್ರಮವನ್ನು ಬದಲಾಯಿಸುವಂತೆಯೂ ಸಚಿವರ ಸಮೂಹ ಶಿಫಾರಸ್ಸು ಮಾಡಿತ್ತು. ಇದರ ಬೆನ್ನಲ್ಲೇ ಸರ್ಕಾರ ಹಣಕಾಸು ಮಸೂದೆ 2023ಕ್ಕೆ ತಿದ್ದುಪಡಿ ತಂದಿದೆ. ಅದರ ಅನ್ವಯ ಜಿಎಸ್ ಟಿ ಪರಿಹಾರ ಸುಂಕವನ್ನು ಪಾನ್ ಮಸಾಲ ಹಾಗೂ ಇತರ ವಿಧದ ತಂಬಾಕು ಉತ್ಪನ್ನಗಳ ಮೇಲೆ ಅತ್ಯಧಿಕ ರಿಟೇಲ್ ಮಾರಾಟ ದರದಲ್ಲಿ ವಿಧಿಸಲಾಗುತ್ತಿದೆ.
ಈಗಾಗಲೇ ಇರುವ ಪ್ಯಾಕಿಂಗ್ ಯಂತ್ರಗಳು, ಹೊಸದಾಗಿ ಅಳವಡಿಸಿರುವ ಯಂತ್ರಗಳು ಹಾಗೂ ಅವುಗಳ ಪ್ಯಾಕಿಂಗ್ ಸಾಮರ್ಥ್ಯದ ಮಾಹಿತಿಗಳನ್ನು ಜಿಎಸ್ ಟಿ ಎಸ್ ಆರ್ ಎಂ-1 ಅರ್ಜಿಯಲ್ಲಿ ಒದಗಿಸಬೇಕು. ಆದರೆ, ಈ ಮಾಹಿತಿ ಒದಗಿಸದಿದ್ರೆ ಯಾವುದೇ ದಂಡ ವಿಧಿಸುತ್ತಿರಲಿಲ್ಲ. ಆದರೆ, ಸೆಕ್ಷನ್ 122 ಪರಿಚಯಿಸುವ ಮೂಲಕ ದಂಡ ವಿಧಿಸುವ ಕ್ರಮವನ್ನು ಪರಿಚಯಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಿದ್ರೆ ಹಾಗೂ ಯಂತ್ರವನ್ನು ದಂಡ ಪಾವತಿಸುವಂತೆ ನೋಟಿಸ್ ಸಿಕ್ಕಿದ ಮೂರು ದಿನಗಳೊಳಗೆ ನೋಂದಣಿ ಮಾಡಿಸಿದ್ರೆ ಆಗ ಆ ಯಂತ್ರವನ್ನು ವಶಪಡಿಸಿಕೊಳ್ಳಲಾಗುವುದಿಲ್ಲ.
ಪಿಎಂ ಕಿಸಾನ್, ಶ್ರಮಯೋಗಿ ಮಾನಧನ್.. 2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಈ ಯೋಜನೆಗಳು!
ಇನ್ನು ಜಿಎಸ್ ಟಿ ಮಂಡಳಿ ನಿರ್ಧಾರ ಆಧರಿಸಿ ಸಿಬಿಐಸಿ ಈ ವರ್ಷದ ಜನವರಿಯಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ಪಾನ್ ಮಸಾಲ ಹಾಗೂ ತಂಬಾಕು ಉತ್ಪಾದಕರು ಪ್ಯಾಕಿಂಗ್ ಯಂತ್ರಗಳು ಹಾಗೂ ರಿಟರ್ನ್ಸ್ ಫೈಲಿಂಗ್ ಮಾಡಲು ವಿಶೇಷ ಪ್ರಕ್ರಿಯೆಯನ್ನು ಸೂಚಿಸಲಾಗಿದೆ. ಈ ಅಧಿಸೂಚನೆ ಅನ್ವಯ ಎಲ್ಲ ತಂಬಾಕು ಉತ್ಪನ್ನಗಳ ಉತ್ಪಾದಕರು ಪ್ಯಾಕಿಂಗ್ ಯಂತ್ರಗಳ ಮಾಹಿತಿಗಳನ್ನು ಅಧಿಸೂಚನೆ ಜಾರಿಗೆ ಬಂದ 30 ದಿನಗಳೊಳಗೆ ಅಥವಾ 2024ರ ಮೇ 1ರೊಳಗೆ ಜಿಎಸ್ ಟಿ ಪೋರ್ಟಲ್ ನಲ್ಲಿ ನೀಡಬೇಕು.