ರಿಯಾದ್(ಅ.23): 'ನಮ್ ಹತ್ರ ದುಡ್ಡಿಲ್ಲ, ನೀವು ಸಾಲ ಕೊಟ್ರೆ ದೇಶ ನಡೆಯುತ್ತೆ. ದಯವಿಟ್ಟು ಪಾಕಿಸ್ತಾನಕ್ಕೆ ಸಾಲ ಕೊಡಿ..' ಇದು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿಶ್ವ ಸಮುದಾಯದ ಮುಂದೆ ಪರಿಪರಿಯಾಗಿ ಬೇಡಿಕೊಂಡ ಪರಿ.

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನವನ್ನು ಮುನ್ನಡೆಸಲು ವಿದೇಶಿ ಸಾಲದ ಅವಶ್ಯಕತೆ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ರಿಯಾದ್‌ನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಇಮ್ರಾನ್, ಪಾಕಿಸ್ತಾನದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದ್ದು, ರಾಷ್ಟ್ರವನ್ನು ಮುನ್ನಡೆಸಲು ಆರ್ಥಿಕ ಸಹಾಯ ಬೇಕಾಗಿದೆ ಎಂದು ಮೊರೆ ಇಟ್ಟರು.

ಸಾಲಕ್ಕಾಗಿ ನಾವು ಈಗಾಗಲೇ ಐಎಂಎಫ್ ಮುಂದೆ ಮೊರೆ ಇಟ್ಟಿದ್ದು, ಪಾಕಿಸ್ತಾನದ ಪರ ಸಹಾನುಭೂತಿ ಇರುವ ರಾಷ್ಟ್ರಗಳೂ ಕೂಡ ಆರ್ಥಿಕ ಸಹಾಯಕ್ಕಾಗಿ ಮುಂದೆ ಬರಬೇಕು ಎಂದು ಇಮ್ರಾನ್ ಮನವಿ ಮಾಡಿದ್ದಾರೆ.