Petrol Price in Pakistan : ಪಾಕಿಸ್ತಾನ ಸರ್ಕಾರದಿಂದ ಜನತೆಯ ಮೇಲೆ "ಪೆಟ್ರೋಲ್ ಬಾಂಬ್", ಒಂದೇ ದಿನದಲ್ಲಿ 12.03 ರೂ ಏರಿಕೆ!
ಪಾಕಿಸ್ತಾನದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ ಪೆಟ್ರೋಲ್ ದರ
ಒಂದು ಲೀಟರ್ ಪೆಟ್ರೋಲ್ ಗೆ 160 ರೂಪಾಯಿ
ಮಧ್ಯರಾತ್ರಿಯಿಂದಲೇ ಪೆಟ್ರೋಲ್ ದರದಲ್ಲಿ ಏರಿಕೆ ಮಾಡಿದ ಪಾಕಿಸ್ತಾನ
ಇಸ್ಲಾಮಾಬಾದ್ (ಫೆ.16): ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಸಲ್ಲದ ವಿಚಾರಗಳಿಗೆ ಮೂಗುತೂರಿಸುವ ಕೆಲಸ ಮಾಡುವ ಪಾಕಿಸ್ತಾನ (Pakistan), ತನ್ನದೇ ದೇಶದಲ್ಲಿ ಜನರ ಜೀವನವನ್ನು ಇನ್ನಷ್ಟು ದಯನೀಯಗೊಳಿಸುವ ಕಾರ್ಯಕ್ಕೆ ಇಳಿದಿದೆ. ಸರ್ಕಾರದ ಬೊಕ್ಕಸವನ್ನು ತುಂಬಿಸುವ ಪ್ರಯತ್ನದಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ದೇಶದ ಜನರ ಮೇಲೆ "ಪೆಟ್ರೋಲ್ ಬಾಂಬ್" ಹೇರಿದೆ. ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ (Petroleum Products) ಮೇಲೆ ದಾಖಲೆಯ 12.03 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲಿಯೇ ಪಾಕಿಸ್ತಾನದಲ್ಲಿ ಜನಾಕ್ರೋಶ ಇನ್ನಷ್ಟು ಹೆಚ್ಚಳವಾಗಿದೆ.
ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್‌ಗೆ 12.03 ರೂಪಾಯಿ ಮತ್ತು ಹೈಸ್ಪೀಡ್ ಡೀಸೆಲ್ ಬೆಲೆ ಲೀಟರ್‌ಗೆ 9.53 ರೂಪಾಯಿ ದಾಖಲೆ ಮಟ್ಟದ ಏರಿಕೆ ಮಾಡಲಾಗಿದ್ದರೆ, ಲೈಟ್ ಹೈಸ್ಪೀಡ್ ಡೀಸೆಲ್ ಬೆಲೆ 9.43 ರೂಪಾಯಿ ಏರಿಕೆ ಕಂಡಿದೆ. ಇನ್ನು ಜನಬಳಕೆಯ ಸೀಮೆಎಣ್ಣೆ ಮೇಲೆ 10,08 ರೂಪಾಯಿ ಏರಿಕೆ ಮಾಡಿದೆ ಎಂದು ಪಾಕಿಸ್ತಾನದ ಪತ್ರಿಕೆಗಳು ವರದಿ ಮಾಡಿವೆ.
ಹೊಸ ಏರಿಕೆಯೊಂದಿಗೆ, ಪೆಟ್ರೋಲ್ ಬೆಲೆ ಲೀಟರ್‌ಗೆ 147.82 ರೂಪಾಯಿಯಿಂದ 159.86 ರೂಪಾಯಿ ಆಗಿದ್ದರೆ, ಹೈಸ್ಪೀಡ್ ಡೀಸೆಲ್ ಲೀಟರ್‌ಗೆ 144.62 ರೂಪಾಯಿಯಿಂದ 154.15 ರೂಪಾಯಿಗೆ ಏರಿಕೆಯಾಗಿದೆ, ಲಘು ಡೀಸೆಲ್ ತೈಲವು ಲೀಟರ್‌ಗೆ 114.54 ರೂಪಾಯಿಯಿಂದ 123.97 ರೂಪಾಯಿಗೆ ಏರಿಕೆಯಾಗಿದೆ. ಸೀಮೆ ಎಣ್ಣೆ ಲೀಟರ್‌ಗೆ 116.48 ರೂಪಾಯಿಂದ 126.56 ರೂಪಾಯಿಗೆ ಹೆಚ್ಚಿಸಲಾಗಿದೆ.
ಇತ್ತೀಚಿನ ಏರಿಕೆಯೊಂದಿಗೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಮಂಗಳವಾರ ಮಧ್ಯರಾತ್ರಿಯಿಂದ ಹೊಸ ಬೆಲೆಗಳು ಅನ್ವಯವಾಗಿದೆ. ಹೊಸ ಇಂಧನ ಬೆಲೆಗಳು ಫೆಬ್ರವರಿ 28 ರವರೆಗೆ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಾಖಲೆಯ ಏರಿಕೆಯಲ್ಲಿದೆ. ಪ್ರಸ್ತುತ 2014ರ ನಂತರದ ಗರಿಷ್ಠ ಮಟ್ಟದಲ್ಲಿದೆ ಎಂದು ಪಾಕಿಸ್ತಾನ ಸರ್ಕಾರದ ಹಣಕಾಸು ವಿಭಾಗ ಹೇಳಿದೆ. ಈ ವರ್ಷದ ಆರಂಭದಿಂದಲೂ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದ್ದರೂ, ಪ್ರಧಾನಿ ಇಮ್ರಾನ್ ಖಾನ್ (Prime Minister Imran Khan) ಜನವರಿ 31ರವರೆಗೂ ಬೆಲೆ ಏರಿಕೆಯನ್ನು ಮಾಡದೇ ಇರುವ ಬಗ್ಗೆ ತೀರ್ಮಾನಿಸಿದ್ದರು. ಆದರೆ, ಏರಿಕೆ ಹೆಚ್ಚಳವಾಗುತ್ತಿರುವ ಕಾರಣ ಅನಿವಾರ್ಯವಾಗಿ ಈ ಹೊರೆಯನ್ನು ಜನರ ಮೇಲೆ ಹೇರಲಾಗುತ್ತಿದೆ ಎಂದು ತಿಳಿಸಿದೆ. ಗ್ರಾಹಕರಿಗೆ ಪರಿಹಾರವನ್ನು ಒದಗಿಸುವ ಸಲುವಾಗಿ, ಸರ್ಕಾರವು ಶೂನ್ಯ ಶೇಕಡಾ ಮಾರಾಟ ತೆರಿಗೆಯನ್ನು ವಿಧಿಸಿದೆ ಹಾಗೂ ಬಜೆಟ್ ಗುರಿಗಳ ವಿರುದ್ಧ ಪೆಟ್ರೋಲಿಯಂ ಲೆವಿ ದರವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಸರ್ಕಾರಕ್ಕೆ 15 ದಿನಗಳಲ್ಲಿ 35 ಬಿಲಿಯನ್ ಆದಾಯ ನಷ್ಟವಾಗಲಿದೆ ಎಂದು ಹೇಳಿದೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ 15 ದಿನಗಳ ಪರಿಶೀಲನೆಯಲ್ಲಿ, ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗೆ ಅನುಗುಣವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವ ಶಿಫಾರಸುಗಳನ್ನು ಪ್ರಧಾನಿ ಪರಿಗಣಿಸಿದ್ದಾರೆ ಎಂದು ಹಣಕಾಸು ವಿಭಾಗ ತಿಳಿಸಿದೆ. "ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳದ ಹೊರತಾಗಿಯೂ, ಪೆಟ್ರೋಲಿಯಂ ಲೆವಿ ಮತ್ತು ಮಾರಾಟ ತೆರಿಗೆಯನ್ನು ಕನಿಷ್ಠಕ್ಕೆ ಇರಿಸಲಾಗಿದೆ" ಎಂದು ತಿಳಿಸಿದೆ.
ಇನ್ನು, ಪಾಕಿಸ್ತಾನದಲ್ಲಿ ಹಣಕಾಸು ಹಾಗೂ ಬ್ಯಾಂಕ್ ಬಿಕ್ಕಟ್ಟು ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಾಲ್ತಿ ಖಾತೆ ಕೊರತೆಯು $9.1 ಶತಕೋಟಿಗೆ ವಿಸ್ತರಿಸಿದೆ -- ಇದು ಸ್ಟೇಟ್ ಬ್ಯಾಂಕ್ ಗವರ್ನರ್ ಡಾ ರೆಜಾ ಬಕಿರ್ ಅವರು ಪೂರ್ಣ ಹಣಕಾಸು ವರ್ಷದಲ್ಲಿ ಅಂದಾಜು ಮಾಡಿದ ಮಟ್ಟಕ್ಕೆ ಸರಿಸುಮಾರು ಸಮಾನವಾಗಿದೆ. 2021-22ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯು $6.5 ಶತಕೋಟಿಯಿಂದ $9.5 ಶತಕೋಟಿ ವ್ಯಾಪ್ತಿಯಲ್ಲಿ ಉಳಿಯುತ್ತದೆ ಎಂದು ಕಳೆದ ವರ್ಷ ಆಗಸ್ಟ್‌ನಲ್ಲಿ ಡಾ.ಬಾಕಿರ್ ಹೇಳಿದ್ದರು. ಆದರೆ ವಿತ್ತೀಯ ವರ್ಷದ ಮುಕ್ತಾಯಕ್ಕೆ ಆರು ತಿಂಗಳ ಮೊದಲು ಮಿತಿಯನ್ನು ಬಹುತೇಕವಾಗಿ ಪಾಕಿಸ್ತಾನ ದಾಟಿದೆ.