ಭಾರತದಲ್ಲಿ ಒಪನ್ ಎಐ ಮೊದಲ ಉದ್ಯೋಗಿ ನೇಮಕ; ಪ್ರಾಗ್ಯ ಮಿಶ್ರಾ ಚಾಟ್ ಜಿಪಿಟಿ ಪಬ್ಲಿಕ್ ಪಾಲಿಸಿ ಮುಖ್ಯಸ್ಥೆ
ಭಾರತದಲ್ಲಿ ಒಪನ್ ಎಐ ಮೊದಲ ಉದ್ಯೋಗಿಯಾಗಿ ಪ್ರಾಗ್ಯ ಮಿಶ್ರಾ ನೇಮಕಗೊಂಡಿದ್ದಾರೆ. ಅವರನ್ನು ಪಬ್ಲಿಕ್ ಪಾಲಿಸಿ ಮುಖ್ಯಸ್ಥೆಯಾಗಿ ನೇಮಿಸಲಾಗಿದೆ.
ನವದೆಹಲಿ (ಏ.19): ಚಾಟ್ ಜಿಪಿಟಿ ಮಾತೃಸಂಸ್ಥೆ ಒಪನ್ ಎಐ ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಕ ಮಾಡಿಕೊಂಡಿದೆ. ಸರ್ಕಾರದ ಜೊತೆಗಿನ ಸಂಬಂಧಗಳ ಮುಖ್ಯಸ್ಥ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ. ಇಂದು (ಏ.19ರಂದು) ಭಾರತದ ಲೋಕಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಹೊಸ ಸರ್ಕಾರ ರಚನೆಯಾಗಲಿದ್ದು, ದೇಶದಲ್ಲಿ ಎಐ ನಿಯಮಗಳನ್ನು ಜಾರಿಗೆ ತರಲಿದೆ. ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಹಾಗೂ ಪಾಲುದಾರಿಕೆಯ ನೇತೃತ್ವ ವಹಿಸಲು ಪ್ರಾಗ್ಯ ಮಿಶ್ರಾ ಅವರನ್ನು ಮೈಕ್ರೋಸಾಫ್ಟ್ ಬೆಂಬಲಿತ ಒಪನ್ ಎಐ ನೇಮಕ ಮಾಡಿಕೊಂಡಿದೆ. 39 ವರ್ಷದ ಮಿಶ್ರಾ, ಈ ಹಿಂದೆ ಟ್ರೂಕಾಲರ್ ನಲ್ಲಿ ಸಾರ್ವಜನಿಕ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 2018ರಲ್ಲಿ ಮೆಟಾದಲ್ಲಿ ತಪ್ಪು ಮಾಹಿತಿಗಳ ವಿರುದ್ಧ ಅವರು ವಾಟ್ಸಾಪ್ ಆಂದೋಲನ ಪ್ರಾರಂಭಿಸಿದ್ದರು. ವರದಿಗಳ ಪ್ರಕಾರ ಈ ತಿಂಗಳ ಕೊನೆಯಲ್ಲಿ ಮಿಶ್ರಾ ಒಪನ್ ಎಐ ಸೇರಲಿದ್ದಾರೆ.
ಒಪನ್ ಎಐಯಲ್ಲಿ ಪ್ರಾಗ್ಯ ಮಿಶ್ರಾ ಕಾರ್ಯವೇನು?
ಸರ್ಕಾರದ ಜೊತೆಗಿನ ಸಂಬಂಧಗಳ ಮುಖ್ಯಸ್ಥೆಯಾಗಿ ಪ್ರಾಗ್ಯ ಮಿಶ್ರಾ ಅವರನ್ನು ಒಪನ್ ಎಐ ನೇಮಕ ಮಾಡಿಕೊಂಡಿದೆ. ಈ ಮೂಲಕ ಅವರು ಭಾರತದಲ್ಲಿ ಒಪನ್ ಎಐಗೆ ನೇಮಕಗೊಂಡ ಮೊದಲ ಉದ್ಯೋಗಿಯಾಗಿದ್ದಾರೆ. ಈ ತನಕ ಕಂಪನಿ ಮಿಶ್ರಾ ಅವರ ನೇಮಕವನ್ನು ಸಾರ್ವಜನಿಕವಾಗಿ ಪ್ರಕಟಿಸದಿದ್ದರೂ, ಅವರು ಭಾರತದಲ್ಲಿ ಕಂಪನಿಯ ಸಾರ್ವಜನಿಕ ನೀತಿ ವ್ಯವಹಾರಗಳು ಹಾಗೂ ಸಹಭಾಗಿತ್ವದ ನೇತೃತ್ವ ವಹಿಸಲಿದ್ದಾರೆ.
ಡೇಂಜರಸ್ AI! ಯಾವ್ಯಾವ ದೇಶಗಳು ಚಾಟ್ ಜಿಪಿಟಿ ಬ್ಯಾನ್ ಮಾಡಿದೆ ನೋಡಿ..
ಇದಕ್ಕೂ ಮುನ್ನ ಪ್ರಾಗ್ಯ ಯಾವೆಲ್ಲ ಹುದ್ದೆ ನಿರ್ವಹಿಸಿದ್ದರು?
2021ರ ಜುಲೈನಿಂದ ಪ್ರಾಗ್ಯ ಮಿಶ್ರಾ ಟ್ರೂಕಾಲರ್ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಸರ್ಕಾರದ ಸಚಿವಾಲಯಗಳು, ಪ್ರಮುಖ ಷೇರುದಾರರು, ಹೂಡಿಕೆದಾರರು ಹಾಗೂ ಮಾಧ್ಯಮ ಪಾಲುದಾರರ ಜೊತೆಗೆ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಆಕೆ ಮೆಟಾ ಪ್ಲಾಟ್ ಫಾರ್ಮ್ ಇಂಕ್ ಜೊತೆಗೆ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಇನ್ನು 2018ರಲ್ಲಿ ತಪ್ಪು ಮಾಹಿತಿಗಳ ವಿರುದ್ಧ ಮಿಶ್ರಾ ವಾಟ್ಸಾಪ್ ಆಂದೋಲನ ಕೂಡ ನಡೆಸಿದ್ದರು. ಇನ್ನು ಅವರು ದೆಹಲಿಯಲ್ಲಿ ಅರ್ನಸ್ಟ್ ಹಾಗೂ ಯಂಗ್ ಹಾಗೂ ರಾಯಲ್ ಡ್ಯಾನಿಶ್ ಎಂಬೆಸಿ ಜೊತೆಗೆ ಕಾರ್ಯನಿರ್ವಹಿಸಿದ್ದರು.
ಪ್ರಾಗ್ಯ ಮಿಶ್ರಾ ಶಿಕ್ಷಣ ಪೂರ್ಣಗೊಳಿಸಿದ್ದು ಎಲ್ಲಿ?
ಪ್ರಾಗ್ಯ ಮಿಶ್ರಾ 2012ರಲ್ಲಿ ಅಂತಾರಾಷ್ಟ್ರೀಯ ಮ್ಯಾನೇಜ್ಮೆಂಟ್ ಇನ್ಸಿಟಿಟ್ಯೂಟ್ ನಿಂದ ಎಂಬಿಎ ಪದವಿ ಪೂರ್ಣಗೊಳಿಸಿದ್ದರು. ಆ ಬಳಿಕ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಇನ್ನು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಹಾಗೂ ಪಾಲಿಟಿಕಲ್ ಸೈನ್ಸ್ ನಿಂದ 'ಬಾರ್ಗೇನಿಂಗ್ ಹಾಗೂ ನೆಗೋಷಿಯೇಷನ್' ವಿಷಯದಲ್ಲಿ ಡಿಪ್ಲೊಮಾ ಕೂಡ ಪಡೆದಿದ್ದಾರೆ. ಪ್ರಾಗ್ಯ ಅವರು ಗಾಲ್ಫ್ ಕ್ರೀಡೆಯಲ್ಲಿ ಕೂಡ ಪರಿಣಿತರಾಗಿದ್ದು, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇನ್ನು ಪ್ರಗ್ಯಾ ಪಾಡ್ ಕಾಸ್ಟ್ ಕೂಡ ನಡೆಸಿಕೊಡುತ್ತಾರೆ.
ದಿವಾಳಿ ಅಂಚಿನಲ್ಲಿ ಚಾಟ್ ಜಿಪಿಟಿ ಮಾತೃ ಕಂಪನಿ ಓಪನ್‌ಎಐ
ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ವಿಚಾರದಲ್ಲಿ ಚಾಟ್ ಜಿಪಿಟಿಯ ಮೂಲ ಸಂಸ್ಥೆ ಓಪನ್ ಎಐ ಮುಂಚೂಣಿಯಲ್ಲಿದೆ. ಈ ಸಂಸ್ಥೆಯಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಅನೇಕ ವಿವಾದಗಳು ಸೃಷ್ಟಿಯಾಗಿದ್ದವು. ಚಾಟ್ ಜಿಪಿಟಿಯ ಮೂಲ ಸಂಸ್ಥೆ ಓಪನ್ ಎಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸ್ಯಾಮ್ ಆಲ್ಟ್‌ಮನ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆದರೆ, ಆ ಬಳಿಕ ಕಂಪನಿಯ ಆಂತರಿಕ ವಲಯದಲ್ಲಿ ಆಲ್ಟ್ ಮನ್ ಮರುನೇಮಕಕ್ಕೆ ಒತ್ತಾಯ ಹೆಚ್ಚಾದ ಬೆನ್ನಲ್ಲೇ ಅವರು ಮರಳಿ ಸಿಇಒ ಹುದ್ದೆಗೆ ನೇಮಕಗೊಂಡಿದ್ದರು.