Asianet Suvarna News Asianet Suvarna News

ಟ್ವೀಟ್‌ಗಳಿಂದ ತೈಲ ಸಮಸ್ಯೆಗೆ ಪರಿಹಾರ ಸಿಗತ್ತಾ?: ಜೇಟ್ಲಿ ಜಬರ್‌ದಸ್ತ್ ರಿಪ್ಲೈ!

ಫೇಸ್‌ಬುಕ್ ನಲ್ಲಿ ರಾಹುಲ್ ಗಾಂಧಿ ಕಾಲೆಳೆದ ಅರುಣ್ ಜೇಟ್ಲಿ! ಟ್ವೀಟ್‌ಗಳಿಂದ ತೈಲದರ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದಿಟ್ಟ ಉತ್ತರ! ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಸಿದ ಕೇಂದ್ರ! ಬಿಜೆಪಿಯೇತರ ರಾಜ್ಯದಲ್ಲೇಕೆ ಸುಂಕ ಇಳಿಸಿಲ್ಲ ಎಂದು ಪ್ರಶ್ನಿಸಿದ ಜೇಟ್ಲಿ

Oil Price Rise Cannot Be Solve With Tweets Says Arun Jaitley
Author
Bengaluru, First Published Oct 7, 2018, 11:47 AM IST

ನವದೆಹಲಿ(ಅ.7): ಟ್ವೀಟ್‌ಗಳಿಂದ ಅಥವಾ ಮಾಧ್ಯಮಗಳಿಗೆ ಹೇಳಿಕೆ ನೀಡುವುದರಿಂದ ತೈಲದರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ತಮ್ಮ ಫೇಸ್‌ಬುಕ್ ನಲ್ಲಿ ಈ ಕುರಿತು ಲೇಖನ ಬರೆದಿರುವ ಜೇಟ್ಲಿ, ಸರಣಿ ಟ್ವೀಟ್‌ಗಳಿಂದ ತೈಲದರ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ ಗಳ ಕುರಿತು ಪರೋಕ್ಷ ಪ್ರಸ್ತಾಪ ಮಾಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಸಿದ ಎರಡು ದಿನಗಳ ಬಳಿಕ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಈ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಸುಂಕ ಇಳಿಸಿದ ಬಳಿಕ ಹಲವು ರಾಜ್ಯ ಸರ್ಕಾರಗಳು ಸಹ ತೈಲದರವನ್ನು ಮತ್ತಷ್ಟು ಕಡಿಮೆ ಮಾಡಿದ್ದವು. 

ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ. ಹೀಗಾಗಿ, ಇದು ಗಂಭೀರ ವಿಚಾರ ಎಂದು ಬರೆದುಕೊಂಡಿರುವ ಜೇಟ್ಲಿ, ತೈಲ ಉತ್ಪಾದಿಸುವ ರಾಷ್ಟ್ರಗಳು ಉತ್ಪಾದನೆಯನ್ನು ಕಡಿಮೆ ಮಾಡಿವೆ. ಹೀಗಾಗಿ, ಬೇಡಿಕೆ ಹಾಗೂ ಪೂರೈಕೆ ನಡುವೆ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಅಲ್ಲದೆ, ತಮ್ಮ ರಾಜಕೀಯ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡ ಜೇಟ್ಲಿ, ಟ್ವೀಟ್‌ಗಳಿಂದ ಅಥವಾ ಮಾಧ್ಯಮಗಳಿಗೆ ಹೇಳಿಕೆ ನೀಡುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಕುಹುಕವಾಡಿದ್ದಾರೆ.

ಸರ್ಕಾರದ ವಿಮರ್ಶಕರು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗುವ ರಾಜಕೀಯ ಪರಿಣಾಮಗಳನ್ನು ಆನಂದಿಸುತ್ತಿದ್ದಾರೆ. ಇದು ಅವರ ಕಾಮೆಂಟ್‌ಗಳಿಂದಲೇ ಗೊತ್ತಾಗುತ್ತದೆ. ಇನ್ನು, ಬೆಲೆ ಇಳಿಕೆ ಮಾಡಿದ ಬಳಿಕ ವಿಪಕ್ಷಗಳು, ಇದು ಕೆಟ್ಟ ಅರ್ಥಶಾಸ್ತ್ರ ಎಂದು ಆರೋಪಿಸುತ್ತ ತಮ್ಮ ಮತ್ತೊಂದು ಮುಖವನ್ನು ತೋರಿಸಿವೆ ಎಂದು ಜೇಟ್ಲಿ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಯೇತರ ಆಡಳಿತ ರಾಜ್ಯಗಳು ಗ್ರಾಹಕರಿಗೆ ರಿಲೀಫ್‌ ನೀಡಿಲ್ಲ ಎಂದು ಆರೋಪಿಸಿರುವ ಸಚಿವರು, ಈ ನಡೆಯನ್ನು ಜನರು ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. 

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಸುಂಕವನ್ನು 2.5 ರೂ. ಇಳಿಸಿದ ಬಳಿಕ ರಾಜ್ಯ ಸರ್ಕಾರಗಳೂ ಬೆಲೆ ಇಳಿಸಲು ಕರೆ ನೀಡಿತ್ತು. ನಂತರ, 15 ರಾಜ್ಯಗಳು ಮತ್ತೆ 2.5 ರೂ. ಬೆಲೆ ಇಳಿಕೆ ಮಾಡಿದ್ದವು. ಈ ಪೈಕಿ, ಬಹುತೇಕ ಎನ್‌ಡಿಎ ಆಡಳಿತದಲ್ಲಿರುವ ರಾಜ್ಯಗಳೇ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios